ಸರ್ಕಾರಕ್ಕೆ ಸೆಡ್ಡು ಹೊಡೆದ ಪುಟ್ಟ ಗೂಡು ಅರಸ...!
ಯಾದಗಿರಿ, ಜು.6 : ಸರಕಾರ ಹಲವಾರು ಯೋಜನೆಗಳನ್ನು ಜನರಿಗೆ ನೀಡುತ್ತಿದೆ ಅದರಲ್ಲಿ ಸೂರಿಲ್ಲದೆ ನಿರ್ಗತಿಕರಾದವರಿಗೆ ಸೂರು ನೀಡುವ ಆಸರೆ ಯೋಜನೆ ಜಾರಿಯಲ್ಲಿದೆ. ಆದರೆ, ಯಾದಗಿರಿ ಜಿಲ್ಲೆಯ ಹಲವಾರು ಗ್ರಾಮಗಳಲ್ಲಿ ಇನ್ನೂ ನೆಲೆಯಿಲ್ಲದ ನಿರಾಶ್ರಿತರು ಬದುಕು ಸಂಕಷ್ಟದ ಬಂಡಿಯಲ್ಲಿ ಸಾಗಿಸುತ್ತಿದ್ದಾರೆ.

ಇದಕ್ಕೆ ಯಾದಗಿರಿ ಜಿಲ್ಲೆಯ ಹತ್ತಿಕುಣ್ಣಿ ಗ್ರಾಮದ ಕಾಮಣ್ಣ ಉದಾಹರಣೆಯಾಗಿದ್ದಾರೆ. ಕೂಲಿಯಿಂದ ತನ್ನ ಹೊಟ್ಟೆ ತುಂಬಿಸಿಕೊಳ್ಳುವ ಕಾಮಣ್ಣನಿಗೆ ಹೆಂಡತಿ, ಮಕ್ಕಳಿಲ್ಲ. ಸಂಬಂಧಿಗಳಿದ್ದರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದು, ಅವರಿವರ ಹೊಲದಲ್ಲಿ ಕೂಲಿ ಮಾಡಿ ಒಪ್ಪತಿನ ಊಟಕ್ಕೆ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದು, ಕೂಲಿ ಇಲ್ಲದಿದ್ದರೆ ಕಟ್ಟಿಗೆ ಕಡಿದು ಮಾರಿ ಉಪಜೀವನ ನಡೆಸುತ್ತಿದ್ದಾನೆ
ಸಣ್ಣ ಜಾಗ ಇತನಿಗಿದ್ದು, ಈ ಮುಂಚೆ ಸಣ್ಣ ಗುಡಿಸಲು ಕಟ್ಟಿಕೊಂಡಿದ್ದ. ಆದರೆ ಬಿರುಗಾಳಿಗೆ ಗುಡಿಸಲು ನೆಲಸಮವಾದ ಮೇಲೆ ಎರಡು ಬಂಡೆಗಲ್ಲುಗಳನ್ನು ಭೂಮಿಯಲ್ಲಿ ನೆಟ್ಟು ಅದರ ಸುತ್ತ ಕಲ್ಲಿನಿಂದ ಸಣ್ಣ ಗೊಡೆ ಕಟ್ಟಿಕೊಂಡು ಅದರ ಮೇಲೆ ಉದ್ದನೆ ಕಲ್ಲು ಹಾಕಿ, ಮರಂ (ಕೆಂಪು ಮಣ್ಣು) ಹಾಕಿ ರಕ್ಷಣೆಗೆ ವ್ಯವಸ್ಥೆ ಮಾಡಿಕೊಂಡಿದ್ದಾನೆ.
ಅದರೊಳಗೆ ಮಲಗಲು ಕೂಡಾ ಸೂಕ್ತ ಸ್ಥಳ ಕೊರತೆಯಿದ್ದು, ಅದರೊಳಗೆ ಹೋಗಿ ಬರುವುದೇ ಒಂದು ಸಾಹಸದ ಕೆಲಸ. ಆದರೂ ಸಂಬಂಧಿಗಳಿಗೆ ಹೊರೆಯಾಗದೆ ಪುಟ್ಟ ಮನೆಯ ಮುಂದೆ ಒಂದೊತ್ತಿನ ಅಡುಗೆ ಮಾಡಿಕೊಂಡು ಜೀವನ ನಡೆಸುತ್ತಿದ್ದಾನೆ. ಮಳೆ ಬಂದರೆ ಸಾಕು ಒಳಗಡೆ ಅಡುಗೆ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ.
ಇತನ ಪರಸ್ಥಿತಿ ಕಂಡು ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರು ಆಶ್ರಯ ಯೋಜನೆಯಡಿಯಲ್ಲಿ ಮನೆ ಕೂಡಾ ಮಂಜೂರು ಮಾಡಿದ್ದರೂ. ಅನಕ್ಷರಸ್ಥನಾದ ಕಾಮಣ್ಣನಿಗೆ ತಿಳಿಯದಂತೆ ಆತನ ಸಂಬಂಧಿಕರು ಮನೆ ನಿರ್ಮಾಣಕ್ಕೆ ಬಿಡುಗಡೆಯಾದ ಹಣವನ್ನು ಲಪಟಾಯಿಸಿದ್ದಾರೆ.
ಇತ್ತೀಚೆಗೆ ಜಿಲ್ಲೆಗೆ ಭೇಟಿ ನೀಡಿದ್ದ ವಸತಿ ಸಚಿವ ವಿ.ಸೋಮಣ್ಣ ಜಿಲ್ಲೆಗೆ 37 ಸಾವಿರ ಮನೆಗಳನ್ನು ಮಂಜೂರು ಮಾಡಿರುವುದಾಗಿ ತಿಳಿಸಿದ್ದಾರೆ. ಆ 37 ಸಾವಿರ ಮನೆಗಳು ನಿರ್ಮಾಣವಾಗುತ್ತಾ ಎಂಬ ಪ್ರಶ್ನೆ ಜನರಲ್ಲಿ ಮೂಡಿದೆ.
ಇತ್ತ ಸರಕಾರದ ವಸತಿ ಯೋಜನೆಗಳು ಗ್ರಾಮೀಣ ಪ್ರದೇಶದಲ್ಲಿ ಅರ್ಹ ಫಲಾನುಭವಿಗಳಿಗೆ ದೊರೆಯುತ್ತಿಲ್ಲ ಎನ್ನುವುದಕ್ಕೆ ಕಾಮಣ್ಣನಂತಹ ನಿರ್ಗತಿಕರು ಸಾಕ್ಷಿಯಾಗಿದ್ದಾರೆ
ಈಗಲಾದರೂ ರಾಜ್ಯ ಸರಕಾರ ಕುರ್ಚಿಗಾಗಿ ಜಗಳ ಬಿಟ್ಟು ಬಡಜನರ ಕಣ್ಣಿರುವರೆಸುವಲ್ಲಿ ಮುಂದಾಗಲಿ ಎಂಬುದು ನಮ್ಮ ಆಶಯ. (ದಟ್ಸ್ ಕನ್ನಡ)












Click it and Unblock the Notifications