ಯಡಿಯೂರಪ್ಪ ಜಾಮೀನು ಅರ್ಜಿ ಏನಾಯಿತು?

ತಾಜಾ ವರದಿ: ಸಿಬಿಐ ವಿಶೇಷ ಕೋರ್ಟ್ ಯಡಿಯೂರಪ್ಪ ಜಾಮೀನು ಅರ್ಜಿ ವಿಚಾರಣೆಯನ್ನು ಜೂನ್ 1ಕ್ಕೆ ಮುಂದೂಡಿದೆ. ಇದರಿಂದ ಯಡಿಯೂರಪ್ಪ ಅವರು ನಾಳೆ, ನಾಳಿದ್ದು ತಮ್ಮ ಮೊಮ್ಮಗಳ ಮದುವೆಯಲ್ಲಿ ನಿರಾತಂಕವಾಗಿ ಭಾಗವಹಿಸಬಹುದು.
ಗಣಿ ಲಂಚ ಮತ್ತು ಡಿನೋಟಿಫಿಕೇಷನ್ ಪ್ರಕರಣಗಳಲ್ಲಿ ಸಿಬಿಐ ತನಿಖೆ ಆರಂಭಿಸಿರುವ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತವರ ಕುಟುಂಬ ಸದಸ್ಯರು ಬಂಧನದ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಅದರ ವಿಚಾರಣೆಯು ಅಧೀನ ನ್ಯಾಯಾಲಯವೊಂದರಲ್ಲಿ ಕಳೆದ ವಾರ ನಡೆದಿತ್ತು.
ಬೇಸಿಗೆ ರಜೆ ಅವಧಿ ಮುಗಿದಿರುವ ಹಿನ್ನೆಲೆಯಲ್ಲಿ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಇಂದು ಮಂಗಳವಾರ ವಿಚಾರಣೆ ಮುಂದುವರಿಯಲಿದೆ. ಯಡಿಯೂರಪ್ಪಗೆ ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು ಎಂಬ ಸಿಬಿಐ ವಕೀಲರು ಈಗಾಗಲೇ ವಾದ ಮಂಡಿಸಿದ್ದಾರೆ. ಅದಕ್ಕೆ ಇಂದು ಯಡಿಯೂರಪ್ಪ ಪರ ವಕೀಲರು ಇಂದು ಆಕ್ಷೇಪಣೆ ಸಲ್ಲಿಸಲಿದ್ದಾರೆ.
ಗಮನಾರ್ಹವೆಂದರೆ, ಪ್ರಕರಣ ಎಲ್ಲ ಆರೋಪಿಗಳು ನ್ಯಾಯಾಲಯದಲ್ಲಿ ಖುದ್ದು ಹಾಜರಾದ ನಂತರವಷ್ಟೇ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಡೆಸುವಂತೆ ಸಿಬಿಐ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಮೋಹನ್ ಪರಶರನ್ ಕೋರಿದ್ದರು. ಇದನ್ನು ಆಕ್ಷೇಪಿಸಿದ್ದ ಯಡಿಯೂರಪ್ಪ ಪರ ವಕೀಲರು, ಯಡಿಯೂರಪ್ಪ ಹಾಗೂ ಇನ್ನಿತರ ಆರೋಪಿಗಳು ವಿಚಾರಣೆಗೆ ಖುದ್ದು ಹಾಜರಾಗುವ ಅವಶ್ಯತೆಯಿಲ್ಲ ಎಂದು ಪ್ರತಿಪಾದಿಸಿದ್ದರು.
ಬಳಿಕ, ಸಿಬಿಐ ಆಕ್ಷೇಪಣೆಗೆ ಪ್ರತಿ ಆಕ್ಷೇಪಣೆ ಸಲ್ಲಿಸುವಂತೆ ಯಡಿಯೂರಪ್ಪ ಪರ ವಕೀಲರಿಗೆ ನಿರ್ದೇಶಿಸಿದ್ದ ಉಸ್ತುವಾರಿ ನ್ಯಾಯಾಲಯದ ನ್ಯಾಯಾಧೀಶ ಶಿವಲಿಂಗೇ ಗೌಡ ಅವರು ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿದ್ದರು. ಯಡಿಯೂರಪ್ಪ, ಅವರ ಪುತ್ರರಾದ ರಾಘವೇಂದ್ರ, ವಿಜಯೇಂದ್ರ ಮತ್ತು ಅಳಿಯ ಆರ್ ಎನ್ ಸೋಹನ್ ಕುಮಾರ್ ಅವರು ಜಾಮೀನು ಕೋರಿ ಅರ್ಜಿಗಳನ್ನು ಸಲ್ಲಿಸಿದ್ದಾರೆ.
ಐಪಿಸಿ ಸೆಕ್ಷನ್ 120 (b), 409, 420 ಭ್ರಷ್ಟಾಚಾರ ನಿಯಣತ್ರಣ ಕಾಯಿದೆಯಡಿ ಸೆಕ್ಷನ್ 7, 13 (2), 13(1) (c) (d) ಹಾಗೂ ಕರ್ನಾಟಕ ಭೂ ಕಾಯಿದೆ (ವರ್ಗಾವಣೆ ನಿಯಂತ್ರಣ) ಸೆಕ್ಷನ್ 9ರ ಅಡಿ ಸುಪ್ರೀಂಕೋರ್ಟ್ ನಿರ್ದೇಶನದಂತೆ ಸಿಬಿಐ ಯಡಿಯೂರಪ್ಪ ಅವರನ್ನು A1 ಎಂದು ಗುರಿತಿಸಿ, ಕೇಸು ದಾಖಲಿಸಿಕೊಂಡಿದೆ.












Click it and Unblock the Notifications