ಮಂತ್ರಿಗಿರಿಗಾಗಿ ಒತ್ತಾಯ, 30 ಶಾಸಕರ ಸಹಿ ಸಂಗ್ರಹ

ವಿಶೇಷ ಎಂದರೆ, ಸಿಎಂ ಸದಾನಂದ ಗೌಡರ ಅಭಯ ಹಸ್ತ ಸಿಕ್ಕಿದ ಮೇಲೂ ಶಾಸಕ ಅಪ್ಪಚ್ಚು ರಂಜನ್ ಕೂಡಾ ಅತೃಪ್ತ ನಾಯಕ ಸಿಟಿ ರವಿ ಬಳಗದಲ್ಲಿ ಕಾಣಿಸಿಕೊಂಡಿದ್ದಾರೆ. ಸಿಟಿ ರವಿ ಜೊತೆ ಮಾಜಿ ಸಚೇತಕ ಜೀವರಾಜ್ ಸೇರಿದಂತೆ 30 ಮಂದಿ ಸಚಿವ ಸ್ಥಾನಾಕಾಂಕ್ಷಿಗಳಿದ್ದಾರೆ.
ಯಡಿಯೂರಪ್ಪ ರಗಳೆ ನಂತರ ಕರ್ನಾಟಕ ಬಿಜೆಪಿ ಮತ್ತೊಂದು ಹೊಸ ಸಂಕಟ ಎದುರಿಸಲು ಸಿದ್ಧವಾಗಬೇಕಿದೆ. ಶಾಸಕ ಸಿಟಿ ರವಿ, ಅಪ್ಪಚ್ಚು ರಂಜನ್, ಸೊಗಡು ಶಿವಣ್ಣ, ಅಪ್ಪು ಪಟ್ಟನಶೆಟ್ಟಿ ಹಾಗೂ ಇತರರು ಪಕ್ಷ ಕಟ್ಟಿದ ಕಾರ್ಯಕರ್ತರು ಎಂಬುದನ್ನು ಮತ್ತೆ ನೆನಪಿಸಿಕೊಡಲು ಸಂಕಲ್ಪಿಸಿದ್ದಾರೆ.
ಬಿಜೆಪಿ ನಾನು ಕಟ್ಟಿದ ಪಕ್ಷ ಎಂದು ಎಲ್ಲೆಡೆ ಹೇಳಿಕೊಂಡು ಯಡಿಯೂರಪ್ಪ ಹೇಳಿಕೊಂಡು ತಿರುಗಾಟ ಮಾಡಿದ್ದು, ಈಗ ಈ ಹೊಸ ಬಂಡಾಯ ವೀರರಿಗೆ ಮಾದರಿಯಾಗಲಿದೆ.
ಪಕ್ಷ ಒಬ್ಬರಿಂದ ಕಟ್ಟಲು ಸಾಧ್ಯವಿಲ್ಲ. ನಮ್ಮಂಥ ಹಳಬರಿಗೆ ಸೂಕ್ತ ಸ್ಥಾನಮಾನ ನೀಡದಿರುವುದು ಸರಿಯಲ್ಲ ಎಂದು ಬಿಜೆಪಿ ವರಿಷ್ಠರಿಗೆ ಮನವರಿಕೆ ಮಾಡಿಕೊಡಲು ಸಿಟಿ ರವಿ ನೇತೃತ್ವದ ಬಣ ಸಿದ್ಧವಾಗಿದೆ. ಈ ಬಗ್ಗೆ ಪಕ್ಷದ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆಯಲು ಸಿದ್ಧತೆ ನಡೆದಿದೆ.
ಹೊಸಬರಿಗೆ ಸಂಪುಟದಲ್ಲಿ ಸ್ಥಾನ ಕಲ್ಪಿಸಿ, ಹಳಬರನ್ನು ಮೂಲೆಗುಂಪು ಮಾಡಿ, ಸಂಪುಟ ವಿಸ್ತರಣೆ ಇಲ್ಲ, ಖಾತೆ ಪುನರ್ ವಿಂಗಡಣೆ ಮಾಡಲು ಹೊರಟಿರುವ ಈಶ್ವರಪ್ಪ ಹಾಗೂ ಸದಾನಂದ ಗೌಡ ಅವರ ಯೋಜನೆ ತಡೆಗಟ್ಟಲು ಸಿಟಿ ರವಿ ಬಣ ಸಹಿ ಸಂಗ್ರಹ, ವರಿಷ್ಠರಿಗೆ ಪತ್ರ ಮುಂತಾದ ಅಸ್ತ್ರಗಳೊಂದಿಗೆ ಸಿದ್ಧವಾಗಿದೆ.
ಈ ನಡುವೆ ಬಿಜೆಪಿ ಪಕ್ಷದ ಒಳ ಪಂಗಡಗಳಲ್ಲೇ ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಹಾರುವುದರಲ್ಲಿ ಹೆಸರುವಾಸಿಯಾಗಿರುವ ಸಾಗರದ ಶಾಸಕ ಬೇಳೂರು ಗೋಪಾಲಕೃಷ್ಣ ಅವರ ಸುಳಿವು ಇನ್ನೂ ನಮ್ಮ ಬಾತ್ಮಿದಾರರಿಗೆ ಸಿಕ್ಕಿಲ್ಲ. ಸಚಿವ ಸ್ಥಾನದ ಪ್ರಮುಖ ಆಕಾಂಕ್ಷಿಯಾಗಿರುವ ಬೇಳೂರು ಅವರು ಯಾವ ಬಣದಲ್ಲೂ ಇನ್ನೂ ಕಾಣಿಸಿಕೊಳ್ಳದಿರುವುದು ಈ ದಿನದ ಮಟ್ಟಿಗೆ ಅಚ್ಚರಿಯ ಸಂಗತಿಯಾಗಿದೆ.












Click it and Unblock the Notifications