• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವೈದ್ಯನಾಗಬೇಕೆಂಬ ಕನಸು ಹೊತ್ತ ದೇವದಾಸಿ ಮಗ

By * ಸಾಗರ್ ದೇಸಾಯಿ, ಯಾದಗಿರಿ
|

ಇಂಥದೊಂದು ಸಂದರ್ಭ ತೀರಾ ಅಪರೂಪ ಎಂದೇ ಹೇಳಬಹುದು. ತನ್ನದಲ್ಲದ ತಪ್ಪಿನಿಂದಾಗಿ ಸಾಮಾಜಿಕ ಅವಗಣನೆಗೆ ಗುರಿಯಾದ ದೇವದಾಸಿ ಮಹಿಳೆಯ ಮಗನೊಬ್ಬ ಯಾರೂ ಮಾಡದ ಅಪರೂಪದ ಸಾಧನೆ ಮಾಡಿದ್ದಾನೆ. ತೀವ್ರ ಹಣಕಾಸಿನ ತೊಂದರೆಯಿಂದಾಗಿ ಆತನ ಉನ್ನತ ವ್ಯಾಸಂಗದ ಕನಸು ಈಗ ಭಗ್ನವಾಗುವ ಹಂತಕ್ಕೆ ತಲುಪಿದೆ.

ಬಹುವರ್ಷಗಳ ಹಿಂದಿನಿಂದಲೂ ಚಾಲ್ತಿಯಲ್ಲಿದ್ದ ದೇವದಾಸಿ ಪದ್ದತಿಗೆ ರಾಜ್ಯದ ಅಲ್ಪಸಂಖ್ಯಾತ ದಲಿತ ಮಹಿಳೆಯರು ಬಲಿಪಶುವಾಗಿದ್ದಾರೆ. ಅನ್ಯಾಯಕ್ಕೆ ತುತ್ತಾದ ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ದೋರನಹಳ್ಳಿ ಗ್ರಾಮದ ಯಲ್ಲಮ್ಮ ಎನ್ನುವ ಈ ದಲಿತ ಮಹಿಳೆ ತನ್ನ ಜೀವಮಾನದುದ್ದಕ್ಕೂ ಸಾಕಷ್ಟು ಅವಮಾನ ಅನುಭವಿಸಿದ್ದಾಳೆ. ಆದರೂ ಆಕೆ ಹೆಮ್ಮೆ ಪಡುವಂತೆ ಆಕೆಯ ಮಗ ಮರಿಲಿಂಗಪ್ಪ ಇಂದು ಯಾರೂ ನಿರೀಕ್ಷಿಸದ ರೀತಿಯಲ್ಲಿ ವೈದ್ಯಕೀಯ ವ್ಯಾಸಂಗ ಮಾಡುವ ನಿಟ್ಟಿನತ್ತ ಸಾಗಿದ್ದಾನೆ.

ಎಸ್ಸೆಸ್ಸೆಲ್ಸಿಯಲ್ಲಿ 502 ಅಂಕ ಹಾಗೂ ದ್ವಿತೀಯ ಪಿಯುಸಿಯಲ್ಲಿ 489 ಅಂಕ ಪಡೆದು ಈ ಸಲ ನಡೆದ ಸಿಇಟಿ ಪರೀಕ್ಷೆಯಲ್ಲಿ ವೈದ್ಯಕೀಯದಲ್ಲಿ 7672ನೇ ರ‍್ಯಾಂಕ್ ಹಾಗೂ ಇಂಜಿನಿಯರಿಂಗ್ ನಲ್ಲಿ 10,420ನೇ ರ‍್ಯಾಂಕ್ ಪಡೆದಿದ್ದಾನೆ. ಆತನ ಕನಸು ವೈದ್ಯಕೀಯ ಸೇವೆ ಸೇರಬೇಕೆಂಬುದಾಗಿದೆ. ಆದರೆ ತೀವ್ರ ಹಣಕಾಸಿನ ತೊಂದರೆಯಿಂದ ಈ ಕುಟುಂಬಕ್ಕೆ ಯಾವುದೇ ಆರ್ಥಿಕ ಬಲವಿಲ್ಲ. ತೀವ್ರ ಆರ್ಥಿಕ ತೊಂದರೆಯಿಂದ ಓದು ಅಸಾಧ್ಯವಾಗುವ ಚಿಂತೆಯಲ್ಲಿದ್ದಾನೆ ಮರಿಲಿಂಗಪ್ಪ.

ಯಾರಾದರೂ ದಾನಿಗಳು ತನ್ನ ಮಗನ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಿ ಅಂತಿದ್ದಾರೆ ಆತನ ತಾಯಿ ಯಲ್ಲಮ್ಮ. ಯಾವುದೇ ರೀತಿಯ ಕೃಷಿ ಭೂಮಿಯಾಗಲೀ ಅಥವಾ ಇನ್ಯಾವುದೋ ಆರ್ಥಿಕ ವ್ಯವಸ್ಥೆ ಇಲ್ಲದ ಯಲ್ಲಮ್ಮಳ ಕೌಟುಂಬಿಕ ಜೀವನ ನಿತ್ಯದ ತುತ್ತಿಗಾಗಿ ಪರದಾಡುತ್ತಿದೆ. ವ್ಯವಸ್ಥೆಯ ಸಂಚಿಗೆ ಬಲಿಯಾದ ಆಕೆಗೆ ನಾಲ್ವರು ಮಕ್ಕಳು. ಆ ಪೈಕಿ ಇಬ್ಬರು ಹಿರಿಯ ಹೆಣ್ಣುಮಕ್ಕಳಿಗೆ ಮದುವೆ ಮಾಡಿಸಿ ದೇವದಾಸಿಯಂತಹ ಅನಿಷ್ಟ ಪದ್ದತಿಯಿಂದ ಅವರನ್ನು ದೂರವಿಟ್ಟಿದ್ದಾಳೆ.

ತನ್ನ ಎಡಗಾಲಿನ ಅಂಗವಿಕಲತೆಯಿಂದ ಸಹಜವಾಗಿ ನಡೆಯಲು ತೀವ್ರ ಕಷ್ಟಪಡುವ ಮರಿಲಿಂಗಪ್ಪ ಓದಿನಲ್ಲಿ ಮುಂದೆ ಇದ್ದರೂ ಕೂಡಾ ಕೃಷಿಕನಂತೆ ತನ್ನ ಸಂಬಂಧಿಗಳ ಮನೆಯಲ್ಲಿರುವ ಎತ್ತುಗಳ ಆರೈಕೆಯಲ್ಲಿ ತೊಡಗಿದ್ದಾನೆ. ಜೀವನಕ್ಕಾಗಿ ಅಷ್ಟುಇಷ್ಟು ದುಡಿಯುತ್ತಿದ್ದಾನೆ. ಈತನ ನಂತರ ಹುಟ್ಟಿದ ಇನ್ನೊಬ್ಬ ಹೆಣ್ಣುಮಗಳು ಸೇರಿದಂತೆ ಮೂರು ಜನ ಇರುವ ಈ ಕುಟುಂಬಕ್ಕೆ ಕೂಲಿ ನಾಲಿ ಮಾಡುತ್ತಿರುವ ಮಲ್ಲಮ್ಮಳೆ ಪ್ರಮುಖ ಆಸರೆ.

ಮರಿಲಿಂಗಪ್ಪ ಓದಿನಲ್ಲಿ ಮುಂದೆ ಇರುವುದನ್ನು ಗಮನಿಸಿದ ಅವರ ಸಂಬಂಧಿಗಳು ಹಾಗೂ ಬಾಲ್ಯ ಗೆಳೆಯ ರಿಯಾಜ್ ಇಲ್ಲಿಯವರೆಗೂ ತಮ್ಮ ಕೈಲಾದ ಸಹಾಯ ಮಾಡುತ್ತಾ ಆತನ ವಿದ್ಯಾಭ್ಯಾಸಕ್ಕೆ ಎಲ್ಲ ರೀತಿಯ ಪ್ರೋತ್ಸಾಹ ನೀಡುತ್ತಲೇ ಬಂದಿದ್ದಾರೆ. ಆದರೆ ವೈದ್ಯಕೀಯ ವಿದ್ಯಾಭ್ಯಾಸಕ್ಕಾಗಿ ಆರ್ಥಿಕ ಸಹಾಯ ಮಾಡುವುದು ಅವರ ಊಹೆಗೂ ನಿಲಕದ ವಿಷಯ. ಹಾಗಾಗಿ ಅವರು ಕೂಡಾ ಯಾರಾದರೂ ಧನ ಸಹಾಯ ಮಾಡಿ ಬಡ ದಲಿತ ಕುಟುಂಬದ ಕನಸಿನ ಹುಡುಗ ಮರಿಲಿಂಗಪ್ಪನ ವಿದ್ಯಾರ್ಥಿ ಜೀವನಕ್ಕೆ ದಾರಿಯಾಗಿ ಅಂತಿದ್ದಾರೆ.

ಎಷ್ಟೋ ಸಂದರ್ಭಗಳಲ್ಲಿ ತೊಂದರೆಯಲ್ಲಿರುವವರಿಗೆ ಮಿಡಿಯುವ ಔದಾರ್ಯವಿರುವ ಕನ್ನಡಿಗರು ಹಾಗೂ ಹೊರನಾಡ ಕನ್ನಡಿಗರು ಇಂತಹ ದೈನೇಸಿ ಸ್ಥಿತಿಯಲ್ಲಿರುವ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಿದರೆ, ಸತತ ಅನ್ಯಾಯಕ್ಕೆ ಒಳಗಾದ ದೇವದಾಸಿ ಕುಟುಂಬದ ಹೆಣ್ಣುಮಗಳ ಕುಡಿಯೊಂದು ವೈದ್ಯಕೀಯ ವ್ಯಾಸಂಗ ಮುಗಿಸಿ ಸಮಾಜಕ್ಕೆ ಮಾದರಿಯಾಗಬಲ್ಲದು ಎಂದು ಮರಿಲಿಂಗಪ್ಪ ಅವರು ಒನ್ಇಂಡಿಯಾ ಕನ್ನಡದ ಮುಖಾಂತರ ದಾನಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.

ಮರಿಲಿಂಗಪ್ಪನ ದೂರವಾಣಿ ಸಂಖ್ಯೆ : 98804 23217

ಬ್ಯಾಂಕ್ ಖಾತೆ: ಕೃಷ್ಣ ಗ್ರಾಮೀಣ ಬ್ಯಾಂಕ್, ದೋರನಹಳ್ಳಿ

ಸಂಖ್ಯೆ : 2042060502

IFSC code: SBIN0RRKRGB

English summary
A brilliant student, but son of a devadasi, is dreaming to become a doctor one day. But, his family background and poor financial conditions are threatening to dash his dream. Help Marilingappa from Yadgir district financially to get a seat for MBBS.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X