ರೆಡ್ಡಿಗೆ ಬೇಲ್: ಡೀಲರ್ ಯಾದಗಿರಿ ಬಂದಿಸಿಲ್ಲ : ಎಸಿಬಿ

ಲಂಚ ಪಡೆದು ಜಾಮೀನು ನೀಡಿದ ಆರೋಪ ಎದುರಿಸುತ್ತಿರುವ ಜಡ್ಜ್ ಪಟ್ಟಾಭಿರಾಮರಾವ್ ಜೊತೆ ಡೀಲ್ ಕುದುರಿಸಿದ್ದ ಯಾದಗಿರಿ ಸಿಕ್ಕಿ ಬಿದ್ದರೆ ಉಳಿದ ಆರೋಪಿಗಳನ್ನು ಸುಲಭವಾಗಿ ಬಾಯ್ಬಿಡಿಸಬಹುದು ಎನ್ನಲಾಗಿದೆ.
ಆದರೆ ಪಿ ಯಾದಗಿರಿರಾವ್ ಬಂಧನದ ಬಗ್ಗೆ ಗೊಂದಲ ಇನ್ನೂ ಮುಂದುವರೆದಿದೆ. ಎಸಿಬಿ ನ್ಯಾಯಾಲಯಕ್ಕೆ ಸಲ್ಲಿಸಿರುವ ಎಫ್ ಐಆರ್ ಕಾಪಿಯಲ್ಲಿ ರೌಡಿ ಶೀಟರ್ ಯಾದಗಿರಿ ಹೆಸರೂ ಇದೆ.
ಪೊಲೀಸರ ಹೇಳಿಕೆ ಸುಳ್ಳೇ?: ನಲ್ಗೊಂಡ ಪೊಲೀಸರು ಯಾದಗಿರಿನ್ನು ಬಂಧಿಸಿ, ಎಸಿಬಿ ತಂಡದ ವಶಕ್ಕೆ ನೀಡಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ. ಆದರೆ, ಎಸಿಬಿ ತಂಡ ಮಾತ್ರ ಗುಟ್ಟು ಬಿಟ್ಟುಕೊಟ್ಟಿಲ್ಲ. ಯಾದಗಿರಿ ಬಂಧನದ ಸುದ್ದಿ ಹರಡಿದರೆ, ತನಿಖೆಗೆ ತೊಂದರೆಯಾಗಬಹುದು, ಇತರ ಆರೋಪಿಗಳು ಎಚ್ಚೆತ್ತುಕೊಳ್ಳಬಹುದು ಎಂಬ ಶಂಕೆಯಿಂದ ವಿಷಯ ಇನ್ನೂ ಹೊರಹಾಕಿಲ್ಲ ಎನ್ನಲಾಗಿದೆ.
ಕಳೆದ ವಾರ ಯಾದಗಿರಿ ರಾವ್ ಚಿಟಿಯಾಳ್ ಬಳಿ ನೆಲೆಗೊಂಡಿರುವ ಶಂಕೆ ವ್ಯಕ್ತವಾಗಿತ್ತು. ಯಾದಗಿರಿ ಅಲ್ಲಿಂದ ಎಸ್ಕೇಪ್ ಆಗಲು ಯತ್ನಿಸುತ್ತಿದ್ದ. ನಾವು ಆತನನ್ನು ಉಪಾಯವಾಗಿ ಬಂಧಿಸಿ ಸಿಬಿಐ ಅಧಿಕಾರಿಗಳ ವಶಕ್ಕೆ ಒಪ್ಪಿಸಿದೆವು.
ಸಿಬಿಐ ತಂಡ ಆತನ ಹೇಳಿಕೆ ಪಡೆದುಕೊಂಡು ಬಿಟ್ಟುಬಿಟ್ಟರು. ಈ ಪ್ರಕರಣ ಎಸಿಬಿ ಕೈ ಸೇರಿದ ಮೇಲೆ ಯಾದಗಿರಿ ಅವರ ವಶಕ್ಕೆ ಸೇರುತ್ತಾನೆ. ಈಗ ಯಾದಗಿರಿಯ ವಿಚಾರಣೆಯನ್ನು ಎಸಿಬಿ ಕೈಗೆತ್ತಿಕೊಳ್ಳಲಿದೆ ಎಂದು ಪೊಲೀಸರು ಹೇಳಿದ್ದಾರೆ.
ರೆಡ್ಡಿ ಸವಾಲ್ : ಈ ನಡುವೆ ಜಾಮೀನಿಗಾಗಿ ಲಂಚ ಪ್ರಕರಣದಲ್ಲಿ ರವಿಕಿರಣ್ ಆಗಲಿ, ಯಾದಗಿರಿಯಾಗಲಿ ಯಾರೊಂದಿಗೂ ನಾನು ಮಾತನಾಡಿಲ್ಲ. ನಾನು ಮಾತನಾಡಿದ್ದಕ್ಕೆ ಸಾಕ್ಷಿ ಇದ್ದರೆ ತೋರಿಸಿ, ತಕ್ಷಣವೇ ನಾನು ರಾಜಕೀಯದಿಂದ ನಿವೃತ್ತಿ ಹೊಂದಿ, ಮನೆಯಲ್ಲೇ ಸಂಪೂರ್ಣವಾಗಿ ಕಾಲಕಳೆಯುತ್ತೇನೆ ಎಂದು ಜನಾರ್ದನ ರೆಡ್ಡಿ ಅವರ ತಮ್ಮ ಕೆಎಂಎಫ್ ಮುಖ್ಯಸ್ಥ ಸೋಮಶೇಖರ ರೆಡ್ಡಿ ಅವರು ಸವಾಲೆಸೆದಿದ್ದಾರೆ.
ಸಿಬಿಐ, ಎಸಿಬಿ ಹಾಗೂ ಪೊಲೀಸರ ನಡುವಿನ ಸಂವಹನ ಕೊರತೆಯಿಂದ ಗಾಲಿ ಜನಾರ್ದನ ರೆಡ್ಡಿ ಲಂಚ ಪ್ರಕರಣ ಇನ್ನಷ್ಟು ವಿಳಂಬವಾಗುವ ಶಂಕೆ ಇದೆ. ಅಲ್ಲದೆ, ಆಂಧ್ರಪ್ರದೇಶವನ್ನು ಕಾಡುತ್ತಿರುವ ನಕಲಿ ಮದ್ಯ ಪ್ರಕರಣವನ್ನು ಮೊದಲು ಮುಗಿಸುವ ಒತ್ತಡದಲ್ಲಿ ಎಸಿಬಿ ತಂಡ ಇದೆ.












Click it and Unblock the Notifications