ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಜಲ್ ಕಿಂಗ್ ಮೆಹದಿ ಹಸನ್ ಖಾನ್ ಇನ್ನಿಲ್ಲ

By Prasad
|
Google Oneindia Kannada News

King of ghazal Mehdi Hassan Khan is no more
ಕರಾಚಿ, ಜೂ. 13 : ಗಜಲ್ ಕಿಂಗ್ ಎಂದೇ ಖ್ಯಾತರಾಗಿದ್ದ ಪಾಕಿಸ್ತಾನದ ಖ್ಯಾತ ಗಜಲ್ ಹಾಡುಗಾರ ಮೆಹದಿ ಹಸನ್ ಖಾನ್ (84) ಅವರು ಬುಧವಾರ ಜೂನ್ 13ರಂದು ಪಾಕಿಸ್ತಾನದ ಕರಾಚಿಯ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ದೀರ್ಘಾವಧಿಯ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರು ಸುಮಾರು ಎರಡು ವರ್ಷಗಳಿಂದ ಶ್ವಾಸಕೋಶ ಸೋಂಕಿನಿಂದ ಬಳಲುತ್ತಿದ್ದರು.

ಅದ್ಭುತ ಹಾಡುಗಾರಿಕೆಯಿಂದ ಶ್ರೋತೃಗಳನ್ನು ಮಂತ್ರಮುಗ್ಧರನ್ನಾಗಿಸುತ್ತಿದ್ದ ಮೆಹದಿ ಹಸನ್ ಅವರು ಹುಟ್ಟಿದ್ದು 1927ರ ಜುಲೈ 18ರಂದು ರಾಜಸ್ತಾನದ ಲುನಾ ಎಂಬ ಗ್ರಾಮದಲ್ಲಿ. ಅವರ ಇಡೀ ವಂಶವೇ ಸಂಗೀತ ಸಾಗರದಲ್ಲಿ ತೇಲಾಡಿದ್ದು, ಹಸನ್ ಅವರು ಈ ವಂಶದ 16ನೇ ಪೀಳಿಗೆಯವರು. ಭಾರತ ಮತ್ತು ಪಾಕಿಸ್ತಾನ ವಿಭಾಗವಾದಾಗ ಪಾಕ್‌ಗೆ ತೆರಳಿದ್ದರಿಂದ ಪಾಕ್ ನೆಲವನ್ನೇ ಅವರ ಸಂಗೀತದ ಬೇರುಗಳು ಬಲವಾಗಿ ಹಿಡಿದುಕೊಂಡವು.

ಬಾಲ್ಯದಲ್ಲಿಯೇ ಗಜಲ್ ಹಾಡಲು ಪ್ರಾರಂಭಿಸಿದ ಹಸನ್ ಅವರು ತಮ್ಮ ಅಣ್ಣನೊಂದಿಗೆ ಕಚೇರಿಗಳನ್ನು ನೀಡಲು ಪ್ರಾರಂಭಿಸಿದ್ದರು. ಅವರು 20 ವರ್ಷದವರಿದ್ದಾಗ ಪಾಕಿಸ್ತಾನಕ್ಕೆ ತೆರಳಿದ ಮೇಲೆ ಭಾರೀ ಹಣಕಾಸಿನ ತೊಂದರೆಗೆ ಅವರು ಕುಟುಂಬ ಸಿಲುಕಿತು. ಆಗ ಬದುಕು ಸಾಗಿಸಲು ಸೈಕಲ್ ರಿಪೇರಿ ಕೆಲಸ ಮಾಡುತ್ತಲೇ ಹಾಡುಗಾರಿಕೆಯಲ್ಲಿ ಅವರು ತೊಡಗಿಕೊಂಡರು. 1957ರಲ್ಲಿ ಪಾಕಿಸ್ತಾನದ ರೇಡಿಯೋದಲ್ಲಿ ಅವರಿಗೆ ಹಾಡಲು ಸಿಕ್ಕ ಅವಕಾಶ ಅವರ ಅದೃಷ್ಟದ ಬಾಗಿಲನ್ನು ತೆರೆಯಿತು.

ನಂತರ ಅವರು ಹಿಂದೆ ತಿರುಗಿ ನೋಡಲಿಲ್ಲ. ಮುಂದೆ ಕಾರು ಮತ್ತು ಡೀಸೆಲ್ ಟ್ರಾಕ್ಟರ್ ಮೆಕ್ಯಾನಿಕ್ ಆಗಿ ಕೆಲಸ ನಿರ್ವಹಿಸಿದರೂ ಕೆಲ ಕಾಲದ ನಂತರ ಪೂರ್ಣಪ್ರಮಾಣದಲ್ಲಿ ಸಂಗೀತದಲ್ಲಿ ತೊಡಗಿಕೊಂಡರು. ಆರಂಭದಲ್ಲಿ ಉರ್ದು ಕಾವ್ಯದ ಮೇಲೆ ಅಪಾರ ಆಸಕ್ತಿ ಹೊಂದಿದ್ದ ಹಸನ್ ಗಜಲ್ ಹಾಡುಗಳನ್ನು ಆಗಾಗ ಹಾಡುತ್ತಿದ್ದರು. ಮುಂದೆ ಅವಕಾಶ ಹೆಚ್ಚಿದಂತೆಲ್ಲ ಗಜಲ್ ಕ್ಷೇತ್ರವನ್ನೇ ಅವರು ಪೂರ್ಣ ಪ್ರಮಾಣದಲ್ಲಿ ಅಪ್ಪಿಕೊಂಡರು. ಪಾಕಿಸ್ತಾನ ಚಲನಚಿತ್ರಗಳಲ್ಲಿ ಕೂಡ ಅವರು ಹಿನ್ನೆಲೆ ಗಾಯಕರಾಗಿ ಪ್ರಸಿದ್ಧಿ ಪಡೆದರು.

ಎಷ್ಟೇ ಹಣ, ಗೌರವ ಗಳಿಸಿದರೂ ಅವರ ಆರೋಗ್ಯ ಅವರನ್ನು ಸಂಗೀತ ಕ್ಷೇತ್ರದಲ್ಲಿ ಮುಂದುವರಿಯಲು ಬಿಡಲಿಲ್ಲ. ಶ್ವಾಸಕೋಶ ಸೋಂಕಿನಿಂದ ಬಳಲುತ್ತಿದ್ದ ಅವರು 1999ರಲ್ಲಿ ಹಾಡುಗಾರಿಕೆಗೆ ಗುಡ್ ಬೈ ಹೇಳಿದರು. ಅವರು ಪಾಕಿಸ್ತಾನ ಮಾತ್ರವಲ್ಲ ಭಾರತದಿಂದಲೂ ಅನೇಕ ಪ್ರಶಸ್ತಿ, ಗೌರವಗಳಿಗೆ ಭಾಜನರಾದರು. ಪಾಕಿಸ್ತಾನ ತಮಘಾ-ಇ-ಇಮ್ತಿಯಾಜ್ ಪ್ರಶಸ್ತಿ ನೀಡಿದರೆ, 1979ರಲ್ಲಿ ಭಾರತ ಸೈಗಲ್ ಪ್ರಶಸ್ತಿ ನೀಡಿ ಗೌರವಿಸಿತು. ನೇಪಾಳ ಮತ್ತು ದುಬೈ ರಾಷ್ಟ್ರಗಳು ಕೂಡ ಅವರ ಹಾಡುಗಾರಿಕೆಗೆ ಮರುಳಾಗಿ ಪ್ರಶಸ್ತಿಗಳನ್ನು ನೀಡಿವೆ. [ಗಝಲ್ ಗಾರುಡಿಗ ಮೆಹದಿ ಹಸನ್ ಗಾನಾಮೃತ-ವಿಡಿಯೊ]

English summary
A formidable name in the ghazal world, Mehdi Hassan Khan (84) passes away in Pakistan hospital after a prolonged illness. He was 84. A soulful voice silenced.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X