ಸಿಬಿಐ ಲಕ್ಷ್ಮಿನಾರಾಯಣ: ಯಡಿಯೂರಪ್ನೋರೆ ಎಚ್ಚರಾ!

ಈ ಸುಪ್ರೀಂಕೋರ್ಟು ಇತ್ತೀಚೆಗೆ ನಿಮ್ಮ ವಿರುದ್ಧ ಸಿಬಿಐ ತನಿಖೆಗೆ ಆದೇಶಿಸಿರುವುದನ್ನು ನೋಡಿದರೆ ನೀವು ತಿಳಿದೋ, ತಿಳಿಯದೆಯೋ ಅಥವಾ ಇನ್ಯಾರಿಗಾಗೋ ಅಥವಾ ನಿಮಗೇ ಅಂದುಕೊಂಡು ತಪ್ಪು ಮಾಡಿದ್ದೀರಿ ಅನಿಸುತ್ತದೆ. ಅದಿನ್ನೂ ಕೋರ್ಟಿನಲ್ಲಿ ಸಾಬೀತಾಗಬೇಕು ಎಂಬುದು ಬೇರೆ ವಿಚಾರವಾದರೂ... ಆ ಪ್ರಯತ್ನದಲ್ಲೇ ನೀವು ಇನ್ನೊಂದಿಷ್ಟು ಯಡವಟ್ಟುಗಳನ್ನು ಮಾಡಿಕೊಳ್ಳಬೇಡಿ ಎಂದು ಹೇಳುತ್ತಾ ....
ನಿಮ್ಮ (ಮಾಜಿ) ಗೆಳೆಯರಾದ ಜನಾರ್ದನ ರೆಡ್ಡಿ ಏನು ಮಾಡಿಕೊಂಡಿದ್ದಾರೆ ನೋಡಿ. ಬಳ್ಳಾರಿಯಲ್ಲಿ ಪಾತಾಳಕ್ಕಿಳಿದು ಅಮೂಲ್ಯವಾದ ಅದಿರನ್ನು ತಿಂದಿದ್ದೂ ಅಲ್ಲದೆ ಅದನ್ನು ಜೀರ್ಣಿಸಿಕೊಳ್ಳಲು ಮಣ್ಣು ತಿನ್ನುವ ಕೆಲಸ ಮಾಡಿಕೊಂಡಿದ್ದಾರೆ. ಇದೂ ಅಷ್ಟೇ ಇನ್ನೂ ಕೋರ್ಟಿನಲ್ಲಿ ಸಾಬೀತಾಗಬೇಕು. ಆದರೂ ಹೈಕೋರ್ಟಿನ ಮಹಾ ನ್ಯಾಯಾಧೀಶಯರೇನೂ ದಡ್ಡರಲ್ಲ; ಹಾಗೆ ಸುಖಾಸುಮ್ಮನೆ ತಮ್ಮ ವೃತ್ತಿಬಾಂಧವನ ಮೇಲೆ ತನಿಖೆಗೆ ಆದೇಶಿಸಲು.
ಈ ನಾಡಿನ ಆರು ಕೋಟಿ ಜನರಿಗೂ ಗೊತ್ತು ನೀವೇನೂ ಆ ಥರ ಮಣ್ಣು ತಿನ್ನೋ ಕೆಲ್ಸ ಮಾಡೊಲ್ಲಾ ಅಂತಾ. ಆದರೂ ಈ ನಿಮ್ಮ ಬಳ್ಳಾರಿ ಸೋದರರು ಸುಮ್ಮನೆ ಇರುವವರಲ್ಲ. ತಮ್ಮ ಜತೆಗೆ ಒಬ್ಬೊಬ್ಬರಾಗಿ ಜೈಲಿನೊಳಕ್ಕೆ ಎಳೆದುಕೊಳ್ಳುತ್ತಿದ್ದಾರೆ. ಆದ್ದರಿಂದ ಅವರು ನಿಮ್ಮನ್ನೂ ತಮ್ಮಂತೆ 'ಜಡ್ಜಿಗೆ ದುಡ್ಡು ಕೊಟ್ಟು ಜಾಮೀನು ತಗೊಳ್ಳಿ' ಎಂದು ಪ್ರೇರೇಪಿಸಬಹುದು ಎಂಬ ಆತಂಕ ನಾಡಿನ ಜನತೆಯದು.
ಏಕೆಂದರೆ ನೀವು ಮತ್ತೊಮ್ಮೆ ಈ ರಾಜ್ಯದ ಮುಖ್ಯಮಂತ್ರಿಯಾಬೇಕು ಎಂದು ಕನಸು ಕಾಣುತ್ತಿರುವವರು. ಈ ಹಂತದಲ್ಲಿ ಸಿಬಿಐ ಭೀತಿವಾದ ಸಹಜವಾಗಿಯೇ ನಿಮ್ಮನ್ನು ಕಂಗೆಡಿಸಬಹುದು. ಹಾಗಂತ ನೀವು ಯಾವುದೇ ಜಡ್ಜಿಗೆ ದುಡ್ಡು ಕೊಡಲು ಹೋಗಬೇಡಿ. ಒಂದೇ ದೋಣಿಯಲ್ಲಿ ಸಾಗುತ್ತಿರುವ ರೆಡ್ಡಿಗಳು ಎಷ್ಟೇ ಪುಸಲಾಯಿಸಿದರೂ ಅವರ ಪ್ರಭಾವಕ್ಕೆ ಒಳಗಾಗಬೇಡಿ.
ಇದರ ಜತೆಗೆ ನಾಡಿನ ಜನತೆಗೆ ಮತ್ತೊಂದು ಆತಂಕ, ಸಣ್ಣ ಅನುಮಾನ ಕಾಡುತ್ತಿದೆ. ಈ ಹಿಂದೆ ನೀವು ಪರಪ್ಪನ ಅಗ್ರಹಾರಕ್ಕೆ ಹೋಗಿ ಬಂದಿರಿ. ಯಾವುದೇ ಪ್ರಲೋಭೆಗೆ ಒಳಗಾಗದ ಕಡಕ್ ಜಡ್ಜ್ ನ್ಯಾ ಸುಧೀಂದ್ರರಾವ್ ಅವರು ನಿಮ್ಮನ್ನು ಜೈಲಿಗೆ ಅಟ್ಟಿದ್ದರು. ಆದರೆ ಅದ್ಯಾವುದೋ ಮಾಯದಲ್ಲಿ ನೀವು ಹೈಕೋರ್ಟ್ ಅಂಗಳದಿಂದ ಸ್ವತಂತ್ರ ಹಕ್ಕಿಯಾಗಿ ಹಾರಿಬಿಟ್ಟಿರಿ.
ಆಗ ಜನಕ್ಕೆ ಒಂದು ಪಿಂಟ್ ಅನುಮಾನ ಏರಿತ್ತು. ಹೇಗೆ ಜಾಮೀನು ಸಿಕ್ತು ನಮ್ಮ ಯಡಿಯೂರಪ್ಪನವರಿಗೆ ಎಂದು ಮಂದಿ ಮಾತನಾಡಿಕೊಂಡರು. ಜಾಮೀನುಗಾಗಿ ಜಡ್ಜಿಗೆ ದುಡ್ಡು ಕೊಡುವ ಪ್ರಮೇಯಗಳ ಬಗ್ಗೆ ಜನ ಆಗಲೇ ಮಾತ್ನಾಡಿಕೊಂಡಿದ್ದರು. ರೆಡ್ಡಿಗಳಿಗಿಂತ ಬುದ್ಧಿವಂತ ಗೌಢರುಗಳು ಇದ್ದಾರೆ ಅಂತಾನೂ ಮಾತನಾಡಿಕೊಂಡರು. ಆದರೂ ಕೋರ್ಟ್ ಮ್ಯಾಟರ್ರು ನಮಗ್ಯಾಕೆ ಅಂದ್ಕೊಂಡು ಸುಮ್ನಾಗಿದ್ದರು.
ಅಷ್ಟೇ ಅಲ್ಲ. ನಿಮ್ಮ ಹಾಗೆ ಇನ್ನೂ ಕೆಲವು ಮಹಾಮಹಿಮರು ಹೀಗೆ ಕೋರ್ಟ್ ಕಂಟಕದಿಂದ ಬಚಾವಾಗಿದ್ದಾರೆ ಎಂಬುದು ಆರು ಕೋಟಿ ಕನ್ನಡಿಗರ ಸಣ್ಣ ಗುಮಾನಿ. ಇರಲಿ ಬಿಡಿ. ಅದರ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ. ಆದರೆ ಮತ್ತೆ ಅದೇ ಹಾದಿ ತುಳಿಬೇಡಿ, ಅಷ್ಟೇ.
ಆಮೇಲೆ ಮತ್ತೊಂದು ಕಟ್ಟೆಚ್ಚರ: ಏನಪಾ ಅಂದ್ರೆ ಈ 'ಸಿಬಿಐ ಲಕ್ಷ್ಮಿನಾರಾಯಣ' ಎಂಬ ತಲ್ ಕೆಟ್ ಮನುಷ್ಯ ಇದ್ದಾನಲ್ಲಾ. ಅವಯ್ಯ ಸ್ವಲ್ಪ ಶ್ಯಾನೇನೆ ಶಾಣ್ಯಾನಂತೆ. ಮಹಾರಾಷ್ಟ್ರದ ನಾಂದೇಡ್ ನಲ್ಲಿ ಎಸ್ಪಿ ಆಗಿ ಡ್ಯೂಟಿಗೆ ಸೇರಿದಾಗಿನಿಂದಲೂ ಅಷ್ಟೇಯಾ. ಒಂದು ಜೀನ್ಸ್ ಪ್ಯಾಂಟ್ ಏರಿಸಿಕೊಂಡು ಯಃಕಶ್ಚಿತ್ ಅಪರಾಧಿಗಳಿಗಾಗಿ ಕಾಡುಮೇಡು ಅಲೆಯುತ್ತಿದ್ದ ಎಂಬ ನಿದರ್ಶನಗಳಿವೆ.
ಇಂತಿಪ್ಪ 'ಸಿಬಿಐ ಲಕ್ಷ್ಮಿನಾರಾಯಣ'ಗೆ one fine day ಅಕ್ರಮ ಆಸ್ತಿ ಪ್ರಕರಣದಲ್ಲಿ ಜಗನ್ ಮೋಹನ್ ರೆಡ್ಡಿ ವಿರುದ್ಧ ತನಿಖೆ ಮಾಡಿ ಎಂದು ಆಂಧ್ರ ಹೈಕೋರ್ಟು ಆಜ್ಞಾಪಿಸಿತು. ಸರಿ ಅವಯ್ಯಾನೂ ಜಗನ್ ವಿರುದ್ಧ ಕೇಸ್ ರೆಡಿ ಮಾಡಿಕೊಳ್ಳುತ್ತಿದ್ದರು. ಇತ್ತ, ಜಗನ್ ಮಾನಸ ಸೋದರ ಜನಾರ್ದನ ರೆಡ್ಡಿ ಇದರಿಂದ ಕಂಗಾಲಾದರು. ಪೆದ್ದನ್ನ ಜಗನ್ನಗೆ ಏನೆಲ್ಲಾ ಕಂಟಕವಿದೆಯೋ ಅಂದುಕೊಂಡು ನಿದ್ರೆಗೆ ಜಾರಿದ್ದರು.
Actually ಹೇಳಬೇಕು ಅಂದರೆ ಬಳ್ಳಾರಿ ರೆಡ್ಡಿಗೂ ಆಗ ನಿಮ್ಮ ಹಾಗೆ ಸಿಬಿಐ ಭೀತಿ ಕಾಡುತ್ತಿತ್ತು. 'ಸಿಬಿಐ ಲಕ್ಷ್ಮಿನಾರಾಯಣ' ಬಳ್ಳಾರಿಗೆ ಬರುವ ತ್ರಾಸು ತೆಗೆದುಕೊಳ್ಳುವುದಿಲ್ಲ ಬಿಡು ಅಂದ್ಕೊಂಡ್ರೋ, ಅಥವಾ ಬಂದರೂ ನನ್ನ informants ನನ್ನನ್ನು ಎಚ್ಚರಿಸುತ್ತಾರೆ ಎಂದು ಪೊರಪಾಟುಬಿದ್ದು ಸವಿನಿದ್ದೆಗೆ ಜಾರಿದ್ದರು ಅನಿಸುತ್ತದೆ. ಸರಿಯಾಗಿ ಆಗಲೇ ಬರಸಿಡಿಲಿನಂತೆ ಎರಗಿದ ಲಕ್ಷ್ಮಿನಾರಾಯಣಗಾರು ರೆಡ್ಡಿಗೆ ಹಲ್ಲುಜ್ಜಲೂ ಬಿಡದೆ ಎಬ್ಬಿಸಿಕೊಂಡು ಹೋಗಿದ್ದರು.
ನೀವೂ ಹಾಗೆ ಪೊರಪಾಟು ಬೀಳುವುದು ಬೇಡ ಎಂಬ ಸದುದ್ದೇಶದಿಂದ ಈ ಪ್ರಸಂಗ ಹೇಳಬೇಕಾಯಿತು. 'ಸಿಬಿಐ ಲಕ್ಷ್ಮಿನಾರಾಯಣ' ಸುಮಾರು ಆರು ನೂರು ಕಿ.ಮೀ. ದೂರದಲ್ಲಿ ಹೈದರಾಬಾದಿನಲ್ಲಿ ಜಗನ್ ನನ್ನು ದಿನಾ ರುಬ್ಬುತ್ತಿದ್ದಾರೆ ಎಂದೂ ಅಥವಾ ಜಡ್ಜ್ ಪಟ್ಟಾಭಿ, ಮಾಜಿ ಜಡ್ಜ್ ಚಲಪತಿ ಅವರ ಬೆನ್ನು ಹತ್ತಿದ್ದಾರೆ ಬಿಡು. ಸದ್ಯ ಇಲ್ಲಿವರೆಗೂ ಆತ ಬರೋಲ್ಲ ಅಂದುಕೊಂಡು ಸುಮ್ಮನೆ ಕುಳಿತುಕೊಳ್ಳಬೇಡಿ. ಯಾವುದಕ್ಕೇ ಆಗಲಿ ನಿಮ್ಮ ಜಾಗ್ರತೆಯಲ್ಲಿ ನೀವಿರಿ.
ಮರೆತ ಮಾತು: ನಿಮಗೊಂದು ಆತಂಕದ ಸುದ್ದಿ ಇದೆ. ನೀವು ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರಿನಲ್ಲಿ ಜಗನ್ ಗೆ ಸಿಕ್ಕಾಪಟ್ಟೆ (ಯಲಹಂಕದಲ್ಲಿ ವೈಟ್ ಹೌಸ್ ಸೇರಿದಂತೆ) ಮನೆಗಳನ್ನು ಮಾಡಿಕೊಟ್ಟಿದ್ದೀರಂತೆ. ಜಗನ್ ಅಲ್ಲಿ 'ಸಿಬಿಐ ಲಕ್ಷ್ಮಿನಾರಾಯಣ' ಮುಂದೆ ಅದನ್ನೆಲ್ಲ ಬಾಯ್ಬಿಟ್ಟಿದ್ದಾರಂತೆ, ಹುಷಾರು! ಹಾಗೆ ಈ ರೆಡ್ಡಿಯನ್ನೂ ನಂಬಬೇಡಿ. ತನ್ನ ಅಕ್ರಮ ಗಣಿಗಾರಿಕೆಗೆ ಆಗಿನ ಮುಖ್ಯಮಂತ್ರಿ (ಅಂದರೆ ನೀವು) ಸಿಕ್ಕಾಪಟ್ಟೆ help ಮಾಡಿದ್ದಾರೆ ಅಂತ ಹೇಳಿಬಿಟ್ಟರೆ ಮುಗೀತು...












Click it and Unblock the Notifications