ಅಬ್ದುಲ್ ಕಲಾಂ ಮತ್ತೆ ರಾಷ್ಟ್ರಪತಿಯಾಗುವುದು ಅನುಮಾನ

ಭೇಟಿ ಫಲಪ್ರದವಾಗಿತ್ತು ಎಂದು ಆಂಟನಿ ಸುದ್ದಿಗಾರರಿಗೆ ತಿಳಿಸಿದರಾದರೂ ಡಿಎಂಕೆ ನಿಲುವು ಕಾಂಗ್ರೆಸ್ ಪಕ್ಷಕ್ಕೆ ವ್ಯತಿರಿಕ್ತವಾಗಿದೆ ಎಂದು ಡಿಎಂಕೆ ಮೂಲಗಳು ಹೇಳಿವೆ. ಕಾಂಗ್ರೆಸ್ ಸ್ವತಂತ್ರವಾಗಿ ತನ್ನ ಅಭ್ಯರ್ಥಿಯನ್ನು ರಾಷ್ಟ್ರಪತಿ ಭವನಕ್ಕೆ ಕಳಿಸುವುದು ಅಸಾಧ್ಯದ ಮಾತು. ಏಕೆಂದರೆ ಅದಕ್ಕೆ ಅಗತ್ಯವಿರುವ ಸಂಖ್ಯಾಬಲ ಕಾಂಗ್ರೆಸಿಗೆ ಇಲ್ಲವಾಗಿದೆ.
ಇದರೊಂದಿಗೆ ಎಪಿಜೆ ಅಬ್ದುಲ್ ಕಲಾಂ ಅವರನ್ನು ಮತ್ತೆ ರಾಷ್ಟ್ರಪತಿಯನ್ನಾಗಿ ಕಾಣುವುದು ಮಸುಕಾಗಿದೆ. ಕಾಂಗ್ರೆಸ್ ಗೆ ತನ್ನ ಸರ್ವ ಸಹ ಪಕ್ಷಗಳ ಸಂಪೂರ್ಣ ಬೆಂಬಲ ಅತ್ಯಗತ್ಯವಾಗಿದೆ. ಡಿಎಂಕೆ ಸಂಖ್ಯಾ ಬಲ ಹೀಗಿದೆ: ಲೋಕಸಭೆ ಸದಸ್ಯರು -18. ರಾಜ್ಯಸಭೆ ಸದಸ್ಯರು -7 ಮತ್ತು ತಮಿಳುನಾಡು ವಿಧಾನಸಭೆ ಸದಸ್ಯರ ಸಂಖ್ಯೆ -23. ಡಿಎಂಕೆ ಪಕ್ಷದ ಈ ಸಂಖ್ಯಾ ಬಲ ಕಾಂಗ್ರೆಸ್ ಪ್ರಯತ್ನಗಳಿಗೆ ತಣ್ಣೀರೆರಚುವ ಸಾಮರ್ಥ್ಯ ಬಹಳವಾಗಿದೆ.
ರಾಷ್ಟ್ರಪತಿ ಅಭ್ಯರ್ಥಿಗೆ ಒಂದಷ್ಟು ರಾಜಕೀಯ ಮತ್ತು ಆಡಳಿತಾತ್ಮಕ ಅನುಭವದ ಹಿನ್ನೆಲೆಯಿರಬೇಕು ಎಂಬುದು ಮೇಲ್ನೋಟಕ್ಕೆ ಡಿಎಂಕೆಯ ಅನಿಸಿಕೆ. ಆದರೆ ಆಂತರ್ಯದಲ್ಲಿ ಕಲಾಂ ವಿರುದ್ಧ ಡಿಎಂಕೆಗೆ ಅಸಹನೆಯಿದೆ. ರಾಜಕೀಯವಾಗಿ ಕಲಾಂ-ವಿರೋಧಿ ಧೋರಣೆ ಹೊಂದಿದೆ. ಇದೇ ಪೀಕಲಾಟಕ್ಕೆ ಸಿಕ್ಕಿಕೊಂಡಿರುವುದು. ಮತ್ತು ಡಿಎಂಕೆ ನೇತಾರರು ನಿನ್ನೆ ಇದನ್ನು ಕಾಂಗ್ರೆಸ್ಸಿಗೆ ಸ್ಪಷ್ಟವಾಗಿ ತಿಳಿಯಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.












Click it and Unblock the Notifications