ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಡಮಕ್ಕಳ ಪ್ರತಿಭಾನ್ವೇಷಣೆಗೆ ಪ್ರಾಜೆಕ್ಟ್ 'ಪ್ರಾರಂಭ'

By Prasad
|
Google Oneindia Kannada News

Sandesh and co-founders of National Olympiad Foundation
ಬೆಂಗಳೂರು, ಮೇ. 6 : ಉತ್ತಮ ವಿದ್ಯಾಭ್ಯಾಸ, ತರಬೇತಿ, ಸೂಕ್ತ ಮಾರ್ಗದರ್ಶನ, ಸ್ಪರ್ಧಾತ್ಮಕ ಪರೀಕ್ಷೆಗಳಿಂದ ವಂಚಿತರಾಗುತ್ತಿರುವ, ಸರಕಾರಿ ಶಾಲೆಗಳಲ್ಲಿ ಓದುತ್ತಿರುವ ಬಡಮಕ್ಕಳಿಗೆ ಸರ್ವರೀತಿಯ ಶೈಕ್ಷಣಿಕ ಸವಲತ್ತುಗಳನ್ನು ಒದಗಿಸುವ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರು ಮಾಡುವ ಉದ್ದೇಶದಿಂದ ರಾಷ್ಟ್ರೀಯ ಓಲಂಪಿಯಾಡ್ ಫೌಂಡೇಷನ್ 'ಪ್ರಾರಂಭ' ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಬಡತನ ರೇಖೆಗಿಂತ ಕೆಳಗಿರುವ ಮಕ್ಕಳಿಗೂ ಸಮಾನ ಅವಕಾಶ ದೊರಕಿಸಿಕೊಡುವ ಉದ್ದೇಶದಿಂದ ರಾಷ್ಟ್ರೀಯ ಓಲಂಪಿಯಾಡ್ ಫೌಂಡೇಷನ್‌ನ ಸಿಇಓ ಮತ್ತು ಸಹಸಂಸ್ಥಾಪಕ ಸಂದೇಶ್ ವ್ಯಾಸ್ ನೇತೃತ್ವದಲ್ಲಿ ಯುವಪಡೆ ಸಜ್ಜಾಗಿದೆ. ಈ ಯೋಜನೆಯ ಎರಡು ಉದ್ದೇಶಗಳು ಕೆಳಗಿನಂತಿವೆ.

1) ಬಡ ಮಕ್ಕಳಿಗೆ ಸೂಕ್ತ ತರಬೇತಿ, ಶಿಬಿರ, ಓದುವ ಪರಿಕರಗಳನ್ನು ಒದಗಿಸಿ, ಪರೀಕ್ಷೆಗಳಿಗೆ ಒಳಪಡಿಸಿ, ಅವರ ಭವಿಷ್ಯತ್ತಿಗೆ ಹೊಸ ದಾರಿಯನ್ನು ರೂಪಿಸಿಕೊಡುವುದು.

2) ಮಕ್ಕಳಿಗೆ ಥಿಯರಿಯ ಜೊತೆ ಪ್ರಾಯೋಗಿಕ ಕಲಿಕೆಗೆ ಒತ್ತು ನೀಡುವ ಉದ್ದೇಶದಿಂದ ಶಿಕ್ಷಕರಿಗೆ ಸೂಕ್ತ ತರಬೇತಿ ನೀಡುವ ಮುಖಾಂತರ ಶೈಕ್ಷಣಿಕ ಪದ್ಧತಿಯಲ್ಲಿ ಹೊಸತನ ತರುವುದು.

ಬಲಿಷ್ಠ ಆರ್ಥಿಕ ಹಿನ್ನೆಲೆಯಿರುವ, ಉತ್ತಮ ಶಾಲೆಗಳಲ್ಲಿ ಓದುವ ಮಕ್ಕಳು ಮಾತ್ರ ಜಾಣರಲ್ಲ, ಸರಕಾರಿ ಶಾಲೆಗಳಲ್ಲಿ ಓದುವ ಬಡಮಕ್ಕಳು ಕೋಣರೂ ಅಲ್ಲ. ಆರ್ಥಿಕವಾಗಿ ದುರ್ಬಲವಾಗಿರುವ ಮಕ್ಕಳಲ್ಲಿಯೂ ಪ್ರತಿಭೆ ಇದ್ದೇ ಇರುತ್ತದೆ. ಆದರೆ, ಅದನ್ನು ಹೊರತರಲು ಅವಕಾಶ ದಕ್ಕಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಬಡಮಕ್ಕಳಿಗೆ ಸಮಾನವಾದ ತರಬೇತಿ ಮತ್ತು ಅವಕಾಶಗಳನ್ನು ದೊರಕಿಸಿಕೊಡುವ ಉದ್ದೇಶದಿಂದ 'ಪ್ರಾರಂಭ' ಪ್ರಾರಂಭಿಸಲಾಗಿದೆ.

ಈ ಯೋಜನೆಗೆ ರಾಷ್ಟ್ರೀಯ ಓಲಂಪಿಯಾಡ್ ಫೌಂಡೇಷನ್ ಜೊತೆಗೆ ಲಾಭರಹಿತ ಸರಕಾರೇತರ ಸಂಸ್ಥೆಗಳಾದ ಕ್ರೈ, ಸ್ಮೈಲ್ ಫೌಂಡೇಷನ್, ಟೀಚ್ ಫಾರ್ ಇಂಡಿಯಾ ಮತ್ತು ವೇದ ವ್ಯಾಸ ಫೌಂಡೇಷನ್ ಕೈಜೋಡಿಸಿವೆ. ಈ ಸಂಸ್ಥೆಗಳು ಬಡಮಕ್ಕಳಿಗೆ, ವಿಕಲಚೇತನ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ದೊರಕಿಸಿಕೊಡಲು ಶ್ರಮಿಸುತ್ತಿವೆ. ಇವುಗಳೊಂದಿಗೆ ಓಲಂಪಿಯಾಡ್ ಫೌಂಡೇಷನ್ ಕೂಡ ಸಹಾಯಹಸ್ತ ಚಾಚಲಿದೆ.

ಚಟುವಟಿಕೆಗಳು ಈರೀತಿ ಇರಲಿವೆ

* ವಿಷಯವನ್ನು ಸರಿಯಾಗಿ ಅರ್ಥ ಮಾಡಿಸಿಕೊಡಲು ಮತ್ತು ಜ್ಞಾನವನ್ನು ಹೆಚ್ಚಿಸಲು ಹೊಸರೀತಿಯ ಕಲಿಕೆಯ ಪದ್ಧತಿ ಅಳವಡಿಕೆ.
* ಆರೋಗ್ಯ, ಪ್ರಚಲಿತ ವಿದ್ಯಮಾನ ಮುಂತಾದ ವಿಷಯಗಳ ಬಗ್ಗೆ ಮತ್ತು ನೆನಪಿನ ಶಕ್ತಿ ಹಾಗೂ ವಿಶ್ವಾಸ ಹೆಚ್ಚಿಸಲು ನಾನಾ ಬಗೆಯ ಶಿಬಿರ.
* ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ವಾಣಿಜ್ಯ, ಅರ್ಥಶಾಸ್ತ್ರ, ಗಣಿತಶಾಸ್ತ್ರ ಮುಂತಾದ ವಿಷಯಗಳ ಬಗ್ಗೆ ವಿಶೇಷ ತರಗತಿ.
* ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದವರಿಗೆ ಮಾಹಿತಿ ತಂತ್ರಜ್ಞಾನದ ಕುರಿತು ಹೆಚ್ಚಿನ ತರಬೇತಿ ನೀಡಲಾಗುವುದು. ಈ ತರಬೇತಿ ಸಂಪೂರ್ಣ ಉಚಿತ.
* ಅಗ್ರಸ್ಥಾನ ಪಡೆದವರಿಗೆ 1 ಸಾವಿರದಿಂದ 5 ಸಾವಿರದವರೆಗೆ ಸ್ಕಾಲರ್‌ಶಿಪ್ ಮತ್ತು ಟ್ಯಾಬ್ಲೆಟ್ ಪಿಸಿ ಮತ್ತು ಪುಸ್ತಕಗಳನ್ನು ವಿತರಿಸಲಾಗುವುದು.
* 12ನೇ ತರಗತಿ ಓದುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳು ಪಿಎಮ್‌ಟಿ, ಜೆಇಇ, ಎಐಇಇಇ, ಸಿಇಟಿ ಮುಂತಾದ ಪರೀಕ್ಷೆಗೆ ತಯಾರಾಗಲು ಪುಸ್ತಕ ವಿತರಣೆ.

ತರಬೇತಿ ವೆಚ್ಚ : ಈ ಎಲ್ಲ ತರಬೇತಿ, ಪರೀಕ್ಷೆ ನಡೆಸಲು ಪ್ರತಿ ವಿದ್ಯಾರ್ಥಿಗೆ 300 ರು. ತಗಲುತ್ತದೆ. 2012-13ನೇ ವರ್ಷದಲ್ಲಿ ಸುಮಾರು 25 ಸಾವಿರ ವಿದ್ಯಾರ್ಥಿಗಳನ್ನು ಈ ಯೋಜನೆಯಲ್ಲಿ ತೊಡಗಿಸಿಕೊಳ್ಳಲು ಪ್ರತಿಭಾನ್ವೇಷಣ ಸಂಸ್ಥೆ ರಾಷ್ಟ್ರೀಯ ಓಲಂಪಿಯಾಡ್ ಫೌಂಡೇಷನ್ ನಿರ್ಧರಿಸಿದೆ. ಇಚ್ಛಾಶಕ್ತಿಯಿದ್ದರೆ ರಾಜ್ಯ ಸರಕಾರ ಕೂಡ ರಾಷ್ಟ್ರೀಯ ಓಲಂಪಿಯಾಡ್ ಫೌಂಡೇಷನ್ ಜೊತೆ ಕೈಜೋಡಿಸಲಿ ಮತ್ತು ಈ ಯೋಜನೆಯನ್ನು ಯಶಸ್ವಿಗೊಳಿಸಲಿ.

English summary
National Olympiad Foundation planned to introduce a new project 'PRARAMBH' into the Indian education society, which will aim at providing the same level of competitive environment and an opportunity to the financially deprived students.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X