ವರ್ತೂರು ಕೊನೆಗೂ ಬಿಜೆಪಿಗೆ ಸೇರ್ಪಡೆಯಾಗ್ತಾರಂತೆ!

ಮುನಿಯಪ್ಪ ಹಿಂದೆ ಕಳ್ಳಹೆಜ್ಜೆ ಹಾಕುತ್ತಾ, 'ಅಹಿಂದ' ಸಿದ್ದರಾಮಯ್ಯನವರನ್ನು ಉದ್ದೇಶಪೂರ್ವಕವಾಗಿ ಮರೆಯುತ್ತಾ, ಸದಾನಂದ ಗೌಡರನ್ನು ನೆರಳಿನಂತೆ ಹಿಂಬಾಲಿಸುವ ಸನ್ಮಾನ್ಯ ವರ್ತೂರು ಅವರು ತಾನು ಪಕ್ಷೇತರನಾಗಿದ್ದು, ಬಿಜೆಪಿಯನ್ನು ಅಪ್ಪಿಕೊಳ್ಳಲು ಏನಾದರೂ ಕಾನೂನು ತೊಡಕುಗಳು ಇವೆಯಾ ಎನ್ನುವುದರ ಬಗ್ಗೆ ಚಿಂತಿಸುವ ಹಂತಕ್ಕೆ ಬಂದು ನಿಂತಿದ್ದಾರೆ.
ವಿಧಾನಸಭೆ ಚುನಾವಣೆಗಳು ಸನಿಹದಲ್ಲೇ ಇರುವಾಗ ವರ್ತೂರರ ಈ ನಡೆ ಕೋಲಾರ ಜನತೆಗೆ ಆಶ್ಚರ್ಯವನ್ನೇನೂ ತಂದಿಲ್ಲ ಎನ್ನಲಾಗಿದೆ. ಆಷಾಢ ಕಳೆಯುತ್ತಿದ್ದಂತೆ ಅರಮನೆ ಮೈದಾನದಲ್ಲಿ ಧಾಂಧೂಮ್ ಆಗಿ ಬಿಜೆಪಿ ಸೇರುವ ಇರಾದೆ ಅವರದಾಗಿದೆ. ಅದಕ್ಕೂ ಮುನ್ನ ಸ್ವಕ್ಷೇತ್ರ ಕೋಲಾರದಲ್ಲಿ ಕಾರ್ಯಕರ್ತರ ಸಮಾವೇಶ ನಡೆಸಿ, ಮುಖಂಡರೊಂದಿಗೆ ಚರ್ಚಿಸುವುದಾಗಿ ಅವರು ಸೋಮವಾರ ಘೋಷಿಸಿದ್ದಾರೆ.
ತಕ್ಕ ಶಿಕ್ಷೆ !? : ಮೊನ್ನೆ ನಡೆದ ಮೇಲ್ಮನೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಯಾವೆಲ್ಲ ಶಾಸಕರು ಅಡ್ಡ ಮತದಾನ ಮಾಡಿದರು ಎಂಬುದು ನನಗೆ ಚೆನ್ನಾಗಿ ಗೊತ್ತು. ಬಿಜೆಪಿ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ಹಾಗೂ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೂ ಗೊತ್ತು. ಅಡ್ಡ ಮತದಾನ ಮಾಡಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜವಳಿ ಖಾತೆ ಸಚಿವ ವರ್ತೂರು ಪ್ರಕಾಶ್ ಅವರು ಘೋಷಿಸಿದರು.
ಆದರೆ ಹೀಗೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಕ್ಕೆ ವರ್ತೂರಿಗೆ ಬಿಜೆಪಿ ಸಮ್ಮತಿಸುವುದೋ ಕಾದುನೋಡಬೇಕು. ಇನ್ನು ಕಾಂಗ್ರೆಸ್ ಏನು ಮಾಡುವುದೋ ಅದೂ ಕುತೂಹಲಕಾರಿಯಾಗಿದೆ!
ಆದರೆ ಅದೇ ಉಸಿರಿನಲ್ಲಿ ತಮ್ಮ ಆತಂಕ ಹೊರಹಾಕಿರುವ ವರ್ತೂರು ಸಾಹೇಬರು ಹಾಗೆ ಕ್ರಮ ಕೈಗೊಂಡರೆ ಸರಕಾರಕ್ಕೆ ಬಹುಮತ ಇಲ್ಲದೇ ಹೋಗಬಹುದು. ಆದ್ದರಿಂದ ಆ ಪ್ರಕ್ರಿಯೆಯನ್ನು ಮುಂದೂಡಲಾಗಿದೆ ಎಂದು ಸ್ಥಿತಪ್ರಜ್ಞರರಂತೆ ನುಡಿದಿದ್ದಾರೆ. ಮುಂದಿನ ಚುನಾವಣೆಯಲ್ಲಿ ಈ ಅಡ್ಡ ಮತದಾನ ಮಾಡಿದವರಿಗೆ ಪಕ್ಷ ಹಾಗೂ ಜನ ಸೂಕ್ತ ಶಿಕ್ಷೆ ವಿಧಿಸಲಿದ್ದಾರೆ ಎಂದೂ ಪಕ್ಷೇತರ ಶಾಸಕ ವರ್ತೂರು ಪ್ರಕಾಶ್ ಪ್ರಕಟಿಸಿದರು.












Click it and Unblock the Notifications