ವಿಂಬಲ್ಡನ್ 2012 : ಇಂಗ್ಲೆಂಡ್ ಕನಸು ಛಿದ್ರಛಿದ್ರ

ಆಲ್ ಇಂಗ್ಲೆಂಡ್ ಕ್ಲಬ್ ನಲ್ಲಿ ಪಂದ್ಯ ನಂತರ ರನ್ನರ್ ಆಪ್ ಆದ ಮರ್ರೆ ಮಾತನಾಡಿದ್ದಕ್ಕಿಂತ ಕಣ್ಣೀರು ಸುರಿಸಿದ್ದೆ ಹೆಚ್ಚು. ಪ್ರೇಕ್ಷಕರಿಂದ ವ್ಯಕ್ತವಾದ ಬೆಂಬಲ ಕಂಡು ಮೂಕವಿಸ್ಮಿತರಾದರು. ನಾನು ಈ ಮಟ್ಟಕ್ಕೆ ಆಟ ಪ್ರದರ್ಶಿಸಲು ನಿಮ್ಮ ಬೆಂಬಲವೇ ಕಾರಣ ಎನ್ನುತ್ತಾ ಮತ್ತೊಮ್ಮೆ ಕಣ್ಣೀರಿಟ್ಟರು.
ದಾಖಲೆ ವೀರ: ಫೈನಲ್ ಪಂದ್ಯದಲ್ಲಿ ಬ್ರಿಟಿಷರ ಕನಸಿನ ಆಟಗಾರ ಆಂಡಿ ಮರ್ರೆ ಅವರನ್ನು 4-6, 7-5, 6-3, 6-4 ಸೆಟ್ ಗಳಲ್ಲಿ ಸ್ವಿಸ್ ವೀರ ರೋಜರ್ ಫೆಡರರ್ ಸೋಲಿಸಿದರು. ಈ ಗೆಲುವಿನ ಮೂಲಕ ಪೀಟ್ ಸಾಂಪ್ರಸ್ ಹಾಗೂ ವಿಲಿಯಮ್ ರೆನ್ ಶಾ ಅವರ 7 ಬಾರಿ ವಿಂಬಲ್ಡನ್ ಗೆದ್ದ ದಾಖಲೆಯನ್ನು ಫೆಡರರ್ ಸರಿಗಟ್ಟಿದರು.
2003, 2004, 2005, 2006, 2007, 2009 ಹಾಗೂ 2012 ರಲ್ಲಿ ಹಸಿರು ಅಂಕಣದಲ್ಲಿ ವಿಂಬಲ್ಡನ್ ಕಪ್ ಎತ್ತಿದ ಸಾಧನೆ ರೋಜರ್ ಹೆಸರಲ್ಲಿದೆ.
ಎರಡೂವರೆ ವರ್ಷದ ನಂತರ ಗ್ರಾಂಡ್ ಸ್ಲಾಮ್ ಪ್ರಶಸ್ತಿ ಗೆಲ್ಲುವ ಮೂಲಕ ಒಟ್ಟಾರೆ 17ನೇ ಗ್ರಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದ ಸಾಧನೆ ಮೆರೆದ ರೋಜರ್ ಫೆಡರರ್ ಈಗ ನಂ.1 ಸ್ಥಾನಕ್ಕೇರಿದ್ದಾರೆ.
ಮರ್ರೆಗೆ ಮೆಚ್ಚುಗೆ: 1936 ರಲ್ಲಿ ಫ್ರೆಡ್ ಪೆರ್ರಿ ವಿಂಬಲ್ಡನ್ ಚಾಂಪಿಯನ್ ಕಂಡಿದ್ದ ಇಂಗ್ಲೆಂಡ್ ಮತ್ತೊಮ್ಮೆ ತಮ್ಮ ದೇಶದ ಆಟಗಾರ ಕಪ್ ಎತ್ತುವ ಕನಸು ಭಗ್ನಗೊಂಡಿದೆ. ಟಿಮ್ ಹೆನ್ಮನ್, ರೋಜರ್ ಟೇಲರ್ ಹಾಗೂ ಮೈಕ್ ಸಂಗ್ಟರ್ ಎಲ್ಲರೂ ಸೆಮಿಫೈನಲ್ ಹಂತ ತಲುಪಿದ್ದೇ ಸಾಧನೆಯಾಗಿತ್ತು. ಸ್ಕಾಟ್ಲೆಂಡಿನ ಹೆಮ್ಮೆಯ ಕ್ರೀಡಾಪಟು ಮರ್ರೆ ಮೇಲೆ ಇಂಗ್ಲೆಂಡಿನ ಟೆನಿಸ್ ಪ್ರೇಮಿಗಳು ಇಟ್ಟಿದ್ದ ನಿರೀಕ್ಷೆಗೆ ತಕ್ಕಂತೆ ಮರ್ರೆ ಆಟ ಪ್ರದರ್ಶಿಸಿದರು.
ಚಾಂಪಿಯನ್ ಫೆಡರರ್ ವಿರುದ್ಧ ಮೊದಲ ಸೆಟ್ ಅನ್ನು 6-4ರಲ್ಲಿ ಗೆದ್ದು ಶಾಕ್ ನೀಡಿದ ಮರ್ರೆಗೆ ಹಲವು ಬಾರಿ ಅದೃಷ್ಟ ಕೈಕೊಟ್ಟಿತು. ಮಳೆ ಅಡಚಣೆ, ದೈಹಿಕ ಬಳಲಿಕೆಯಿಂದ ಬಳಲಿದರೂ ಮರ್ರೆ ಉತ್ತಮ ಆಟ ನೀಡಿ ಪ್ರೇಕ್ಷಕರ ಮನ ಗೆದ್ದರು.
ಈವರೆಗೂ 4 ಗ್ರಾಂಡ್ ಸ್ಲಾಮ್ ಫೈನಲ್ ತಲುಪಿದ ಸಾಧನೆ ಮರ್ರೆ ಹೆಸರಲ್ಲಿದೆ. 2008 ಹಾಗೂ 2010ರಲ್ಲಿ ರೋಜರ್ ಫೆಡರರ್ ವಿರುದ್ಧವೇ ಸೋತಿದ್ದರು. ಇನ್ನೊಂದರಲ್ಲಿ ಜೋಕವಿಕ್ ವಿರುದ್ಧ ಸೋಲಿನ ಕಹಿ ಅನುಭವಿಸಿದ್ದರು. ವಿಂಬಲ್ಡನ್ 2012ರ 4ನೇ ಫೈನಲ್ ನಲ್ಲಿ ರೋಜರ್ ವಿರುದ್ಧ ಸೋಲು ಅನುಭವಿಸಿದ್ದಾರೆ.












Click it and Unblock the Notifications