ನೆಚ್ಚಿನ ಮಡದಿಯನ್ನು ಮಚ್ಚಿನಿಂದ ಕೊಚ್ಚಿದ ಕುಡುಕ

30 ವರ್ಷದ ಗೃಹಿಣಿ ಸುಧಾ ಹತ್ಯೆಗೀಡಾದ ದುರ್ದೈವಿ. ಮೂಡಿಗೆರೆ ತಾಲೂಕಿನ ಬಾಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಲ್ಮನೆ ಗ್ರಾಮದ ನಿವಾಸಿ ಚಂದ್ರು ತುಂಬಾ ಇಷ್ಟಪಟ್ಟು ಸುಧಾಳನ್ನು ಮದುವೆಯಾಗಿದ್ದ. 10 ವರ್ಷದಲ್ಲಿ ಪ್ರೀತಿಯ ಪ್ರತೀಕವಾಗಿ ಮೂರು ಜನ ಮುದ್ದಾದ ಮಕ್ಕಳನ್ನು ಪಡೆದಿದ್ದರು.
ಆರಂಭದಲ್ಲಿ ಸುಧಾ ಹಾಗೂ ಚಂದ್ರು ಪ್ರೀತಿ ಕಂಡು ಕಲ್ಮನೆ ಗ್ರಾಮವೇ ಬೆರಗಾಗಿತ್ತು. ಕೂಲಿ ಕೆಲಸಗಾರರಾದರು ತುಂಬಾ ಅನ್ಯೋನ್ಯವಾಗಿದ್ದರು. ಆದರೆ, ಸಹವಾಸ ದೋಷದಿಂದ ಕುಡಿತದ ಚಟ ಹಚ್ಚಿಸಿಕೊಂಡ ಚಂದ್ರು ಸಂಪೂರ್ಣ ಬದಲಾಗಿಬಿಟ್ಟ. ಪ್ರತಿದಿನ ಪತ್ನಿಯೊಂದಿಗೆ ಜಗಳವಾಡತೊಡಗಿದ. ಮದ್ಯವ್ಯಸನಿ ಪತಿಯನ್ನು ಸಂಭಾಳಿಸುವುದು ಸುಧಾಳಿಗೆ ಕಷ್ಟವಾಗತೊಡಗಿತು.
ಸೋಮವಾರ ರಾತ್ರಿ ಮದ್ಯ ಸೇವಿಸಿ ಬಂದ ಚಂದ್ರು ಎಂದಿನಂತೆ ಪತ್ನಿ ಜೊತೆ ಜಗಳ ತೆಗೆದ. ಆದರೆ, ರಾತ್ರಿ ಗಲಾಟೆ ನಂತರ ತೆಪ್ಪಗೆ ಮಲಗಿದ್ದ ಗಂಡ ಬೆಳಗ್ಗೆ ಕ್ಷುಲ್ಲಕ ಕಾರಣಕ್ಕೆ ರೇಗಾಡಿದ್ದನ್ನು ಕಂಡು ಸುಧಾಳ ತಿರುಗಿಬಿದ್ದಳು. ಮಂಗಳವಾರ ಬೆಳಗ್ಗೆ ಮಚ್ಚು ಎತ್ತಿದ ಚಂದ್ರು ಅನಾಯಸವಾಗಿ ತರಕಾರಿ ಕೊಚ್ಚಿದಂತೆ ಸುಧಾಳ ಕುತ್ತಿಗೆ ಕೊಚ್ಚಿದ್ದಾನೆ. ರಕ್ತದ ಮಡುವಿನಲ್ಲಿ ಪತ್ನಿ ಬಿದ್ದಿದ್ದನ್ನು ಕಂಡ ಮೇಲೆ ಅವನಿಗೆ ತನ್ನ ತಪ್ಪಿನ ಅರಿವಾಗಿದೆ. ಕೂಡಲೇ ಮಚ್ಚಿನೊಂದಿಗೆ ಪರಾರಿಯಾಗಿದ್ದಾನೆ.
ಬೆಳಗ್ಗೆ ಮನೆ ಮುಂದೆ ಗದ್ದಲ ಕಂಡು ಎಚ್ಚರಗೊಂಡ ಮೂವರು ಮಕ್ಕಳು, ಸತ್ತು ಬಿದ್ದಿದ್ದ ತಾಯಿಯನ್ನು ಕಂಡು ಬೆಚ್ಚಿದ್ದಾರೆ. ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿ ನೂರಾರು ಜನ ಸ್ಥಳಕ್ಕೆ ಆಗಮಿಸಿ ನಾನಾ ರೀತಿ ಮಾತನಾಡತೊಡಗಿದ್ದಾರೆ. ಕೊನೆಗೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಜನರ ಗುಂಪನ್ನು ಚದುರಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಬಾಳೂರು ಠಾಣೆ ಪೊಲೀಸರು, ಪರಾರಿಯಾದ ಆರೋಪಿ ಚಂದ್ರುವಿನ ಹುಡುಕಾಟದಲ್ಲಿ ತೊಡಗಿದ್ದಾರೆ. ಪರಾರಿಯಾದ ಅಪ್ಪ, ಸತ್ತು ಬಿದ್ದ ಅಮ್ಮನನ್ನು ಕಳೆದುಕೊಂಡ ಮಕ್ಕಳು ಅನಾಥರಾಗಿ ಮನೆಯಲ್ಲೇ ಉಳಿದಿದ್ದಾರೆ.
ವಿಶ್ವ ಮದ್ಯಪಾನ ಮತ್ತು ಮಾದಕ ವಸ್ತು ವಿರೋಧಿ ದಿನಾಚರಣೆ ದಿನದಂದೇ ಮದ್ಯವ್ಯಸನಿಯಿಂದ ಕೊಲೆಯಾಗಿರುವುದು ದುಃಖದ ಸಂಗತಿ. ಮದ್ಯ ವಿರೋಧಿ ಅಭಿಯಾನವನ್ನು ಇನ್ನಷ್ಟು ಬಲವಾಗಿ ತಾಲೂಕಿನಲ್ಲಿ ನಡೆಸಲಾಗುವುದು ಎಂದು ಮದ್ಯ ವ್ಯಸನಿ ಪುನರ್ವಸತಿ ಕೇಂದ್ರದ ಸ್ಥಾಪಕ ಮಗ್ಗಲಮಕ್ಕಿ ಗಣೇಶ್ ಅವರು ಒನ್ ಇಂಡಿಯಾ ಪ್ರತಿನಿಧಿಗೆ ಹೇಳಿದ್ದಾರೆ.












Click it and Unblock the Notifications