ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೀನುಗಾರರ ಬಲೆಗೆ 500 , 1000ರು ನೋಟುಗಳು

By Mahesh
|
Google Oneindia Kannada News

currency notes Flow in Chachal area
ಗುವಾಹತಿ, ಜೂ.26: ಕೈ ಇಟ್ಟಲ್ಲೇ ಕಾಂಚಾಣ, ಹಣ ಏನು ಮರದಲ್ಲಿ ಬಿಡುತ್ತಾ ಎಂದೆಲ್ಲ ಮಾತಿಗೆ ಹೇಳುವುದಿದೆ. ಯಥೇಚ್ಛವಾಗಿ ಹಣ ಖರ್ಚು ಮಾಡಿದ ಕಡೆ 'ಹಣದ ಹೊಳೆ ಹರಿದಿದೆ' ಎಂದು ಉದ್ಗರಿಸುವುದಂತೂ ಮಾಮೂಲಿ. ಆದರೆ, ಇದೇ ನಿಜವಾಗಿ ಬಿಟ್ಟರೆ, ಡಿಸ್ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಚಾಚಲ್ ಪ್ರದೇಶದ ಜೌಗು ನೆಲದ ಹೊಂಡದಲ್ಲಿ ಮೀನು ಹಿಡಿಯ ಹೊರಟವರ ಗಾಳಕ್ಕೆ 500, 1000 ರು ನೋಟುಗಳು ಸಿಕ್ಕಿದೆ.

ನಂತರ ನೋಡನೋಡುತ್ತಿದ್ದಂತೆ ಕರೆನ್ಸಿ ನೋಟುಗಳು ತೇಲುತ್ತಾ ಕಣ್ಮುಂದೆ ಸಾಗಿದೆ. ಸುದ್ದಿ ಬಾಯಿಂದ ಬಾಯಿಗೆ ಹರಡಿ ನೂರಾರು ಜನ ಹೊಂಡದಲ್ಲಿ ಮುಳುಗೆದ್ದು ಕೈಲಿ 500, 1000 ರು ನೋಟು ಹಿಡಿದು ಕುಣಿದಿದ್ದಾರೆ.

ಹಣದ ಹೊಂಡದ ಬಳಿ ಬಂದವರೆಲ್ಲ ಕೈಲಿ ಒಂದಲ್ಲ ಎರಡು ನೋಟುಗಳನ್ನು ಹಿಡಿದಿದ್ದರು ಎಂದರೆ ಇನ್ನೆಷ್ಟು ಪ್ರಮಾಣದ ಗಂಟು ಬಿಚ್ಚಿಕೊಂಡು ತೇಲುತ್ತಿದ್ದ ಎಂದು ಊಹಿಸಬಹುದು. ಕೈಲಿ ಹಿಡಿದ ನೋಟು ಅಸಲಿಯೋ ನಕಲಿಯೋ ಎಂಬ ತನಿಖೆ, ಚರ್ಚೆ ನಡೆಸುವ ಗೋಜಿಗೆ ಹೋಗದ ಜನ ಬಿಟ್ಟಿಯಾಗಿ ಸಿಕ್ಕ ಹಣ ಬಾಚಿಕೊಳ್ಳತೊಡಗಿದ್ದರು.

ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಲು ಬಂದ ಪೊಲೀಸರಿಗೆ ಹಣದ ಮೂಲ ಯಾವುದು ಎಂಬ ಸಣ್ಣ ಸುಳಿವು ಸಿಗಲಿಲ್ಲ. ನೋಟುಗಳ ಅಸಲಿಯತ್ತು ಬಗ್ಗೆ ತನಿಖೆ ನಡೆಸಿ ಆರ್ ಬಿಐಗೆ ಪರಿಶೀಲನೆಗಾಗಿ ಕಳಿಸಲಾಗುವುದು. ಮೇಲ್ನೋಟಕ್ಕೆ ಇದು ಕಪ್ಪುಹಣ ಎಂದು ತಿಳಿದು ಬಂದಿದೆ. ತನಿಖೆ ಪೂರ್ಣಗೊಂಡ ನಂತರ ಪ್ರತಿಕ್ರಿಯೆ ನೀಡಲಾಗುವುದು ಎಂದು ಎಸ್ಪಿ ಅಪೂರ್ವ ಜಿಬಾನ್ ಬರೂವಾ ಹೇಳಿದ್ದಾರೆ.

ಇದು ಅಸಲಿ ನೋಟು: ಮೊಟ್ಟ ಮೊದಲಿಗೆ ನೋಟು ಕಂಡ ಬೆಸ್ತರು ತಮ್ಮ ಕೈಲಿರುವ ಹಣ ಅಸಲಿ ನೋಟು ಎಂದು ದೃಢವಾಗಿ ಹೇಳಿದ್ದಾರೆ. ವಿಷಯ ಹರಡುತ್ತಿದ್ದಂತೆ ಹೆಚ್ಚಿನ ನೋಟು ಸಂಗ್ರಹಿಸಲು ಕೆಲವರು ಮೀನು ಹಿಡಿಯುವುದಕ್ಕೆ ಹಾಕಿದ ಬಲೆಯನ್ನು ಕಿತ್ತು, ನೋಟು ಸಂಗ್ರಹಿಸಲು ಬಳಸತೊಡಗಿದರು. ಪ್ರತಿಯೊಬ್ಬರಿಗೂ 8,000 ರು ದಿಂದ 10,000 ರು ತನಕ ಹಣ ಸಿಕ್ಕಿದೆ ಎಂದು ಬೆಸ್ತರ ಮುಖಂಡ ಹೇಳಿದ್ದಾರೆ.

ಹೊಂಡದ ನೀರು ಖಾಲಿ ಮಾಡಲು ಜೆನರೇಟರ್ ಬಳಸಿದ್ದು ಇದೆ. ಆ ಸಮಯಕ್ಕೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದರು. ಆದರೆ, ಜನ ಮರಳೋ ಜಾತ್ರೆ ಮರಳೋ ಎಂಬಂತೆ ಇದ್ದ ಪರಿಸ್ಥಿತಿಯಲ್ಲಿ ಕೈಕಟ್ಟಿ ನೋಟುಗಳು ಆಡಿಸುತ್ತಿರುವ ಆಟವನ್ನು ವೀಕ್ಷಿಸತೊಡಗಿದರು.

1000 ರು ಮುಖಬೆಲೆಯ 12 ನೋಟುಗಳನ್ನು ಸಂಗ್ರಹಿಸಿದ ರೋಹಿತ್ ಡೇಖಾ ಸಕತ್ ಖುಷಿಯಾಗಿ 'ಈ ರೀತಿ ಘಟನೆ ಕನಸಿನಲ್ಲಿ ಮಾತ್ರ ಸಂಭವಿಸುತ್ತದೆ ಎಂದುಕೊಂಡಿದ್ದೆ ಆದರೆ, ಇಂದು ನಿಜವಾಗಿದೆ' ಎಂದಿದ್ದಾನೆ.

ರಿಕ್ಷಾವಾಲಾ ಜಿಬಾಬ್ ದಾಸ್, 10,000 ರು ಗಳಿಸಿ ಸಂತಸದಲ್ಲಿ ಇದು ನನ್ನ ಜೀವನದ ಮಹತ್ವದ ದಿನ ಎಂದು ಕುಣಿದಾಡಿದ್ದಾನೆ.

ಆದರೆ, ಸಾರ್ವಜನಿಕರ ಸಂತಸ ಎಷ್ಟು ಕಾಲ ಇರುತ್ತದೆಯೋ ಗೊತ್ತಿಲ್ಲ. ಯಾರೋ ಭ್ರಷ್ಟ ಸರ್ಕಾರಿ ಅಧಿಕಾರಿಗೆ ಸೇರಿದ ಹಣ ಇದು ಎಂಬ ಶಂಕೆ ಇದೆ.ತನಿಖೆ ನಂತರ ಪೊಲೀಸರು ಹಣ ಕಿತ್ತುಕೊಳ್ಳುತ್ತಾರೆ. ಈ ಖುಷಿ ಕ್ಷಣಕಾಲ ಮಾತ್ರ ಎಂದು ಸ್ಥಳೀಯ ಪತ್ರಕರ್ತರೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ಒಟ್ಟಾರೆ, ಅಸ್ಸಾಂನಲ್ಲಿ ಹಣದ ಹೊಳೆ ಹರಿದಿದ್ದು ದೊಡ್ಡ ಸುದ್ದಿಯಾಗಿದೆ.

English summary
In a bizarre incident at Chachal area under Dispur police station, the local people of the area found currency notes floating in a nearby wet land, which created chaos in the area.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X