ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಾಲಿ ರೆಡ್ಡಿ 880 ಕೋಟಿ ರೂ ಆಸ್ತಿ ಮುಟ್ಟುಗೋಲು?

By Mahesh
|
Google Oneindia Kannada News

 Enforcement Directorate to attach Rs 880 Cr Assets
ಬೆಂಗಳೂರು, ಜೂ.29 : ಅಕ್ರಮ ಹಣ ಚಲಾವಣೆ ನಿರ್ಬಂಧ ಕಾಯ್ದೆಯಡಿ ಮಾಜಿ ಸಚಿವ ಜನಾರ್ದನರೆಡ್ಡಿಗೆ ಸೇರಿರುವ ಸುಮಾರು 880 ಕೋಟಿ ರೂ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಳ್ಳುತ್ತಿದೆ.

ಅಕ್ರಮ ಆಸ್ತಿ ಗಳಿಕೆ, ಮನಿ ಲಾಂಡ್ರಿಂಗ್, ಅದಿರು ಸುಂಕ ವಂಚನೆ ಇತರೆ ಆರೋಪಗಳ ಮೇಲೆ ಗಾಲಿ ರೆಡ್ಡಿ ಹಾಗೂ ಕುಟುಂಬದ ಮೇಲೆ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿಕೊಂಡಿದೆ. ಈ ನಿಟ್ಟಿನಲ್ಲಿ ಈಗಾಗಲೇ ಕೋರ್ಟಿನಿಂದ ಅಧಿಕೃತವಾಗಿ ಅನುಮತಿ ಪಡೆಯಲಾಗಿದ್ದು, ಜೂ.21ರಿಂದ ವಿಚಾರಣೆ ಆರಂಭಿಸಿದೆ.

ಜೂನ್ 21 ಮತ್ತು 22ರಂದು ಎರಡು ದಿನಗಳ ಕಾಲ ವಿಚಾರಣೆಗೊಳಪಟ್ಟ ಗಾಲಿ ಜನಾರ್ದನ ರೆಡ್ಡಿ ಹೇಳಿಕೆಗಳನ್ನುದಾಖಲಿಸಿಕೊಳ್ಳಲಾಗಿತ್ತು. ರೆಡ್ಡಿ, ಅವರ ಪತ್ನಿ ಮತ್ತು ಸಹವರ್ತಿ ಕಂಪನಿಗಳ ವಿರುದ್ಧ ಈ ಕಾಯ್ದೆಯಡಿ ಮೊಕದ್ದಮೆ ದಾಖಲಿಸಲಾಗಿತ್ತು.

ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಸಾಕಷ್ಟು ಪುರಾವೆಗಳು ಲಭ್ಯವಾಗಿದೆ. ಅಕ್ರಮ ಗಣಿಗಾರಿಕೆ ಮಾತ್ರವಲ್ಲದೆ, ಆಂಧ್ರಪ್ರದೇಶದ ರಾಜಕಾರಣಿಗಳೊಡನೆ ಗಾಲಿ ರೆಡ್ಡಿ ಅಕ್ರಮ ಹಣ ಚಲಾವಣೆ ಜಾಲದಲ್ಲೂ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.

ಗಾಲಿ ರೆಡ್ಡಿ ಒಡೆತನದ 20ಕ್ಕೂ ಹೆಚ್ಚು ಕಂಪನಿಗಳು ತನಿಖೆಗೊಳಪಟ್ಟಿದೆ. ಇದರಲ್ಲಿ ಹಲವು ಬೇನಾಮಿ ಕಂಪನಿಗಳಾಗಿದ್ದು, ಸರಿಯಾದ ದಾಖಲೆಗಳು ಲಭ್ಯವಾಗಿಲ್ಲ.

ರೆಡ್ಡಿ ಕಂಪನಿಗಳ ವ್ಯವಹಾರದಿಂದ ರಾಜ್ಯ ಬೊಕ್ಕಸಕ್ಕೆ 480 ಕೋಟಿ ರೂ ನಷ್ಟವಾಗಿದೆ ಎಂಬ ಆರೋಪ ಹೊರಿಸಿ ಕಳೆದ ತಿಂಗಳು ಸಿಬಿಐ ಚಾರ್ಚ್ ಶೀಟ್ ಸಲ್ಲಿಸಿತ್ತು. ಈ ದೋಷಾರೋಪಣ ಪಟ್ಟಿಯನ್ನು ಆಧಾರವಾಗಿಟ್ಟುಕೊಂಡು ಜಾರಿ ನಿರ್ದೇಶನಾಲಯ ಮುಂದಿನ ಕ್ರಮ ಕೈಗೊಂಡಿದೆ.

ಪ್ರಮುಖವಾಗಿ ಜನಾರ್ದನ ರೆಡ್ಡಿ ಆಪ್ತ ವಲಯದ ಆಡಿಟರ್ ವಿಜಯ ಸಾಯಿ ರೆಡ್ಡಿ, ಮೆಹಫುಜ್ ಆಲಿ ಖಾನ್ ತನಿಖೆಗೆ ಒಳಪಡಬೇಕಿದೆ. ಈ ಇಬ್ಬರ ಬಳಿ ಗಾಲಿ ರೆಡ್ಡಿ ಅಕ್ರಮ ಆಸ್ತಿಯ ಸಂಪೂರ್ಣ ವಿವರಗಳು ಇದೆ ಎಂದು ನಂಬಲಾಗಿದೆ.

ರೆಡ್ಡಿಯ ಮೈನಿಂಗ್ ಕಂಪನಿ 17000 ಕೋಟಿ ರೂ ಮೌಲ್ಯದ 30 ಲಕ್ಷ ಟನ್ ಅದಿರನ್ನು ಅಕ್ರಮವಾಗಿ ತೆಗೆದಿದ್ದಾರೆ ಎಂದು ಸಿಬಿಐ ಆರೋಪಿಸಿತ್ತು. ರೆಡ್ಡಿ ಒಡೆತನದ ಓಎಂಸಿ ಸಂಸ್ಥೆಯಿಂದ ಸುಮಾರು 65,82,341 ಟನ್ ನಷ್ಟು ಅದಿರನ್ನು ಅಕ್ರಮವಾಗಿ ಸಾಗಾಟ ಮಾಡಿದ ಆರೋಪವಿದೆ.

ಎಂಸಿಪಿಎಲ್ ವಿದೇಶದಲ್ಲಿ ಬಿಜೆಆರ್ ಇಂಟರ್ ನ್ಯಾಷನಲ್ ಹೋಲ್ಡಿಂಗ್ ಲಿ ಹಾಗೂ ಜಿಎಲ್ ಎ ಟ್ರೇಡಿಂಗ್ ಕಂಪನಿ ಆರಂಭಿಸಿದೆ. ರಫ್ತು ಸುಂಕ ತಪ್ಪಿಸಿಕೊಳ್ಳಲು ಪತ್ನಿ ಹೆಸರಿನ ಕಂಪನಿಗೆ ಬಳ್ಳಾರಿಯಿಂದ ಎಎಂಸಿ ಕಂಪನಿ ಅಡಿಯಲ್ಲಿ ಮಾರಾಟ ಮಾಡಲಾಗಿದೆ.

2007 ರಿಂದ 2009ರವರೆಗೆ 215 ಕೋಟಿ ರಫ್ತು ಸುಂಕ ವಂಚನೆ ಹಾಗೂ ಸರ್ಕಾರಕ್ಕೆ ಓಎಂಸಿಯಿಂದ 5100 ಕೋಟಿ ಮತ್ತು ಎಎಂಸಿ ಯಲ್ಲಿ 480 ಕೋಟಿ ರು ನಷ್ಟ ಉಂಟಾಗಿದೆ ಎಂದು ಕೋರ್ಟಿಗೆ ಸಲ್ಲಿಸಿರುವ ಚಾರ್ಚ್ ಶೀಟ್ ನಲ್ಲಿ ಹೇಳಲಾಗಿದೆ. ಆದರೆ, ಅಸಲಿ ಮೊತ್ತ ಇಡಿ ತನಿಖೆಗೆ ಇಳಿದರೆ ಬಯಲಾಗಬೇಕಿದೆ.

English summary
The Enforcement Directorate has decided to attach more than Rs 880 crore under the Prevention of Money Laundering Act, belonging to former Karnataka minister G Janardhana Reddy, his associates and companies in the mining scam case. ED probe is underway after Hyderadbad CBI court given permission.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X