ಮುಂದುವರಿದ ರಾಜ್ಯ ಬಿಜೆಪಿಯ ಅಯೋಮಯ ಸ್ಥಿತಿ
ಬೆಂಗಳೂರು, ಜೂನ್ 30: ರಾಜ್ಯ ಬಿಜೆಪಿಯಲ್ಲಿ ಭುಗಿಲೆದ್ದಿರುವ ಭಿನ್ನಮತ ಇಂದು ನಿರ್ಣಾಯಕ ಹಂತಕ್ಕೆ ಬಂದು ನಿಂತಿದೆ. ಆದಾಗ್ಯೂ ಸದ್ಯದ ಮಟ್ಟಿಗೆ ಹೇಳುವುದಾದರೆ, ಇತ್ತ ಕೋಲ್ಗೇಟ್ ನಗೆ ಸದಾನಂದರ ಮುಖದ ಮೇಲೆ ಹಾಗೇ ಉಳಿದುಕೊಂಡಿದೆ. ಅತ್ತ ಗಂಟಿಕ್ಕಿಕೊಂಡಿರುವ ಯಡಿಯೂರಪ್ಪನವರ ಮುಖವೂ ಸಡಿಲವಾಗಿಲ್ಲ ಎಂಬಂತಾಗಿದೆ.

ಮುಖ್ಯಮಂತ್ರಿ ಸದಾನಂದ ಗೌಡರನ್ನು ಕೆಳಗಿಳಿಸಬೇಕು ಎಂಬುದು ಮಾಜಿ ಸಿಎಂ ಯಡಿಯೂರಪ್ಪ ಅವರ ಬಣದ ಏಕಮೇವ ಮಂತ್ರವಾಗಿದ್ದರೆ ಸದಾನಂದ ಗೌಡರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಉಳಿಸಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಸದಾನಂದ ಬೆಂಬಲಿಗರು ಮಂತ್ರಾಲೋಚನೆಯಲ್ಲಿ ತೊಡಗಿದ್ದಾರೆ.
ಬೆಳಗ್ಗೆ 9.30ಕ್ಕೆ ರಾಜ್ಯಪಾಲ ಭಾರಧ್ವಾಜ್ ಅವರನ್ನು ಸಿಎಂ ಸದಾನಂದ ಭೇಟಿ ಮಾಡಿ, ವಿಧಾನಸಭೆ ವಿಸರ್ಜನೆಗೆ ಶಿಫಾರಸು ಮಾಡುತ್ತಾರಂತೆ ಎಂಬ ಬಲವಾದ ಗಾಳಿಸುದ್ದಿ ಬೀಸಿ ಆಷಾಢದ ಗಾಳಿಗೇ ಗುದ್ದು ಕೊಟ್ಟಿತ್ತು. ಆದರೆ ಅಂಥದ್ದೇನೂ ಆಗಲಿಲ್ಲ.
ಏಕೆಂದರೆ ಅದಕ್ಕೂ ಮುನ್ನ ಈಶ್ವರಪ್ಪನವರು ಸದಾನಂದರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಯಡಿಯೂರಪ್ಪ ಬಣದ ಸಚಿವರ ರಾಜೀನಾಮೆ ಬಗ್ಗೆ ಕೇಳಿದರೆ ಏನು ಮಾಡಬೇಕು ಎಂಬುದರ ಬಗ್ಗೆ ಸದಾನಂದರಿಗೆ ತಿದಿಯೊತ್ತು ಕಳಿಸಿದ್ದರು. ಸದಾನಂದರು ಹೋದ ಪುಟ್ಟ ಬಂದಾ ಪುಟ್ಟ ಎಂಬಂತೆ 'ಏನಿಲ್ಲ, ಆಡಳಿತ ಸಂಬಂಧಿ ವಿಚಾರಗಳನ್ನು ಮಾತನಾಡಿಕೊಂಡು ಬಂದೆ ಅಷ್ಟೇ' ಎಂದು ಕೋಲ್ಗೇಟ್ ನಗೆ ನಕ್ಕರು.
ಈ ಮಧ್ಯೆ, ಬೆಂಗಳೂರಿಗೆ ಓಡೋಡಿ ಬಂದ ರಾಜ್ಯ ಬಿಜೆಪಿ ವರಿಷ್ಠ ಧರ್ಮೇಂದ್ರ ಪ್ರಧಾನ್ ಅವರನ್ನು ಅಶೋಕ್ ಬರಮಾಡಿಕೊಂಡರು. ಸೀದಾ ಮಲ್ಲೇಶ್ವರಕ್ಕೆ ತೆರಳಿದ ಧರ್ಮೇಂದ್ರ ಅವರು ಪ್ರಧಾನವಾಗಿ ಯಡಿಯೂರಪ್ಪ ಬಣದ ನಾಯಕರನ್ನು ಭೇಟಿ ಮಾಡಿದರು. ಅದರಲ್ಲೂ ರಾಜೀನಾಮೆ ನೀಡಿದ ಸಚಿವರನ್ನು ಕರೆದು ಮಾತನಾಡಿಸಿದರು.
ರಾಜೀನಾಮೆ ವಾಪಸ್ ಗೆ ಮನವೊಲಿಕೆ: ಈ ಹಂತದಲ್ಲಿ ಯಡಿಯೂರಪ್ಪ ಬಣದ ನಾಯಕರು ತಮ್ಮ ನಿರ್ಧಾರ ಅಚಲ ಎಂದು ಸ್ಪಷ್ಟಪಡಿಸಿದ್ದಾರೆ. ತಮ್ಮ ನಿರ್ಧಾರ/ ಅನಿಸಿಕೆಗಳನ್ನು ಹೇಳಿದ್ದಾಗಿದೆ. ಇನ್ನು ಮುಂದಿನ ನಿರ್ಧಾರ ತೆಗೆದುಕೊಳ್ಳುವುದು ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ ಎಂದು ಹೇಳಿ ಪಕ್ಷದ ಕಚೇರಿಯಿಂದ ಹೊರಬಿದ್ದಿದ್ದಾರೆ.
ಇತ್ತ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ಒಗಾಯಿಸಿದ ಸಚಿವರ ಜತೆ ಮಾತುಕತೆ ನಡೆಸುತ್ತಿದ್ದರೆ ಅತ್ತ ಸಿಎಂ ಸದಾನಂದರು ತಮ್ಮ ಬಣದ ನಾಯಕರ ಸಭೆಯನ್ನೂ 'ಅನುಗ್ರಹ ನಿವಾಸ'ದಲ್ಲಿ ನಡೆಸಿದರು. 'ತಾವೂ ಯಡಿಯೂರಪ್ಪ ಬಣಕ್ಕೆ ಸೊಪ್ಪು ಹಾಕುವುದು ಬೇಡ. ಏನಾದರೂ ಆಗಲಿ' ಎಂಬ ನಿರ್ಧಾರಕ್ಕೆ ಸದಾನಂದ ಬೆಂಬಲಿಗರು ಬಂದಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ.
ಇದೇ ವೇಳೆ ಪಕ್ಷದ ನಾಯಕರು ಬೇಗುದಿಯಲ್ಲಿ ಸಿಲುಕಿದ್ದರೆ ಅವರ ಬೆಂಬಲಿಗ ಶಾಸಕ/ಸಚಿವರು ಬೀದಿ ಕಾಳಗವನ್ನೂ ನಾಚಿಸುವಂತೆ ಕೂಗಾಡಿ, ರೇಗಾಡಿದ ಪ್ರಸಂಗಗಳೂ ನಡೆದವು. ಇದಕ್ಕೆ ಕಿಚ್ಚು ಹಚ್ಚಿದವರು ಕಾರ್ಮಿಕ ಸಚಿವ ಬಚ್ಚೇಗೌಡರು. ಮಾಜಿ ಮುಖ್ಯಮಂತ್ರಿಯ ಚಿತಾವಣೆ ಬಗ್ಗೆ ರೌದ್ರಾವತಾರ ತಾಳಿದ ಬಚ್ಚೇಗೌಡರು ಯಡಿಯೂರಪ್ಪ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಇದಕ್ಕೆ ಯಡಿಯೂರಪ್ಪ ಕಟ್ಟಾಳು ಸುರೇಶ್ ಗೌಡರು ತಕ್ಷಣ ಪ್ರತಿಕ್ರಯಿಸಿ, ಜಾಡಿಸಿದರು. ವಲಸೆವೀರ ಬಚ್ಚೇಗೌಡ ನನ್ನನ್ನೂ ಕಾಂಗ್ರೆಸ್ಸಿಗೆ ಸೇರಿಸಲು ಕಳೆದ ವಾರವಷ್ಟೇ ಯತ್ನಿಸಿದರು ಎಂದು ಹೇಳಿದರು. ಆದರೆ ಕಳೆದ ವಾರವೇ ಅದನ್ನು ಏಕೆ ಬಹಿರಂಗಪಡಿಸಲಿಲ್ಲ ಎಂಬುದು ತಿಳಿಯದೆ ತುಮಕೂರಿನ ಜನ ಅಚ್ಚರಿಗೆ ಬಿದ್ದರು.
ತದನಂತರ ಸಾಮೂಹಿಕ ರಾಜೀನಾಮೆಯ ನಾಯಕತ್ವ ಹೊತ್ತ ಉದಾಸಿ ಸಾಹೇಬರು ಛೆ! ಹಾಗೆಲ್ಲ ಯಡಿಯೂರಪ್ಪ ಬಗ್ಗೆ ಮಾತನಾಡಬಾರದು. ಪಕ್ಷದ ಈಗಿನ ಬಿಕ್ಕಟ್ಟಿಗೂ ಯಡಿಯೂರಪ್ಪನವರಿಗೂ ಯಾವುದೇ ರೀತಿಯ ಸಂಬಂಧವಿಲ್ಲ. ಚಿತಾವಣೆ ನಡೆಸಿರುವವರು JDS ನಿರ್ದೇಶಿತ ಸದಾನಂದ ಗೌಡರೇ ಎಂದು ಸುದ್ದಿಗಾರರ ಕಿವಿಯ ಮೇಲೆ ಹೂ ಇಟ್ಟರು.
ಇದನ್ನೆಲ್ಲ ಕಂಡು ಚಂಡಿ ಅವತಾರ ತಾಳಿದವರು ಮೈಸೂರು ಹುಲಿ ಶಂಕರಲಿಂಗೇ ಗೌಡರು. 'ಯಾವೋನ್ ಲೇ ಅವನು ಯಡಿಯೂರಪ್ಪ' ಎಂಬ ಧಾಟಿಯಲ್ಲೇ ಯಡಿಯೂರಪ್ಪ ಅವರ ಮೇಲೆ ಮುಗಿಬಿದ್ದುಬಿಟ್ಟರು.
ಪರಿಸ್ಥಿತಿ ಹೀಗಿರುವಾಗ ವರಿಷ್ಠರ ಮೇಲೆ ಮತ್ತಷ್ಟು ಒತ್ತಡ ಹೇರಲು ಒಂದಷ್ಟು ಸಂಸದರು 'ನಮ್ ನಾಯಕ ಯಡಿಯೂರಪ್ಪಗೆ ಹೀಗೇ ಅವಮಾನ ಆಗ್ತಿದ್ದರೆ ನಮ್ಮಿಂದ ಸಹಿಸೋಕ್ಕಾಗಲ್ಲ. ನಾವ್ ಸುಮ್ನೇ ಇರಾಕಿಲ್ಲ. ರಾಜೀನಾಮೆ ನೀಡೇ ಬಿಡ್ತೀವಿ' ಎಂದು ಅರಚಾಡಿದರು.
ಸನ್ಮಾನ್ಯ ಸದಾನಂದ ಗೌಡರೂ ಹಿಂದೆ ಬೀಳಲಿಲ್ಲ. 'ಯಾರನ್ನು ಎಲ್ಲಿ ಇಡಬೇಕು ಅಲ್ಲಿ ಇಟ್ಟಿದ್ದರೆ ಈ ಪರಿಸ್ಥಿತಿ ಉದ್ಭವವಾಗುತ್ತಿರಲಿಲ್ಲ' ಎಂದು ಪಾಪ ಪಶ್ವಾತಾಪಟ್ಟುಕೊಂಡುಬಿಟ್ಟರು. ಬಹುಶಃ ಇದೇ dialogue of the day ಅನ್ನಬಹುದು. ತಾಜಾ ವರದಿಗಳ ಪ್ರಕಾರ (ಸಂಜೆ 4 ಗಂಟೆ) ಅನುಗ್ರಹದಲ್ಲಿ ಸಿಎಂ ಸದಾನಂದರ ಆಪ್ತ ಬಳಗ ಮತ್ತೊಂದು ಸುತ್ತಿನ ಮಾತುಕತೆಗೆ ಕುಳಿತಿದ್ದು ವರಿಷ್ಠರ ಮಾತಿಗೆ ಬಗ್ಗದ ಯಡ್ಡಿ ಬಣಕ್ಕೆ ತಿರುಗೇಟು ನೀಡಲು ಕಾರ್ಯತಂತ್ರ ರೂಪಿಸುತ್ತಿದ್ದಾರೆ ಎನ್ನಲಾಗಿದೆ.
ಇನ್ನು ಸಿಟಿ ರವಿ ಅವರು ತಾವು ಸಚಿವರಾಗದಿದ್ದರೂ ಪರವಾಗಿಲ್ಲ. ವಿಧಾನಸಭೆ ವಿಸರ್ಜಿಸಿ, ಅತ್ಲಾಗೆ ಚುನಾವಣೆಗೆ ಹೋಗೋಣ ಬಿಡಿ ಎಂದಿದ್ದಾರೆ. ಆದರೆ ದೂರದ ರಮೇಶ್ ಜಿಗಜಿಣಗಿ ಅವರು ನಿಮಗೇನೂ ಮಾನ ಮರ್ಯಾದೆ ಇಲ್ವಾ? ನಾವು ಉತ್ತರ ಕರ್ನಾಟಕದ ಮಂದಿ ಬರಗಾಲದಿಂದ ದಿಕ್ಕೆಟ್ಟಿರುವಾಗ ನಿಮ್ಮದೇನೂ ರಗಳೆ ಎಂದು ಯಡಿಯೂರಪ್ಪ ಬಣವನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡರು.
ಇಷ್ಟೆಲ್ಲ ಆಗುತ್ತಿದ್ದಂತೆ ತಮ್ಮ ಹಠ ಬಿಟ್ಟುಕೊಡದ ಯಡಿಯೂರಪ್ಪ ಬಣದ ಸಚಿವರು/ ಶಾಸಕರ ಜತೆ ಧರ್ಮೇಂಧ್ರ ಪ್ರಧಾನ್ ಅವರು ಮತ್ತೊಂದು ಸುತ್ತಿನ ಮಾತುಕತೆಗೆ ಕುಳಿತಿದ್ದಾರೆ. ಅದಾದ ನಂತರ, ಸನ್ಮಾನ್ಯ ಯಡಿಯೂರಪ್ಪ ನಿವಾಸಕ್ಕೆ ಖುದ್ದಾಗಿ ತೆರಳಿ ಅಂತಿಮ ಮಾತುಕತೆ ನಡೆಸಿ, ರಾಜೀ ಸೂತ್ರ ಕಂಡುಕೊಳ್ಳಲು ಯತ್ನಿಸುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ. ಆದರೆ ಜಗದಿಶ್ ಶೆಟ್ಟರ್ ಸಿಎಂ ಆಗ್ತಾರಾ ಎಂದು ಹುಬ್ಬಳ್ಳಿಯಾಂವ ಕೇಳಿದ ಅಮಾಯಕ ಪ್ರಶ್ನೆಗೆ ಮಾತ್ರ ಸದ್ಯಕ್ಕೆ ಉತ್ತರ ಸಿಕ್ಕಿಲ್ಲ.
ಅಂದಹಾಗೆ, ಯಡಿಯೂರಪ್ಪನವರು ರೇಸ್ ಕೋರ್ಸ್ ರಸ್ತೆಯಲ್ಲಿರುವ ತಮ್ಮ ಅಧಿಕೃತ ನಿವಾಸವನ್ನು ಮೊನ್ನೆ ಖಾಲಿ ಮಾಡಿದ್ದು ಡಾಲರ್ಸ್ ಕಾಲನಿಯಲ್ಲಿರುವ ಧವಳಗಿರಿಗೆ ಶಿಫ್ಟ್ ಆಗಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದಿರುವ ಧರ್ಮೇಂದ್ರ ಪ್ರಧಾನರು ನೇರವಾಗಿ ಡಾಲರ್ಸ್ ಕಾಲನಿಗೆ ತೆರಳಿ, ಧವಳಗಿರಿಯಲ್ಲಿ ಇಂದಿನಮಟ್ಟಿಗೆ ಅಂತಿಮ ಸುತ್ತಿನ ಮಾತುಕತೆ ನಡೆಸುವ ಸೂಚನೆಗಳಿವೆ.
-
ಬೆಂಗಳೂರು ನಾಯಂಡಳ್ಳಿಯಲ್ಲಿ ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಕಂದಮ್ಮ -
SSLC Hindi: ಅಂಕ ಬದಲು ಗ್ರೇಡಿಂಗ್ ವಿರೋಧಿಸಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ: ಕರವೇ ಹೇಳಿದ್ದೇನು -
Bengaluru: ಬೆಂಗಳೂರು ನಗರದಲ್ಲಿ ಸ್ವಿಗ್ಗಿ, ಜೊಮ್ಯಾಟೋ ಡೆಲಿವರಿ ಬಾಯ್ಸ್ಗೆ ಸಂಕಷ್ಟ, ಅಮಾನವೀಯ ಲಿಫ್ಟ್ ಸಂಸ್ಕೃತಿ -
ಚಿಕ್ಕಮಗಳೂರಲ್ಲಿ ನಾಪತ್ತೆಯಾಗಿದ್ದ ಕೇರಳದ ಬಾಲಕಿ ಶ್ರಿನಂದಾ ಸಾವು: 2 ಸಾವಿರ ಅಡಿ ಪ್ರಪಾತದಲ್ಲಿ ಶವ ಪತ್ತೆ -
Copra: ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಮತ್ತೆ ದಾಖಲೆ ಬೆಲೆಗೆ ಮಾರಾಟವಾದ ಕೊಬ್ಬರಿ: ನಿರ್ಮಾಣವಾಯ್ತು ಹೊಸ ಇತಿಹಾಸ -
Mona Lisa: ಮಹಾಕುಂಭ ಮೇಳದ ಫೇಮಸ್ ಮೊನಾಲಿಸಾ ಪತಿಗೆ ಕಾನೂನು ಸಂಕಷ್ಟ: ಫರ್ಮಾನ್ ಖಾನ್ ಮೇಲೆ ಪೋಕ್ಸೋ ಪ್ರಕರಣ -
2nd PUC: ಬೆಂಗಳೂರು - ಪಿಯುಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ 260 ವಿದ್ಯಾರ್ಥಿಗಳಿಗೆ 35,000 ರೂ. -
RBI New Rule: ಇನ್ಮುಂದೆ ಆನ್ಲೈನ್ ವಹಿವಾಟಿನಲ್ಲಿ ದೊಡ್ಡ ಬದಲಾವಣೆ: 10,000 ರೂ. ಹಣ ವರ್ಗಾವಣೆಗೂ ಹೊಸ ನಿಯಮ -
Gold Rate April 10: ಚಿನ್ನ - ಬೆಳ್ಳಿ ಬೆಲೆಯಲ್ಲಿ ಅಚ್ಚರಿಯ ಬೆಳವಣಿಗೆ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
ದ್ವಿತೀಯ PUC ರಿಪೀಟರ್ಸ್ ಗಮನಕ್ಕೆ: ತಾಂತ್ರಿಕ ದೋಷ ಸರಿಪಡಿಸಿ ಪರಿಷ್ಕೃತ ಫಲಿತಾಂಶ ಪ್ರಕಟಿಸಿದ ಮಂಡಳಿ -
ಸಾಮಾಜಿಕ ಜಾಲತಾಣದ ಕರೆಗೆ ಓಗೊಟ್ಟ ಹೆಚ್.ಡಿ.ಕುಮಾರಸ್ವಾಮಿ: ನಂಜನಗೂಡಿನ ಹುಲ್ಲಳ್ಳಿಯ ನೊಂದ ಕುಟುಂಬಕ್ಕೆ ಅಭಯ -
ಡಿವಿಜಿ ಒಡನಾಡಿ,ರಾಷ್ಟ್ರೋತ್ಥಾನದ ಮಾಜಿ ಅಧ್ಯಕ್ಷ ಎಸ್ಆರ್ ರಾಮಸ್ವಾಮಿ ನಿಧನ












Click it and Unblock the Notifications