ಗಂಡನನ್ನು ನಪುಂಸಕ ಅಂದೀರಿ ಜೋಕೆ : ಕೋರ್ಟ್

ಗಂಡ ನಪುಂಸಕ ಎಂಬ ಕಾರಣಕ್ಕೆ ವಿಚ್ಛೇದನ ನೀಡಿದ ಕೆಳ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಹೂಡಲಾಗಿದ್ದ ಮೇಲ್ಮನವಿಯ ವಿಚಾರಣೆ ನಡೆಸುತ್ತ, ನ್ಯಾಯಮೂರ್ತಿ ಎನ್.ಕೆ.ಪಾಟೀಲ್ ಮತ್ತು ನ್ಯಾ. ಬಿ.ವಿ. ಪಿಂಟೋ ಅವರಿದ್ದ ವಿಭಾಗೀಯ ಪೀಠ ಮೇಲಿನಂತೆ ತನ್ನ ಅಭಿಪ್ರಾಯವನ್ನು ಮಂಡಿಸಿದೆ.
ಭದ್ರಾವತಿ ನಿವಾಸಿಯಾಗಿರುವ ಆತ್ಮಾರಾಮ್ ಸಿಂಗ್ (ಹೆಸರು ಬದಲಿಸಲಾಗಿದೆ) ಎಂಬುವವರು ಶಿವಮೊಗ್ಗ ನ್ಯಾಯಾಲಯ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಹೈಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ. ಆತ್ಮಾರಾಮನ ಹೆಂಡತಿ ರೇಣುಕಾ (ಹೆಸರು ಬದಲಿಸಲಾಗಿದೆ) ಎಂಬಾಕೆ ತನ್ನ ಗಂಡ ನಪುಂಸಕ, ಕುಡಿತದ ದಾಸ ಎಂಬ ಕಾರಣ ನೀಡಿದ್ದ ವಿಚ್ಛೇದನ ಅರ್ಜಿಯನ್ನು ಮನ್ನಿಸಿ ಕೆಳ ನ್ಯಾಯಾಲಯ ತೀರ್ಪು ನೀಡಿತ್ತು.
"ಗಂಡ ಹೆಂಡತಿ ನಡುವಿನ ಸಂಬಂಧ ಅತ್ಯಂತ ಸೂಕ್ಷ್ಮವಾದದ್ದು. ಇಂಥ ವಿಷಯವನ್ನು ಅತ್ಯಂತ ಜಾಗರೂಕತೆಯಿಂದ ನ್ಯಾಯಾಲಯ ನಿಭಾಯಿಸಬೇಕು. ಇಬ್ಬರಿಗೂ ಸಮಾನ ಅವಕಾಶ ನೀಡಿ, ಇಬ್ಬರ ವಾದವನ್ನು ಸರಿಯಾಗಿ ಆಲಿಸಿದ ನಂತರವೇ, ಗಂಡ ನಪುಂಸಕ ಹೌದೋ ಅಲ್ಲವೋ ಎಂಬ ತೀರ್ಮಾನಕ್ಕೆ ಬರಬೇಕು. ಸಂಸಾರ ಸುಗಮವಾಗಿ ನಡೆಸದಿರಲು ನಪುಂಸಕತ್ವವೊಂದೇ ಕಾರಣವಲ್ಲ" ಎಂದು ನ್ಯಾಯಮೂರ್ತಿಗಳು ಅಭಿಪ್ರಾಯ ತಿಳಿಸಿದ್ದಾರೆ.
ಆತ್ಮಾರಾಮ್ ಮತ್ತು ರೇಣುಕಾ ಇಬ್ಬರೂ 2002ರಲ್ಲಿ ಮದುವೆಯಾಗಿದ್ದರು. ಇಬ್ಬರೂ ಭದ್ರಾವತಿಯ ಕೊಳಚೆ ಪ್ರದೇಶದಲ್ಲಿ ವಾಸವಿದ್ದರು. ಆದರೆ, ಜೀವನ ಸುಸೂತ್ರವಾಗಿ ಸಾಗುತ್ತಿರಲಿಲ್ಲ. ಸಣ್ಣಪುಟ್ಟ ಕಾರಣಕ್ಕೆಲ್ಲ ಜಗಳಗಳಾಗುತ್ತಿದ್ದವು. ತಾನು ತಾಯಿಯಾಗದಿರಲು ಗಂಡನ ನಪುಂಸಕತ್ವವೇ ಕಾರಣವೆಂದು ಹೆಂಡತಿ ಮನೆ ಬಿಟ್ಟು ತೆರಳಿಬಿಟ್ಟಿದ್ದಳು.
ಎರಡು ವರ್ಷಗಳಾದರೂ ನಾನು ತಾಯಿ ಆಗಲು ಸಾಧ್ಯವಾಗಿಲ್ಲ. ಗಂಡ ದಿನವೂ ಕುಡಿದು ಬರುತ್ತಿದ್ದ. ಸಣ್ಣ ಕಾರಣಕ್ಕೆಲ್ಲ ಜಗಳ ತೆಗೆಯುತ್ತಿದ್ದ. ನನಗಂತೂ ಎಲ್ಲವನ್ನೂ ಸಹಿರಿಕೊಂಡು ಸಾಕಾಗಿ ಹೋಗಿತ್ತು. ನಾನು ತಾಯಿಯಾಗದಿರಲು ಗಂಡ ನಪುಂಸಕತ್ವವೇ ಕಾರಣ. ಇದು ವೈದ್ಯಕೀಯ ಪರೀಕ್ಷೆಯಿಂದಲೂ ಇದು ಸಾಬೀತಾಗಿದೆ. ಅಲ್ಲದೆ, ಬೇರೆ ಮದುವೆಯಾಗುವುದಾಗಿಯೂ ಆತ ಬೆದರಿಸುತ್ತಿದ್ದ. ನನಗೆ ಗಂಡನಿಂದ ವಿಚ್ಛೇದನ ನೀಡಿರಿ ಎಂದು ರೇಣುಕಾ ಕೆಳ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಳು.
ಆದರೆ, ಗಂಡ ಆತ್ಮಾರಾಮ್ ಮಾತ್ರ ಎಲ್ಲ ಆರೋಪಗಳನ್ನು ಅಲ್ಲಗಳೆದಿದ್ದಾನೆ. ನಾನೇನು ನಪುಂಸಕನಲ್ಲ. ನನಗೆ ಪುರುಷತ್ವ ಇಲ್ಲ ಎಂದು ಹೆಂಡತಿ ಹೇಳಿರುವುದು ಸರಿಯಲ್ಲ. ಪುರುಷತ್ವ ಸಾಬೀತುಪಡಿಸಲು ಯಾವುದೇ ಪರೀಕ್ಷೆಗೆ ನಾನು ಸಿದ್ಧ ಎಂದು ಆತ್ಮಾರಾಮ್ ತನ್ನ ಮೇಲ್ಮನವಿಯಲ್ಲಿ ತಿಳಿಸಿದ್ದಾನೆ.












Click it and Unblock the Notifications