ಇಂಗ್ಲೆಂಡಿಗೆ ನಾಕೌಟ್ ಆಸೆ, ಸ್ವೀಡನ್ ಔಟ್

ಇಂಗ್ಲೆಂಡ್ ತಂಡದ ಮುಂಪಡೆ ಆಟಗಾರರಲ್ಲಿ ಉತ್ಸಾಹ ಕುಗ್ಗುತ್ತಿರುವ ಸಂದರ್ಭದಲ್ಲಿ ಮೂರು ಗೋಲು ಬಾರಿಸಿ ಜಯಗಳಿಸಿರುವುದು ತಂಡಕ್ಕೆ ಸಂತಸ ತಂದರೂ, 2 ಗೋಲು ಹೊಡೆಸಿಕೊಂಡಿರುವುದು ರಕ್ಷಣಾ ತಂತ್ರಕ್ಕೆ ಬಲವಾದ ಎಚ್ಚರಿಕೆ ನೀಡಿದೆ.
23ನೇ ನಿಮಿಷದಲ್ಲಿ ಆ್ಯಂಡಿ ಕ್ಯಾರೊಲ್ ಬಾರಿಸಿದ ಗೋಲಿನಿಂದ ಇಂಗ್ಲೆಂಡ್ ಮುನ್ನಡೆಯನ್ನು ಪಡೆದುಕೊಂಡಿತು. ಆದರೆ 49ನೇ ನಿಮಿಷದಲ್ಲಿ ಗ್ಲೆನ್ ಜಾನ್ಸನ್ ತಮ್ಮದೇ ಗೋಲ್ ಬಾಕ್ಸಿನೊಳಗೆ ಬಾರಿಸಿದ ಗೋಲು ಮತ್ತು 59ನೇ ನಿಮಿಷದಲ್ಲಿ ಒಲ್ಫ್ ಮೆಲ್ಲ್ ಬರ್ಗ್ ಬಾರಿಸಿದ ಗೋಲಿನಿಂದ ಇಂಗ್ಲೆಂಡ್ ಹಿನ್ನಡೆ ಅನುಭವಿಸಿತು.
ಆದರೆ ವಲ್ಕಾಟ್ 64ನೇ ನಿಮಿಷದಲ್ಲಿ ಬಾರಿಸಿದ ಗೋಲಿನಿಂದ ಇಂಗ್ಲೆಂಡ್ ಸಮಬಲ ಸಾಧಿಸಿತು.78ನೇ ನಿಮಿಷದಲ್ಲಿ ವಲ್ಕಾಟ್ ಬಾರಿಸಿದ ಗೋಲಿನಿಂದ ಇಂಗ್ಲೆಂಡ್ ಗೆಲುವು ತನ್ನದಾಗಿಸಿಕೊಂಡಿತು.
ಸ್ವೀಡನ್ ವಿರುದ್ಧ ಸ್ಪರ್ಧಾತ್ಮಕ ಫುಟ್ಬಾಲ್ ನಲ್ಲಿ ಇಂಗ್ಲೆಂಡಿನ ಮೊದಲ ಗೆಲುವು ಎಂಬುದು ಗಮನಾರ್ಹ. ಗೆಲುವಿನೊಂದಿಗೆ ಇಂಗ್ಲೆಂಡ್ ಕ್ವಾರ್ಟರ್ ಫೈನಲ್ ಪ್ರವೇಶದ ಅವಕಾಶ ಹೆಚ್ಚಿದೆ. ಉಕ್ರೇನ್ ವಿರುದ್ಧದ ಅಂತಿಮ ಪಂದ್ಯದಲ್ಲಿ ಇಂಗ್ಲೆಂಡಿಗೆ ಒಂದು ಅಂಕದ ಅಗತ್ಯವಿದೆ.
ಸ್ವೀಡನ್ ನಾಯಕ ಇಬ್ರಾಹಿಮೊವಿಕ್, ಲಾರ್ಸನ್, ಮೆಲ್ಬರ್ಗ್, ಒಲ್ಸನ್ ಉತ್ತಮ ಆಟ ಪ್ರದರ್ಶಿಸಿ ದ್ವಿತೀಯಾರ್ಧದಲ್ಲಿ ಸತತ ದಾಳಿ ನಡೆಸಿದರೂ ಮೂರನೇ ಗೋಲು ಗಳಿಸಲು ಸಾಧ್ಯವಾಗಲಿಲ್ಲ.
ಇಂಗ್ಲೆಂಡ್ ತನ್ನ ಮುಂದಿನ ಪಂದ್ಯವನ್ನು ಜೂ.20 ರಂದು ಉಕ್ರೇನ್ ವಿರುದ್ಧ ಆಡಲಿದೆ. ಅದೇ ಸಮಯಕ್ಕೆ ಫ್ರಾನ್ಸ್ ಕೂಡಾ ಸ್ವೀಡನ್ ವಿರುದ್ಧ ಕಾದಾಡಲಿದೆ. ಈ ಪಂದ್ಯದ ನಂತರ ಡಿ ಗುಂಪಿನ ಮೊದಲ ಎರಡು ಸ್ಥಾನ ಪಡೆಯುವ ತಂಡಗಳು ನಿರ್ಧಾರವಾಗಲಿದೆ. ನಾಕೌಟ್ ಹಂತಕ್ಕೆ ಇಂಗ್ಲೆಂದ್ ಹಾಗೂ ಫ್ರಾನ್ಸ್ ಹೋಗುವುದು ಬಹುತೇಕ ಖಚಿತವಾಗಿದೆ.
| ಸ್ವೀಡನ್ | 2 - 3 | ಇಂಗ್ಲೆಂಡ್ |
| 8(4) | ಗೋಲು ಯತ್ನ(ಗುರಿಗೆ ಹತ್ತಿರವಾಗಿದ್ದು) | 9(6) |
| 3 | ಕಾರ್ನರ್ಸ್ | 3 |
| 14 | ಫೌಲ್ಸ್ | 10 |
| 0 | ಆಫ್ ಸೈಡ್ | 0 |
| 3 | ಹಳದಿ ಕಾರ್ಡ್ | 1 |
| 0 | ಕೆಂಪು ಕಾರ್ಡ್ | 0 |
ಉಕ್ರೇನ್ ಗೂ ಅವಕಾಶವಿದೆ: ಆದರೆ, ಅತಿಥೇಯ ಉಕ್ರೇನ್ ಕೂಡಾ ಉತ್ತಮ ಆಟ ಪ್ರದರ್ಶಿಸುತ್ತಿದ್ದು, ಸ್ವೀಡನ್ ವಿರುದ್ಧ ಗೆಲುವು ಪಡೆದಿತ್ತು. ಆದರೆ, ಫ್ರಾನ್ಸ್ ದಾಳಿಗೆ ಸಿಲುಕಿ ಪಂದ್ಯ ಕಳೆದುಕೊಂಡಿತು. ಆದರೆ, ಉಕ್ರೇನ್ ದಾಳಿ ಸ್ವೀಡನ್ ಗಿಂತ ಉತ್ತಮ ವಾಗಿದ್ದು, ದುರ್ಬಲಗೊಂಡಿರುವ ಇಂಗ್ಲೆಂಡ್ ರಕ್ಷಣಾ ವ್ಯೂಹವನ್ನು ಸುಲಭವಾಗಿ ಹೊಡೆದು ಹಾಕುವ ಸಾಧ್ಯತೆಯಿದೆ.
ಇಂಗ್ಲೆಂಡ್ ಪರ ಟೆರಿ ಹಾಗೂ ಜೆರಾಲ್ಡ್ ಹೆಚ್ಚಿನ ಜವಾಬ್ದಾರಿ ತೆಗೆದುಕೊಳ್ಳದಿದ್ದರೆ ಉಕ್ರೇನ್ನಿನ ಅನುಭವಿ ಆಟಗಾರ ಶೆವ್ಚೆಂಕೋ ದಾಳಿ ತಡೆಯುವುದು ಕಷ್ಟ ಎಂಬ ವಿಷಯ ಇಂಗ್ಲೆಂಡಿನ ಹೊಸ ಮ್ಯಾನೇಜರ್ ಹಾಜ್ಸನ್ ಗೂ ಗೊತ್ತಿದೆ. ಹೀಗಾಗಿ ಟೂರ್ನಿಯ ಅಂತಿಮ ಲೀಗ್ ಪಂದ್ಯ ಕೂಡಾ ಕುತೂಹಲ ಕೆರಳಿಸಲಿದೆ.












Click it and Unblock the Notifications