'ಧಾರ್ಮಿಕ ಭಯೋತ್ಪಾದಕ' ನಿತ್ಯಾನಂದ ರಕ್ಷಣೆಗೆ 20 ಲಕ್ಷ

ಕಳೆದ ಗುರುವಾರ ನಿತ್ಯಾನಂದ ಸ್ವಾಮಿ ಜಾಮೀನು ನಾಟಕ ನಡೆಯಿತಲ್ಲಾ? ಅಂದು ರಾಮನಗರ ನ್ಯಾಯಾಲಯದಲ್ಲಿ ಪೊಲೀಸ್ ಬಂದೂಬಸ್ತ್ ಗಾಗಿ ಸರಕಾರ 20 ಲಕ್ಷ ರುಪಾಯಿ ಪೋಲು ಮಾಡಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ರಾಮನಗರದ JMF ನ್ಯಾಯಾಲಯವು ಸ್ವಾಮಿ ನಿತ್ಯಾನಂದನಿಗೆ ಜಾಮೀನು ಮಂಜೂರು ಮಾಡುತ್ತಿದ್ದಂತೆ ಸ್ಥಳದಲ್ಲಿದ್ದ ಪೊಲೀಸರಿಗೆ ಚಳಿಜ್ವರ ಬಂದಂತೆ ಆಗಿತ್ತು. ಆ ಘಟನಾವಳಿಯ ಸುತ್ತಮುತ್ತ ಸ್ವಾಮಿಗೆ ಅಭೂತಪೂರ್ವ ಬಂದೋಬಸ್ತ್ ಏರ್ಪಡಿಸಿ ಕೃತಾರ್ಥರಾದರು.
2 ಅಗ್ನಿಶಾಮಕ ವಾಹನಗಳು, ಆಂಬುಲೆನ್ಸುಗಳು, ಅಶ್ರುವಾಯು ಸಿಡಿಸುವ ಗಟ್ಟಿಮುಟ್ಟಾದ ವಜ್ರ ವ್ಯಾನುಗಳು ಅವುಗಳ ಜತೆಗೆ ಇರಲಿ ಅಂತ ಕ್ಷಿಪ್ರ ಕಾರ್ಯಪಡೆ ವಾಹನಗಳು, ಇವುಗಳ ಮಧ್ಯೆ ಇಡೀ ಜಿಲ್ಲಾ ಪೊಲೀಸ್... ಹೀಗೆ ಪೊಲೀಸರ ಭದ್ರ ಕೋಟೆಯಲ್ಲಿ ಸ್ವಾಮಿ ನಿತ್ಯಾನಂದರು ಸುಭ್ರವಾಗಿದ್ದರು.
ಅಷ್ಟೇ ಅಲ್ಲ. ಇಷ್ಟೆಲ್ಲ ನಡೆಯುತ್ತಿದ್ದ ಪ್ರದೇಶದಲ್ಲಿ ಸಂಬಂಧಪಟ್ಟ ಪೊಲೀಸ್ ಉನ್ನತಾಧಿಕಾರಿಯೊಬ್ಬರು ತರಬೇತಿಗೆಂದು ವಿದೇಶಕ್ಕೆ ತೆರಳಿದ್ದರು. ನಿತ್ಯಾನಂದನ ರೂಪದಲ್ಲಿ ದೊಡ್ಡ ಬಿಕ್ಕಟ್ಟು ಎದುರಾಗಿರುವಾಗ ಆ ಹುದ್ದೆ ಖಾಲಿ ಬಿದ್ದಿದ್ದರೆ ಹೇಗೆ ಎಂದು ಪೊಲೀಸ್ ಇಲಾಖೆ ಆಲೋಚಿಸಿತು. ತಡವೇಕೆ? ಅದಕ್ಕೆಂದೇ ತಕ್ಷಣ ಆಂತರಿಕ ಭದ್ರತೆ ಹೊಣೆಹೊತ್ತಿರುವ ಐಜಿಪಿ ಭಾಸ್ವರ ರಾವ್ ಅವರನ್ನು ಸೆಂಟ್ರಲ್ ರೇಂಜಿನ ಹೆಚ್ಚುವರಿ ಐಜಿಪಿಯನ್ನಾಗಿ ನೇಮಿಸಲಾಯಿತು. ಅಂದಹಾಗೆ ತರಬೇತಿಗಾಗಿ ವಿದೇಶಕ್ಕೆ ತೆರಳಿರುವ ಹಿರಿಯ ಅಧಿಕಾರಿಣಿ ಮತ್ತೊಬ್ಬ ಐಜಿಪಿ ಮಾಲಿನಿ ಕೃಷ್ಣಮೂರ್ತಿ.
ಇಷ್ಟೆಲ್ಲ ಪೊಲೀಸ್ ನಾಟಕ ಏಕಪ್ಪಾ ಅಂದರೆ ಯಾರಾದರೂ ನಿತ್ಯಾನಂದ ಸ್ವಾಮಿಗಳ ಮೇಲೆ ದಾಳಿ ಮಾಡಿಬಿಟ್ಟರೆ ಗತಿಯೇನು ಎಂಬ ಆತಂಕ ಪೊಲೀಸರದ್ದು. ಜತೆಗೆ, ಇವಯ್ಯನೇ ಏನಾದರೂ ಮಾಡಿಕೊಂಡುಬಿಟ್ಟರೆ. ಚಿಕ್ಕದಾಗಿ ಗಾಯಗೀಯಾ ಅಂತ ಮೈಗೀರಿಕೊಂಡರೆ ಎಂಬ ಭಯವೂ ಕಾಡಿದೆ. ಹಾಗಾಗಿ, ಚನ್ನಪಟ್ಟಣ ಪೊಲೀಸ್ ತರಬೇತಿ ಕೇಂದ್ರದಲ್ಲಿ ಸ್ವಾಮಿಗಳು 'ಅದಕ್ಕೆ' ಹೋದಾಗಲೂ ಆತನನ್ನು ಕಾಯಲು ಪೊಲೀಸ್ ಪೇದೆಗಳನ್ನು ನಿಯೋಜಿಸಿ, ಕಾಪಾಡಲಾಗಿತ್ತು.
ನಾಳೆ ಸಿಎಂ ಸಾಹೇಬ್ರು ಹೈಕೋರ್ಟ್ ಕಟೆಕಟೆಯಲ್ಲಿ: ಕೊನೆಗೆ ಇಷ್ಟೆಲ್ಲ ರಕ್ಷಣೆ ಕೊಟ್ಟು ತನ್ನನ್ನು ಕಾಪಾಡಿದ್ದಕ್ಕೆ ನಿತ್ಯಾನಂದ ಸರಕಾರಕ್ಕೆ ಕೊಟ್ಟ ಬಹುಮತಿ ಏನು ಗೊತ್ತೆ? ನಷ್ಟ ಪರಿಹಾರ ಕಾರ್ಯಾರ್ಥ ಮುಖ್ಯಮಂತ್ರಿಯ ವಿರುದ್ಧವೇ 10 ಕೋಟಿ ರು. ಕೇಸು ದಾಖಲು. ನಾಳೆ ಸೋಮವಾರ ಸಿಎಂ ಸಾಹೇಬ್ರು ಹೈಕೋರ್ಟ್ ಕಟೆಕಟೆಯಲ್ಲಿ ಕೈಕಟ್ಟಿ ನಿಲ್ಲಬೇಕು. ಖುದ್ದು ವಕೀಲರಾದ ಸದಾನಂದರು ಏನೆಂದು ಪ್ರತಿವಾದ ಮಂಡಿಸುತ್ತಾರೋ ಇಡೀ ನಾಡು ಕುತೂಹಲದಿಂದ ಕಾಯುತ್ತಿದೆ.












Click it and Unblock the Notifications