ಲಿಂಗಾಯತ ಮತ 'ಕೈ'ವಶಕ್ಕೆ ಸೋನಿಯಾ 'ಶ್ರೀ'ಕಾರ

ಶನಿವಾರ ಸಿದ್ದಗಂಗಾ ಮಠದಲ್ಲಿ ನಡೆಯುವ ಸಿದ್ಧಗಂಗಾ ಶ್ರೀಗಳ ಜಯಂತ್ಯುತ್ಸವದಲ್ಲಿ ಸೋನಿಯಾ ಪಾಲ್ಗೊಳ್ಳುತ್ತಿರುವುದು ಅತ್ಯಂತ ಮಹತ್ವದ್ದಾಗಿದೆ. ಕರ್ನಾಟಕದ ರಾಜಕೀಯದಲ್ಲಿ ಗಣನೀಯ ಪಾತ್ರವಹಿಸುವ ಲಿಂಗಾಯತ ಮತ ಬೇಟೆಗೆ ಅವರು ಶ್ರೀಕಾರ ಹಾಕಲಿದ್ದಾರೆ.
ಅತ್ತ ಲಿಂಗಾಯತರ ಅಧಿನಾಯಕ ಎಂದು ಮುದ್ರೆಯೊತ್ತಿರುವ ಯಡಿಯೂರಪ್ಪ ಅವರು ಏಕಾಂಗಿಯಾಗುತ್ತಿರುವ ಸಂದರ್ಭದಲ್ಲಿ ಸೋನಿಯಾ ಅವರ ಈ ನಡೆ ಕುತೂಹಲಕಾರಿಯಾಗಿದೆ. ಅದಕ್ಕೂ ಮುನ್ನ ಅನಾಮತ್ತಾಗಿ ಯಡಿಯೂರಪ್ಪ ಅವರನ್ನೇ ಪಕ್ಷದತ್ತ ಸೆಳೆದುಕೊಂಡರೆ ಹೇಗೆ ಎಂದು ಸೋನಿಯಾ ಪ್ರಯತ್ನಿಸಿದರಾದರೂ ರಾಜ್ಯ ಕಾಂಗ್ರೆಸ್ ಮಾತಿಗೆ ಮಣೆ ಹಾಕಿ, ತಮ್ಮತ್ತ ಸುಳಿದಾಡಲು ಹವಣಿಸಿದ ಯಡಿಯೂರಪ್ಪ ಅವರನ್ನು ದೂರವಿಟ್ಟರು.
ಅದರ ಬದಲಿಗೆ 'ಕಳಂಕಿತ ಯಡಿಯೂರಪ್ಪ ಅವರನ್ನು 'ಕೈ'ಬಿಟ್ಟು ನಮ್ಮೂರಲ್ಲೇ ಇರುವ ಪ್ರಭಾವಿ ಮಠಕ್ಕೆ ನಡೆದುಬನ್ನಿ. ಮುಂದಿನದೆಲ್ಲ ನಾನು ನೋಡಿಕೊಳ್ಳುತ್ತೇನೆ' ಎಂದು ರಾಜ್ಯ ಕೆಪಿಸಿಸಿ ಅಧ್ಯಕ್ಷ ಡಾ. ಪರಮೇಶ್ವರ ಅವರು ಹೇಳಿದ್ದೇ ತಡ ಸೋನಿಯಾ ಮೇಡಂ Yes ಎಂದು ಡಾ. ಶಿವಕುಮಾರ ಸ್ವಾಮಿಗಳತ್ತ 'ಹಸ್ತ'ಚಾಚಿದ್ದಾರೆ.
ಇದರಿಂದ ಧನ-ಜನ-ಮತ-ಬಲ ಹೊಂದಿರುವ ವೀರಶೈವ ಮಠಗಳ ಅಂಗಳದಲ್ಲಿ ಕೈ ಕಲರವ ಕೇಳಿಬರಲಿದೆ. ದಾವಣಗೆರೆಯ ಧಣಿ ಶಾಮನೂರು ಶಿವಶಂಕರಪ್ಪ ಅವರಿಗೆ ಕಾಂಗ್ರೆಸ್ಸಿನಲ್ಲಿ ಮತ್ತೆ ಸೂಕ್ತ ಸ್ಥಾನಮಾನ ಕಲ್ಪಿಸುವ ಭರವಸೆಯೂ ದೊರೆತಿದೆ. ಅವರ ಪುತ್ರ ಎಸ್.ಎಸ್. ಮಲ್ಲಿಕಾರ್ಜುನರಿಗೆ ಈ ಬಾರಿ ಪ್ರಭಾವಿ ಸ್ಥಾನ ಕಲ್ಪಿಸುವುದಂತೂ ನಿಚ್ಚಳವಾಗಿದೆ.
ರಾಜ್ಯ ಕಾಂಗ್ರೆಸ್ಸೂ ಸಹ ಇದನ್ನೇ ಬಯಸುತ್ತಿದೆ. ಲಿಂಗಾಯತ ಸಮುದಾಯ ಕಾಂಗ್ರೆಸ್ಸಿನಿಂದ ವಿಮುಖಗೊಂಡು ಅನೇಕ ವರ್ಷಗಳೇ ಕಳೆದುಹೋಗಿವೆ. ರಾಜ್ಯದ ಏಳೂವರೆ ಕೋಟಿ ಜನರಲ್ಲಿ ಶೇ. 18 ರಷ್ಟು ಜನಸಂಖ್ಯೆಯನ್ನು ಹೊಂದಿರುವ ಸಮುದಾಯ ಬಿಜೆಪಿಯತ್ತ ವಾಲಿರುವುದನ್ನು ಮತ್ತೆ ತನ್ನತ್ತ ಸೆಳೆಯುವುದು ಕಾಂಗ್ರೆಸ್ ಸದ್ಯದ ಗುರಿಯಾಗಿದೆ.












Click it and Unblock the Notifications