ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅವರ್ ಬಿಟ್, ಇವರ್ ಬಿಟ್, ಈಶ್ವರಪ್ಪಗೆ ಮಣೆ

By Srinath
|
Google Oneindia Kannada News

eshwarappa-surfaces-as-3rd-candidate-for-cm-post
ಬೆಂಗಳೂರು. ಜೂನ್ 26: 'ಅವರಿಗೂ ಇಲ್ಲ, ಇವರಿಗೂ ಇಲ್ಲ. ಮೂರನೆಯವರಿಗೆ ಲಾಭ' ಎಂಬಂತೆ ಅತ್ಲಾಗೆ ಹಾಲಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡಗೂ ಬೇಡ, ಬಹುಚರ್ಚಿತ ಜಗದೀಶ ಶೆಟ್ಟರ್ ಗೂ ಬೇಡ. ಹಳೆ ಹುಲಿ, ಪಕ್ಷದ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪಗೆ ಮುಖ್ಯಮಂತ್ರಿ ಪಟ್ಟಕಟ್ಟಿದರೆ ಹೇಗೆ ಎಂದು ಒಂದಷ್ಟು ಬಿಜೆಪಿ ಮಂದಿ ಹೊಸ ರಾಗ ಹಾಡತೊಡಗಿದ್ದಾರೆ.

ಗ್ರಾಮೀಣಾಭಿವೃದ್ಧಿ ಸಚಿವ ಜಗದೀಶ ಶೆಟ್ಟರ್ ಅವರ ಬೆನ್ನಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಣ ನಿಂತಿದ್ದರೆ, ಜಾರಕಿಹೊಳಿ ಬಣ ಹಾಲಿ ಮುಖ್ಯಮಂತ್ರಿ ಹಾಗೇ ಮುಂದುವರಿಯಲಿ ಎಂದು ಆಶಿಸುತ್ತಿದ್ದಾರೆ. ದೆಹಲಿ ವರಿಷ್ಠರದೂ ಇದೇ ಆಶಯ. ಈ ಮಧ್ಯೆ ಮತ್ತೊಂದು ಬಣ ಎದ್ದು ಕೂತಿದೆ. ಅದೇ ಈಶ್ವರಪ್ಪ ಪರ ಸಿಎಂ ಖುರ್ಚಿಯ ಮೇಲೆ ಟವಲು ಹಾಕುತ್ತಿರುವ ಬಣ.

ಶತಾಯಗತಾಯ ಸದಾನಂದ ಗೌಡರನ್ನು ಬದಲಿಸಲೇ ಬೇಕು ಎಂಬ ಯಡಿಯೂರಪ್ಪನವರ ಪುರಾತನ ಬೇಡಿಕೆಗೆ ಪಕ್ಷದ ವರಿಷ್ಠರು ಇತ್ತೀಚೆಗೆ ಸೊಪ್ಪುಹಾಕಿದ್ದಾರೆ ಎಂಬ ಬಲವಾದ ಆಷಾಢದ ಗಾಳಿ ಬೀಸುತ್ತಿದ್ದಂತೆ ಹೇಗೂ ಬದಲಾಯಿಸುತ್ತೀರಂತೆ ನಮ್ಮ ನಾಯಕರನ್ನೇ ಅಲ್ಲಿ ಕುಳ್ಳರಿಸಿ ಎಂದು ಈಶ್ವರಪ್ಪ ಬೆಂಬಲಿಗರು ವರಾತ ತೆಗೆದಿದ್ದಾರೆ ಎನ್ನಲಾಗಿದೆ.

ಸೋ, ಹೀಗೆ ದಿಢೀರ್ ಬೆಳವಣಿಗೆಯಲ್ಲಿ ಕೆಲವು ಸಚಿವರು ಈಶ್ವರಪ್ಪ ಪರ ಧ್ವನಿ ಎತ್ತಿದ್ದಾರೆ. ಪಕ್ಷ ಸಂಘಟನೆಗೆ ಶ್ರಮಿಸಿರುವ ಅವರನ್ನು ಮುಖ್ಯಮಂತ್ರಿ ಮಾಡಿದರೆ ಪಕ್ಷಕ್ಕೆ ಮತ್ತಷ್ಟು ಲಾಭ ಆಗಲಿದೆ ಎಂದು ಅವರ ಪರ ಲಾಬಿ ಆರಂಭಿಸಿದ್ದಾರೆ.

ಸಚಿವರಾದ ಎಸ್ಎ ರಾಮದಾಸ್, (ಎಸ್ ಸುರೇಶ್‌ಕುಮಾರ್), ಎಸ್ಎ ರವೀಂದ್ರನಾಥ್, ಎ ನಾರಾಯಣಸ್ವಾಮಿ, ಶಾಸಕರಾದ ಸೊಗಡು ಶಿವಣ್ಣ, ಅಪ್ಪಚ್ಚು ರಂಜನ್, ಸಿಟಿ ರವಿ, ಬಿಸಿ ನಾಗೇಶ್, ಬಿಎನ್ ವಿಜಯಕುಮಾರ್, ಡಿಎಚ್ ಶಂಕರಮೂರ್ತಿ ಸೇರಿದಂತೆ ಹಲವರು ಈಶ್ವರಪ್ಪ ಬೆಂಬಲಕ್ಕೆ ನಿಂತಿದ್ದಾರೆ ಎನ್ನಲಾಗಿದೆ.

ಇವರಲ್ಲಿ ಕೆಲವರು ಈಶ್ವರಪ್ಪ ಅವರನ್ನು ಭೇಟಿ ಮಾಡಿ 'ನಾಯಕತ್ವ ಬದಲಾವಣೆಗೆ ಹೈಕಮಾಂಡ್ ಹಸಿರು ನಿಶಾನೆ ತೋರಿದರೆ ತಾವು ಕೂಡ ಸ್ಪರ್ಧೆಗೆ ಇಳಿಯಬೇಕು' ಎಂದು ಒತ್ತಡ ಹಾಕಿದ್ದಾರೆ. ಈಶ್ವರಪ್ಪ ಅವರೂ ಭಾನುವಾರ ಜಿಂದಾಲ್ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಜ್ಞಾನೋದಯವಾದವರಂತೆ (ಯಡಿಯೂರಪ್ಪ ಅವರೆದುರು 3 ಗಂಟೆ ಕಾಲ ಕುಳಿತ ಬಳಿಕ) ಆಪ್ತರ ಜತೆ ಈ ಸಂಬಂಧ ಚರ್ಚೆ ನಡೆಸಿದ್ದಾರೆ ಎಂದು ಪಕ್ಷದ ಮೂಲಗಳು ಪಿಸು ಪಿಸುಗುಟ್ಟುತ್ತಿವೆ.

'ಲಿಂಗಾಯತ ಮತ್ತು ಒಕ್ಕಲಿಗ... ಹೀಗೆ ಎರಡು ಪ್ರಬಲ ಸಮುದಾಯಗಳಿಗೆ ಅವಕಾಶ ದೊರೆತಿದೆ. ಮತ್ತೊಂದು ಪ್ರಮುಖ ಸಮುದಾಯವಾದ ಕುರುಬ ಜನಾಂಗದವರಿಗೆ ಮುಖ್ಯಮಂತ್ರಿ ಸ್ಥಾನ ನೀಡುವುದರಿಂದ ಹಿಂದುಳಿದ ವರ್ಗಗಳ ಮತಗಳು ಪಕ್ಷದ ಪರ ವಾಲುವ ಅವಕಾಶ ಇದೆ' ಎಂದು ಈಶ್ವರಪ್ಪ ಪರ ನಿಂತಿರುವ ಮುಖಂಡರು ವಾದ ಹೂಡಿದ್ದಾರೆ.

English summary
Karnataka State BJP President KS Eshwarappa name surfaces as 3rd candidate for Karnataka CM Post.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X