ಕೊಲೆ: ಮಹಾಂತೇಶಗೂ ಆ ಯುವತಿಗೂ ಎತ್ತಣ ನಂಟು?

23 ವರ್ಷದ ಯುವತಿಯನ್ನು ಸೋಮವಾರ ಸಂಜೆ ವಶಕ್ಕೆ ತೆಗೆದುಕೊಂಡಿರುವ ಪೊಲೀಸರು ಆಕೆಯನ್ನು ತೀವ್ರ ವಿಚಾರಣೆಗೆ ಗುರಿಪಡಿಸಿದ್ದಾರೆ. ಉನ್ನತ ಪೊಲೀಸ್ ಮೂಲಗಳ ಪ್ರಕಾರ ಸದರಿ ಯುವತಿಗೆ ನಗರದ ಪ್ರಭಾವಿ ಪೊಲೀಸ್ ಅಧಿಕಾರಿಯೊಬ್ಬರ ಜತೆ ಸಂಪರ್ಕವಿರುವುದು ಬೆಳಕಿಗೆ ಬಂದಿದೆ.
ಯುವತಿಯು ತನ್ನ ಮೊಬೈಲಿನಲ್ಲಿ ACP ಎಂದು ಬರೆದು ಅದರ ಮುಂದೆ ಅಧಿಕಾರಿಯ ಹೆಸರನ್ನು ಬರೆದಿಟ್ಟುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಆ ACP ಅಧಿಕಾರಿಯ ಹೆಸರನ್ನು ಬಹಿರಂಗಪಡಿಸಲು ಮೂಲಗಳು ನಿರಾಕರಿಸಿವೆ.
ತನಿಖೆ ಇನ್ನೂ ಪ್ರಾಥಮಿಕ ಹಂತದಲ್ಲಿದೆ. ಮೊಬೈಲ್ ಫೋನಿನಲ್ಲಿ ನಂಬರ್ ಮತ್ತು ಹೆಸರು ದಾಖಲಾಗಿದೆ ಎಂಬ ಮಾತ್ರಕ್ಕೆ ಯಾರನ್ನೇ ಆಗಲಿ ಶಂಕಿಸುವುದು ಸರ್ವತಾ ಸಾಧುವಲ್ಲ. ಅದರೆ ಅನುಮಾನಾಸ್ಪದವಾಗಿ ಈ ಯುವತಿಯ ಜತೆ ACP ಹೆಸರು ಥಳುಕು ಹಾಕಿಕೊಂಡಿರುವುದು ಈ ಕ್ಷಣದ ವಿಶೇಷ ಎಂದು ಮೂಲಗಳು ವ್ಯಾಖ್ಯಾನಿಸಿವೆ.
ಯಾರೀ ಯುವತಿ: ಕುಶಾಲನಗರ ಮೂಲದ ಈ ಯುವತಿ ಬಡ ಕುಟುಂಬದಿಂದ ಬಂದವರು. ಆಕೆಯನ್ನು ಕೆಲವರು ತಮ್ಮ ಅನುಕೂಲಕ್ಕೆ ಬಳಸಿಕೊಂಡಿರುವ ಸಾಧ್ಯತೆಗಳಿವೆ. ಆಕೆಗೂ ಮಹಾಂತೇಶಗೂ ಇರಬಹುದಾದ ಸಂಬಂಧ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ.
ಕುತೂಹಲದ ಸಂಗತಿಯೆಂದರೆ ಸದರಿ ಯುವತಿಯ ಜತೆ ಇನ್ನಿಬ್ಬರು ಯುವಕರು ಪ್ರೇಮ ಸಂಬಂಧ ಹೊಂದಿದ್ದಾರೆ. ಮಹಾಂತೇಶ್ ಹತ್ಯೆ ಪ್ರಕರಣದಲ್ಲಿ ಅವರ ಪಾತ್ರದ ಬಗ್ಗೆಯೂ ತನಿಖೆ ನಡೆಯುತ್ತಿದೆ. ಇದರ ಹೊರತಾಗಿ, ದ್ವಿಚಕ್ರ ವಾಹನ ರೇಸ್ ವಿಚಾರದಲ್ಲಿ ನಡೆದ ಜಗಳದಲ್ಲಿ ಹಲ್ಲೆ ನಡೆದಿರಬಹುದು ಎನ್ನಲಾಗಿದೆಯಾದರೂ ಖಚಿತ ಮಾಹಿತಿ ಸಿಕ್ಕಿಲ್ಲ.
ಈ ಮಧ್ಯೆ, ಸಿಬಿಐ, ಲೋಕಾಯುಕ್ತದಲ್ಲಿ ಕೆಲಸ ಮಾಡಿ ದಕ್ಷರು ಅನಿಸಿಕೊಂಡಿರುವ ಜಂಟಿ ಪೊಲೀಸ್ ಆಯುಕ್ತ ಪ್ರಣಬ್ ಮೊಹಾಂತಿ ಹಾಗೂ ಉಪ ಆಯುಕ್ತ ರವಿ ಕಾಂತೇಗೌಡರನ್ನು ಬೇರೆ ಜವಾಬ್ದಾರಿಗಳಿಂದ ಮುಕ್ತಗೊಳಿಸಿ, ಪೂರ್ಣವಾಗಿ ಮಹಾಂತೇಶ್ ಹತ್ಯೆ ಪ್ರಕರಣದ ತನಿಖೆಯ ಹೊಣೆ ವಹಿಸಲಾಗಿದೆ. ಮಾರಣಾಂತಿಕವಾಗಿ ಹಲ್ಲೆಗೀಡಾಗಿದ್ದ ಮಹಾಂತೇಶ್, ಭಾನುವಾರ (ಮೇ20) ಬೆಳಗ್ಗೆ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.












Click it and Unblock the Notifications