ಪೆಟ್ರೋಲ್ ದರ ಇಳಿಸಲು ಕೇಂದ್ರ ಸರಕಾರ ಚಿಂತನೆ

ಪೆಟ್ರೋಲ್ ದರವನ್ನು ಲೀಟರಿಗೆ 7.54 ರು. ಏರಿಸಿದ್ದರಿಂದ ದೇಶದಾದ್ಯಂತ ಸಾಮಾನ್ಯ ಜನರಿಗೆ ಕಪಾಳಕ್ಕೆ ಬಿಗಿದಂತಾಗಿದೆ. ಈಗ ಸಾರಿ ಕೇಳಲು ಚಿಂತನೆ ನಡೆಸಿರುವ ಯುಪಿಎ ಸರಕಾರ ಲೀಟರಿಗೆ 2ರಿಂದ 3 ರು. ಇಳಿಸಲು ನಿರ್ಧರಿಸಿದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ. ವಿತ್ತ ಸಚಿವ ಪ್ರಣಬ್ ಮುಖರ್ಜಿ ನೇತೃತ್ವದ ಸಚಿವರ ಸಭೆ ಗುರುವಾರ ನಡೆಯಲಿದೆ.
ದಿಢೀರ್ ಪೆಟ್ರೋಲ್ ಬೆಲೆ ಏರಿಕೆ ಮತ್ತು ರಾಷ್ಟ್ರವ್ಯಾಪಿ ಆಕ್ರೋಶ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ವಿದೇಶ ಪ್ರವಾಸದಲ್ಲಿದ್ದ ಪೆಟ್ರೋಲಿಯಂ ಖಾತೆಯ ಸಚಿವ ಜೈಪಾಲ್ ರೆಡ್ಡಿ ಅವರು ತಮ್ಮ ಪ್ರವಾಸವನ್ನು ಒಂದು ದಿನ ಮೊದಲೇ ಸ್ಥಗಿತಗೊಳಿಸಿ ಭಾರತಕ್ಕೆ ಮರಳುತ್ತಿದ್ದಾರೆ. ಇಂದು ಸಂಜೆ ಯುಪಿಎ ಸಚಿವರ ಸಭೆ ನಡೆಯಲಿದ್ದು, ಪೆಟ್ರೋಲ್ ಬೆಲೆ ಇಳಿಕೆಯ ಸುದ್ದಿ ಸಂಜೆಯ ವೇಳೆಗೆ ಹೊರಬೀಳುವ ಸಾಧ್ಯತೆಯಿದೆ.
ಉಳಿದೆಲ್ಲ ನಗರಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಪೆಟ್ರೋಲ್ ಬೆಲೆ ಎಲ್ಲಕ್ಕಿಂತ ಹೆಚ್ಚು. ಲೀಟರಿಗೆ ಇಲ್ಲಿ 81.75 ರು. ಮೌಲ್ಯವರ್ಧಿತ ತೆರಿಗೆಯನ್ನು ಇಳಿಸಲು ಎಲ್ಲ ರಾಜ್ಯಗಳಿಗೆ ಕೇಂದ್ರ ಸರಕಾರ ಸೂಚಿಸಿದೆ. ಇದರಿಂದಾಗಿ ರಾಜ್ಯಗಳ ಮೇಲೆಯೇ ಹೊರೆ ಬೀಳಲಿದೆ. ಅತಿ ಹೆಚ್ಚು ಮೌಲ್ಯವರ್ಧಿತ ತೆರಿಗೆ ವಿಧಿಸುತ್ತಿರುವ ಕರ್ನಾಟಕದಲ್ಲಿನ ಬಿಜೆಪಿ ಸರಕಾರ ಕಾಂಗ್ರೆಸ್ ಮಾತನ್ನು ಕೇಳುವುದೆ?
ಲೋಕಸಭೆ ಚುನಾವಣೆ ಹೊಸ್ತಿಲಲ್ಲೇ ಇರುವುದು ಪೆಟ್ರೋಲ್ ಬೆಲೆ ಇಳಿಸಲು ಕೇಂದ್ರ ಸರಕಾರ ಚಿಂತಿಸುವಂತಾಗಿದೆ. ಪೆಟ್ರೋಲ್ ಬೆಲೆ ಏರಿಸಿದರೂ ರುಪಾಯಿ ಮೌಲ್ಯ (ಡಾಲರಿಗೆ 56.38 ರು.) ಮತ್ತಷ್ಟು ಕುಸಿಯುತ್ತಿರುವುದು ಬೆಂಕಿಗೆ ತುಪ್ಪ ಸುರಿದಂತಾಗಿದೆ.
ಹಣದುಬ್ಬರವನ್ನು ಅದುಮಿಡಲು ಪೆಟ್ರೋಲ್ ಬೆಲೆಯನ್ನು ಏರಿಸುವ ಬದಲು ದ್ವಿಚಕ್ರ ಮತ್ತು ನಾಲ್ಕು ಚಕ್ರ ವಾಹನಗಳ ಬೆಲೆ ಏರಿಕೆ ಒಳಿತು ಎಂಬ ಮಾತುಗಳು ತಜ್ಞರಿಂದ ಕೇಳಿಬರುತ್ತಿವೆ. ವಿಪರೀತವಾಗಿ ಏರುತ್ತಿರುವ ವಾಹನಗಳ ಸಂಖ್ಯೆಯಿಂದಾಗಿ ಪೆಟ್ರೋಲ್ ಕೊರತೆ ತೀವ್ರವಾಗಿ ಕಾಡುವಂತಾಗಿದೆ. ಕೇಂದ್ರ ಸರಕಾರ ಈಗ ಏನು ಮಾಡಬೇಕು?












Click it and Unblock the Notifications