ಚಪ್ಪಾಳೆ ತಟ್ಟುವುದು ಬಿಟ್ಟು ಇದೇನ್ರೀ ರೇಣುಕಾಚಾರ್ಯ?

ಶಾಸಕನಾಗುವುದು ಹಣ ತಿಂದು ತೇಗುವುದಕ್ಕಲ್ಲ. ಅದರಲ್ಲೂ ಸ್ಪೀಕರ್ ಸ್ಥಾನಕ್ಕೆ ಒಂದು ಮರ್ಯಾದೆ ಇರುತ್ತದೆ. ಸಭಾಧ್ಯಕ್ಷ ಹುದ್ದೆ ಬೀದಿ ಹಗರಣ ಆಗಬಾರದು, ಸದನದ ಕಲಾಪ, ನಡವಳಿಕೆ ತಿರುಚುವ ಕೆಲಸ ಮಾಡಬಾರದು ಎಂದು, ಕರ್ನಾಟಕ ವಿಧಾನಸಭೆ ವಜ್ರಮಹೋತ್ಸವ ಸಂದರ್ಭದಲ್ಲಿ ಮಾಜಿ ಸಭಾಧ್ಯಕ್ಷ ಡಿ.ಬಿ. ಚಂದ್ರೇಗೌಡ ಅವರು ತಮ್ಮ ಅನಿಸಿಕೆಗಳನ್ನು ಮುಕ್ತವಾಗಿ ಹಂಚಿಕೊಂಡರು.
ಈ ನುಡಿಗಳನ್ನು ಅಕ್ರಮ ಗಣಿಗಾರಿಕೆಯಲ್ಲಿ ಆರೋಪಿ ಸ್ಥಾನದಲ್ಲಿರುವ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ನಿಕಟವರ್ತಿ ಮತ್ತು ಅಬಕಾರಿ ಸಚಿವ ರೇಣುಕಾಚಾರ್ಯ ಅವರಿಗೆ ಅರಗಿಸಿಕೊಳ್ಳಲು ಆಗಿಲ್ಲ. ಅವರೇನು ಸಾಚಾಗಳಾ, ಅವರೇನು ಹರಿಶ್ಚಂದ್ರನ ವಂಶದವರಾ, ಅವರು ಭ್ರಷ್ಟಾಚಾರದಲ್ಲಿ ಪಾಲ್ಗೊಂಡಿದ್ದಾರೆ ಎಂದು ರೇಣುಕಾಚಾರ್ಯ ಅವರು ಪ್ರತಿ ಪಕ್ಷದ ನಾಯಕನಂತೆ ತಮ್ಮದೇ ಸಹೋದ್ಯೋಗಿಯನ್ನು ತೀವ್ರ ವಾಗ್ದಾಳಿ ಮಾಡಿದ್ದಾರೆ.
ಡಿಬಿ ಚಂದ್ರೇಗೌಡ ಹೇಳುವುದೆಲ್ಲ ಬರೀ ಬೊಗಳೆ. ಅವರೂ ಭ್ರಷ್ಟಾಚಾರದಲ್ಲಿ ಪಾಲ್ಗೊಂಡಿದ್ದಾರೆ. ಅವರು ತಮ್ಮ ಮಗಳಿಗಾಗಿ ಅಕ್ರಮವಾಗಿ ಸೈಟ್ ಕೊಂಡಿದ್ದರು. ಚಂದ್ರೇಗೌಡ ಅವರು ಸಾಚಾ ರಾಜಕಾರಣಿಯಂತೆ ಮಾತನಾಡುವುದನ್ನು ನಿಲ್ಲಿಸಲಿ ಎಂದು ರೇಣುಕಾಚಾರ್ಯ ಅವರು 15ನೇ ಲೋಕಸಭೆಗೆ ಬೆಂಗಳೂರು ಉತ್ತರದಿಂದ ಆಯ್ಕೆಯಾಗಿರುವ ಚಂದ್ರೇಗೌಡರನ್ನು ವಾಚಾಮಗೋಚರವಾಗಿ ನಿಂದಿಸಿದ್ದಾರೆ.
ರೇಣುಕಾಚಾರ್ಯ ಅವರ ವಾಗ್ದಾಳಿಗೆ ತಕ್ಕ ಉತ್ತರ ನೀಡಿರುವ ಚಂದ್ರೇಗೌಡ ಅವರು, ನಾನು ಯಾವ ಹಗರಣದಲ್ಲಿಯೂ ಭಾಗಿಯಾಗಿಲ್ಲ. ನನ್ನ ಮಗಳಿಗೆ ಸಿಕ್ಕ ಸೈಟ್ ವಾಪಸ್ ಮಾಡಲಾಗಿದೆ. ರಾಜಕಾರಣದಲ್ಲಿ ರೇಣುಕಾಚಾರ್ಯರಿಂದ ಹೇಳಿಸಿಕೊಳ್ಳುವ ಅಗತ್ಯವಿಲ್ಲ. ನನಗೆ ತಿಳಿದ ವಿಚಾರ ಹಂಚಿಕೊಂಡಿದ್ದೇನಷ್ಟೆ. ನನ್ನ ಭಾಷಣದಲ್ಲಿ ಏನೇ ಸಂಶಯಗಳಿದ್ದರೆ ನನ್ನ ಜೊತೆ ಅವರು ಚರ್ಚಿಸಬಹುದಿತ್ತು. ಹೀಗೆ, ಬಹಿರಂಗವಾಗಿ ಟೀಕಿಸುವ ಅಗತ್ಯವಿರಲಿಲ್ಲ ಎಂದು ಚಂದ್ರೇಗೌಡ ಅವರು ರೇಣುಕಾಚಾರ್ಯಗೆ ತಿರುಗೇಟು ನೀಡಿದ್ದಾರೆ.
ಚಂದ್ರೇಗೌಡ ಅವರ ಭಾಷಣಕ್ಕೆ ಈ ರೀತಿ ಟೀಕಿಸುವ ಅಗತ್ಯವಾದರೂ ರೇಣುಕಾಚಾರ್ಯ ಅವರಿಗೆ ಏನಿತ್ತು? ತಮ್ಮ ಪಕ್ಷದ ಸದಸ್ಯನನ್ನೇ ಈ ಪಾಟಿ ಟೀಕಿಸುವ ಅಗತ್ಯವಿತ್ತಾ? ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿಕೊಂಡು ರೇಣುಕಾಚಾರ್ಯ ನೋಡಿಕೊಂಡಿದ್ದು ಸರೀನಾ?












Click it and Unblock the Notifications