ಚಂದಮಾಮನೇ ದಾರಿ ದೀಪ, ಬೀಸುವ ಗಾಳಿಯೇ ಎಸಿ

ನಂಬದಿದ್ದರೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ನಾಗನಟಿಗಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಕಿಲಾರಿದೊಡ್ಡಿ ಗ್ರಾಮಕ್ಕೆ ಒಮ್ಮೆ ರಾತ್ರಿ ಬನ್ನಿ. ಸ್ವಾಮಿ, ಈ ಗ್ರಾಮವಿರುವುದು ಕರ್ನಾಟಕದಲ್ಲಿ ಎಂಬುದು ನೆನಪಿರಲಿ. ಇಂಧನ ಸಚಿವೆ ಕುಮಾರಿ ಶೋಭಾ ಕರಂದ್ಲಾಜೆ ಅವರಿಗೆ ಈ ಗ್ರಾಮದ ಹೆಸರು ಗೊತ್ತಿದೆಯಾ?
ಸಂಜೆಯಾಗುತ್ತಲೇ ಚಿಮಣಿ ದೀಪಗಳು ಮಿಣಿಮಿಣಿ ಮಿಣುಕಲು ಪ್ರಾರಂಭಿಸುತ್ತವೆ. ಗೋಡೆಗಳ ಮೇಲೆ ವಿದ್ಯುತ್ ಸ್ವಿಚ್ಚುಗಳು ಇಲ್ಲದ್ದರಿಂದ ಕಂದೀಲು ಬೆಳಕಿನಲ್ಲಿಯೇ ಮಕ್ಕಳು ಅಭ್ಯಾಸ ಶುರು ಮಾಡುತ್ತಾರೆ. ಗ್ರಾಮದ ಜನರಿಗೆ ರಾತ್ರಿ ಚಂದಮಾಮನೆ ದಾರಿ ದೀಪ, ಪ್ರಕೃತಿ ಬೀಸುವ ಗಾಳಿಯೇ ಇವರ ಪಾಲಿಗೆ ಎಸಿ.
ಕತ್ತಲಿಗೆ ಕಿಲಾರಿದೊಡ್ಡಿ ಗ್ರಾಮದ ಜನ ಒಗ್ಗಿಹೋಗಿದ್ದಾರೆ. ವಿದ್ಯುತ್ ಕೊಟ್ಟರೆ ಶಾಕ್ ಹೊಡೆದವರಂತೆ ಬೆಚ್ಚಿಬಿದ್ದಾರೆಂದು ಸರಕಾರ ಇವರಿಗೆ ಕರೆಂಟ್ ನೀಡುವ ಗೋಜಿಗೇ ಹೋಗಿಲ್ಲ. ವಿದ್ಯುತ್ ಸಂಪರ್ಕ ಕಲ್ಪಿಸಬೇಕೆಂದು ಸಾಕಷ್ಟು ಸಾರಿ ಮನವಿ ಮಾಡಿದರು ಯಾವುದೇ ಫಲ ನೀಡಿಲ್ಲ. ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯತನದಿಂದ ಗ್ರಾಮಕ್ಕೆ ಕರೆಂಟ್ ಸೌಲಭ್ಯ ಸಿಕ್ಕಿಲ್ಲ.
ಗಂಗನಾಳ ಗ್ರಾಮದಿಂದ 2 ಕಿ.ಮೀ ದೂರವಿರುವ ಕಿಲಾರಿದೊಡ್ಡಿಯಲ್ಲಿ 40 ಮನೆಗಳಿದ್ದು 140 ಜನಸಂಖ್ಯೆ ಹೊಂದಿದೆ. 100 ಜನ ಮತದಾರರಿದ್ದು, ಚುನಾವಣೆ ಬಂದಾಗ ಸಮೀಪದ ಗಂಗನಾಳ ಗ್ರಾಮದಲ್ಲಿ ಮತದಾನ ಮಾಡುತ್ತಾರೆ. ಚುನಾವಣೆ ಸಮೀಪಿಸಿದಾಗ ಮತ ಕೇಳಲು ಬಂದವರು ಟೋಪಿ ಹಾಕಿ ಹೋಗಿದ್ದಾರೆಯೇ ಹೊರತು ವಿದ್ಯುತ್ ಒದಗಿಸುವ ಪ್ರಯತ್ನವನ್ನೇ ಮಾಡಿಲ್ಲ.
ಜೆಸ್ಕಾಂ ಅಧಿಕಾರಿ ಗಮನಕ್ಕೇ ಬಂದಿಲ್ಲವಂತೆ : ಜೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರ ಶಶಿಧರ ಶಿವಚಾರ್ಯ ಅವರನ್ನು ಸಂಪರ್ಕ ಮಾಡಿದರೆ, ಈ ವಿಷಯ ನನ್ನ ಗಮನಕ್ಕೆ ಬಂದಿಲ್ಲ. ಆದಷ್ಟು ಬೇಗ ಗ್ರಾಮಕ್ಕೆ ವಿದ್ಯುತ್ ಸೌಕರ್ಯ ಕಲ್ಪಿಸಲಾಗುತ್ತದೆ ಎಂದು ತಿಪ್ಪೆ ಸಾರುತ್ತಾರೆ.
ನೂರಾರು ವರ್ಷಗಳಿಂದ ನಮ್ಮ ಗ್ರಾಮದ ಜನರು ವಿದ್ಯುತ್ ಬೆಳಕು ಕಂಡಿಲ್ಲ. 2 ಕಿ.ಮೀ ದೂರದ ಗಂಗನಾಳ ಗ್ರಾಮದಲ್ಲಿ ವಿದ್ಯುತ್ ಇದೆ. ಆದರೆ ನಮ್ಮ ಊರಿಗೇಕೆ ವಿದ್ಯುತ್ ಬರ! ನಾವು ಮಾಡಿದ ತಪ್ಪಾದರೂ ಏನು? ಎನ್ನುವುದು ಇಲ್ಲಿನ ಗ್ರಾಮಸ್ಥರ ಅಳಲು. ಬೇರೆ ಕಡೆ, ಒಂದು-ಎರಡು ಮನೆಯಿದ್ರೂ ವಿದ್ಯುತ್ ಸಂಪರ್ಕ ನೀಡುವ ಜೆಸ್ಕಾಂ ಅಧಿಕಾರಿಗಳು ಈ ಗ್ರಾಮಕ್ಕೆ ಏಕೆ ನೀಡಿಲ್ಲ ಎಂದು ಪ್ರಶ್ನಿಸುತ್ತಿದ್ದಾರೆ. ದೀಪವು ನಿನ್ನದ ಗಾಳಿಯು ನಿನ್ನದ ಆರದಿರಲಿ ಬದುಕು...












Click it and Unblock the Notifications