ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಎಸ್‌ವೈ ವಿರುದ್ಧ ತನಿಖೆ : ಹೆಗ್ಡೆಗೆ ಸಿಕ್ಕ ನೈತಿಕ ಜಯ

By Prasad
|
Google Oneindia Kannada News

Moral victory to Justice Santosh Hegde
ಬೆಂಗಳೂರು, ಮೇ. 11 : ಅಕ್ರಮ ಗಣಿ ಲಂಚ ಹಗರಣದಲ್ಲಿ ಸಿಲುಕಿರುವ ಯಡಿಯೂರಪ್ಪ ವಿರುದ್ಧ ಸಿಬಿಐನಿಂದ ತನಿಖೆ ನಡೆಸಬೇಕೆಂದು ಸರ್ವೋಚ್ಚ ನ್ಯಾಯಾಲಯ ಶುಕ್ರವಾರ ಆದೇಶ ನೀಡಿರುವುದು, ಅಕ್ರಮ ಗಣಿಗಾರಿಕೆಯ ವಿರುದ್ಧ ತನಿಖೆ ನಡೆಸಿ ವರದಿಯಲ್ಲಿ ಯಡಿಯೂರಪ್ಪನವರ ಹೆಸರನ್ನು ಬಹಿರಂಗಪಡಿಸಿದ್ದ ನ್ಯಾ.ಸಂತೋಷ್ ಹೆಗ್ಡೆಯವರಿಗೆ ನೈತಿಕ ಜಯ ಸಿಕ್ಕಂತಾಗಿದೆ.

ಜಿಂದಾಲ್ ಸ್ಟೀಲ್ ವರ್ಕ್ಸ್, ಸೌತ್ ವೆಸ್ಟ್ ಮೈನಿಂಗ್ ಕಂಪನಿಗಳಿಗೆ ಗಣಿಗಾರಿಕೆ ಗುತ್ತಿಗೆ ನೀಡಲು ಯಡಿಯೂರಪ್ಪನವರು ಪ್ರೇರಣಾ ಟ್ರಸ್ಟ್, ಧವಳಗಿರಿ ಪ್ರಾಪರ್ಟಿ ಡೆವಲಪರ್ಸ್ ಮತ್ತು ಭಗತ್ ಹೋಂ ಕಂಪನಿಗಳ ಹೆಸರಿನಲ್ಲಿ 20 ಕೋಟಿ ರು. ಲಂಚ ಪಡೆದಿದ್ದರೆಂದು ಆರೋಪಿಸಿ ಮಾಜಿ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಅವರು ತಮ್ಮ ವರದಿಯಲ್ಲಿ ಪ್ರಸ್ತಾಪಿಸಿದ್ದರು.

ಆದರೆ, ಯಡಿಯೂರಪ್ಪನವರನ್ನು ಆರೋಪಿಗಳ ಪಟ್ಟಿಗೆ ತರುವ ಮುನ್ನ ಅವರಿಗೆ ತಮ್ಮ ಕೇಸನ್ನು ಮಂಡಿಸಲು ಅವಕಾಶ ನೀಡಿರಲಿಲ್ಲ, ಯಡಿಯೂರಪ್ಪನವರು ಲಂಚ ಪಡೆದಿರುವ ಬಗ್ಗೆ ಲೋಕಾಯುಕ್ತರಿಗೇ ಸಂಶಯವಿದೆ, ಅವರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿದ್ದಕ್ಕೆ ಸ್ಪಷ್ಟ ಕಾರಣ ನೀಡಿಲ್ಲ, ಮತ್ತು ಸ್ವಾಭಾವಿಕ ನ್ಯಾಯವನ್ನು ಗಾಳಿಗೆ ತೂರಲಾಗಿತ್ತು ಎಂದು ಹೇಳಿ ಬಿಎಸ್‌ವೈ ವಿರುದ್ಧ ಸಲ್ಲಿಸಲಾಗಿದ್ದ ಎಫ್‌ಐಆರ್ ಅನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿತ್ತು.

ಯಡಿಯೂರಪ್ಪನವರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿದ್ದ ಸಂತೋಷ್ ಹೆಗ್ಡೆಯವರನ್ನು ಬಂಧಿಸಬೇಕೆಂದು, ಯಡಿಯೂರಪ್ಪನವರು ಹೈಕೋರ್ಟಿನಿಂದ ಕ್ಲೀನ್ ಚಿಟ್ ಪಡೆದಾಗ ಅವರ ಬೆಂಬಲಿಗರು ಆಗ್ರಹಿಸಿದ್ದರು. ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ತಮ್ಮ ನಿಲುವನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದ ನ್ಯಾ. ಸಂತೋಷ್ ಹೆಗ್ಡೆಯವರು, ನ್ಯಾಯಾಲಯ ಏನೇ ಆದೇಶ ನೀಡಿದರೂ ಗೌರವಿಸುವುದಾಗಿ ಹೇಳಿದ್ದರು. ಯಡಿಯೂರಪ್ಪನವರ ಕ್ಷಮೆ ಕೋರಬೇಕೆಂಬ ಆಗ್ರಹಕ್ಕೂ ಅವರು ಮಣಿದಿರಲಿಲ್ಲ.

ಹೆಗ್ಡೆ ವಿರುದ್ಧ ವಾಗ್ದಾಳಿ : ಶುಕ್ರವಾರ, ಮೇ 11ರ ಸಂಜೆ ತಮ್ಮ ನಿವಾಸದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಯಡಿಯೂರಪ್ಪನವರು ಸಂತೋಷ್ ಹೆಗ್ಡೆ ವಿರುದ್ಧ ಮತ್ತೆ ವಾಗ್ದಾಳಿ ಮಾಡಿದ್ದಾರೆ. ಅಕ್ರಮ ಗಣಿಗಾರಿಕೆಯ ಬಗ್ಗೆ ತಾವೇ ಹೆಗ್ಡೆಗೆ ತಿಳಿಸಿದ್ದರೂ, ಅವರನ್ನೇ ತಮ್ಮನ್ನು ಆರೋಪಿಸತ್ಥರನ್ನಾಗಿ ಮಾಡಿದ್ದರು ಎಂದು ಬೆಂಕಿಯ ಮಾತುಗಳನ್ನು ಯಡಿಯೂರಪ್ಪ ಉಗುಳಿದ್ದರು.

ತಕ್ಷಣ ವಿಚಾರಣೆಯನ್ನು ಕೈಗೆತ್ತಿಕೊಂಡು ಆಗಸ್ಟ್ 3ರೊಳಗೆ ವರದಿಯನ್ನು ಸಲ್ಲಿಸಬೇಕೆಂದು ಸಿಬಿಐಗೆ ಸುಪ್ರೀಂಕೋರ್ಟ್ ಆದೇಶಿಸಿದೆ. ತನಿಖೆಯನ್ನು ಅತ್ಯಂತ ನಿಷ್ಪಕ್ಷವಾತವಾಗಿ ಮತ್ತು ಯಾವುದೇ ಶಕ್ತಿಗಳಿಗೆ ಬಗ್ಗದೆ ನಡೆಸಲು ಸಿಬಿಐ ಯಡಿಯೂರಪ್ಪನವರನ್ನು ತನ್ನ ವಶಕ್ಕೆ ತೆಗೆದುಕೊಳ್ಳಲಿದೆಯೆ ಎಂದು ಕಾದು ನೋಡಬೇಕಿದೆ. ಯಡಿಯೂರಪ್ಪ ಮಾತ್ರ, ಸಿಬಿಐ ತನಿಖೆಯಿಂದ ಎಲ್ಲ ಸತ್ಯ ಹೊರಬೀಳದಿದೆ, ನಾನು ನಿರಪರಾಧಿಯಾಗಿ ಹೊರಬರುತ್ತೇನೆ ಎಂದವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬೆಂಬಲಿಗರು ದೂರ ದೂರ : ಶತಾಯಗತಾಯ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಪದವಿಯ ಮೇಲೆ ಕುಳ್ಳಿರಿಸಬೇಕೆಂದು ಯತ್ನಿಸುತ್ತಿದ್ದ ಅವರ ಬೆಂಬಲಿಗರನೇಕರು, ಸುಪ್ರೀಂಕೋರ್ಟ್ ಆದೇಶ ಹೊರಬೀಳುತ್ತಿದ್ದಂತೆ ದೂರದೂರ ಸರಿಯುತ್ತಿದ್ದಾರೆ ಎಂಬ ವರದಿಗಳು ಬಂದಿವೆ. 70 ಶಾಸಕರ ಬೆಂಬಲ ಪಡೆದಿದ್ದ ಯಡಿಯೂರಪ್ಪನವರ ಬೆನ್ನ ಹಿಂದೆ ಈಗ ಕೇವಲ 20ರಿಂದ 22 ಶಾಸಕರು ಮಾತ್ರ ಇದ್ದಾರೆ ಎಂಬ ಮಾಹಿತಿ ಬಲ್ಲ ಮೂಲಗಳಿಂದ ತಿಳಿದುಬಂದಿದೆ. ಯಡಿಯೂರಪ್ಪ ಅವರ ನಿವಾಸದಲ್ಲಿ ನೀರವ ಮೌನ ನೆಲೆಸಿದೆ.

English summary
Green bench of Supreme Court of Indian has ordered CBI to conduct an inquiry against former Chief Minister of Karnataka BS Yeddyurappa, based on recommendation by CEC. It is considered as moral victory to Justice Santosh Hegde, who indicted BSY in illegal mining.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X