ನೊಬೆಲ್ ವಿಜೇತ ನಾಸಾ ವಿಜ್ಞಾನಿಗೆ ವಿವಾಹ 'ಬಂಧನ'

45 ವರ್ಷದ ಅತುಲ್ ಶರ್ಮಾ ಲೋಖಂಡವಾಲಾ ನಿವಾಸಿ. ಈ ಆಸಾಮಿ ಏನು ಮಾಡಿದ್ದಾನೆಂದರೆ ಅಂರ್ಜಾಲದಲ್ಲಿ ವಿವಾಹ ಸಂಬಂಧದ ವೆಬ್ ಸೈಟ್ ಗಳ ಮೂಲಕ ಅನೇಕ ಮಹಿಳೆಯರಿಗೆ ಮೋಸ ಮಾಡಿದ್ದಾನೆ. ಹಾಗೆ ಮಾಡುವಾಗ ತಾನು ಪ್ರತಿಷ್ಠಿತ ನಾಸಾ ವಿಜ್ಞಾನಿ ಜತೆಗೆ ನೊಬೆಲ್ ಪುರಸ್ಕೃತ ಎಂದು ಪರಿಚಯಿಸಿಕೊಂಡಿದ್ದಾನೆ. ಈತನ ಅಸಲೀಯತ್ತು ಈಗ ಬಟಾಬಯಲಾಗಿ ಮೈಪರಚಿಕೊಳ್ಳುತ್ತಿದ್ದಾನೆ.
ಈ ಆಸಾಮಿ ಅಂತರ್ಜಾದಲ್ಲಿ ವಿಹರಿಸುತ್ತಾ, ಮಹಿಳೆಯರಿಗೆ ವಿವಾಹ ಬಂಧಗಳನ್ನು ಒದಗಿಸುತ್ತಿದ್ದ. ಅಷ್ಟೇ ಅಲ್ಲ, ತಾನೊಬ್ಬ ದೊಡ್ಡ ಕುಳ ಎಂದು ಪೋಸ್ ಕೊಡುತ್ತಾ ಅವರನ್ನು ಮೋಸಗೊಳಿಸುತ್ತಿದ್ದ. ಮರಾಮೋಸಹೋದ ಮಹಿಳೆಯರು ಅವನ ಹೆಸರಿನಲ್ಲಿ ಭಾರಿ ಆಸ್ತಿ ಪಾಸ್ತಿ ಖರೀದಿಸುತ್ತಿದ್ದರು. ಈ ಭಡವ ಅದು ಯಾವ ಮಾಯದಲ್ಲೋ ಆ ಆಸ್ತಿಯನ್ನು ಮಾರಿಬಿಟ್ಟು, ಅವರಿಗೆ ಕೈಕೊಟ್ಟು ನಾಪತ್ತೆಯಾಗುತ್ತಿದ್ದ.
ಆದರೆ 15 ದಿನಗಳ ಹಿಂದೆ ಇವನ ಪಾಪದ ಕೊಡ ತುಂಬಿತ್ತು ಅನಿಸುತ್ತದೆ. 40 ವರ್ಷದ ವೈದ್ಯೆಯೊಬ್ಬರು ಇವನನ್ನು ಪೊಲೀಸ್ ಬಲೆಗೆ ಕೆಡವಿ, ಜಾತಕ ಜಾಲಾಡಿದ್ದಾರೆ. ಅದಕ್ಕೂ ಮುನ್ನ ಈತ ತಾನು ಐಐಟಿ ಪದವೀಧರನಾಗಿದ್ದು, ನಾಸಾದಲ್ಲಿ ವಿಜ್ಞಾನಿ ಎಂದು ಪರಿಚಯಿಸಿಕೊಂಡಿದ್ದಾನೆ. ಸದ್ಯದಲ್ಲೇ ತನಗೆ ನೊಬೆಲ್ ಪ್ರಶಸ್ತಿಯೂ ಪ್ರಾಪ್ತಿಯಾಗಲಿದೆ ಎಂದು ಬೂಸಿ ಬಿಟ್ಟಿದ್ದಾನೆ.
ಅಮೆರಿಕದ ಅಧ್ಯಕ್ಷ ಒಬಾಮಾ ತನ್ನ ಪಕ್ಕದಲ್ಲೇ ಪವಡಿಸಿದಂತೆ, ಇನ್ನು ಮಾಜಿ ಅಧ್ಯಕ್ಷ ಜಾರ್ಜ್ ಬುಷ್ ಜತೆ ಕೈಕುಲಿಕಿದಂತೆ ಮಹಿಳೆಯೆದರು ಪೋಸ್ ಕೊಟ್ಟಿದ್ದಾನೆ. ಪಾಪ ಇವನ ಗಿಲೀಟು ಮಾತುಗಳನ್ನು ಆ ಮಹಿಳೆಯೂ ನಂಬಿದ್ದಾಳೆ. ಆಗಲೇ ಇವ ತನ್ನ ಕಪಟ ನಾಟಕ ಶುರುವಿಟ್ಟುಕೊಂಡಿದ್ದಾನೆ. 'ಮುಂಬೈನಲ್ಲಿ ನನಗೆ ದೊಡ್ಡ ದೊಡ್ಡ ಅಧಿಕಾರಿಗಳ ಪರಿಚಯವಿದೆ. ಹಾಗಾಗಿ, ಕೇವಲ 25 ಲಕ್ಷ ರುಪಾಯಿಗೆ ಮನೆ ಖರೀದಿಕೊಡುತ್ತೇನೆ' ಎಂದು ನಂಬಿಸಿದ್ದಾನೆ.
ಇದನ್ನು ನಂಬಿದ ಮಹಿಳೆ ಅನಾಮತ್ತು 25 ಲಕ್ಷ ರುಪಾಯಿಯನ್ನು ಅವನ ಕೈಗಿತ್ತು ಧನ್ಯೋಸ್ಮಿ ಎಂದಿದ್ದಾರೆ. ಆ ಮೇಲೆ ಆಸಾಮಿ ಕಣ್ಮರೆಯಾಗಿದ್ದಾನೆ. ಈ ಮಹಿಳೆ ಎದ್ನೋ ಇದ್ನೋ ಅಂತ ಪೊಲೀಸ್ ಠಾಣೆಯತ್ತ ದೌಡಾಯಿಸಿ, ಅವನ ಕೊಟ್ಟಿದ್ದ ಮೊಬೈಲ್ ನಂಬರ್ ಅನ್ನು ಪೊಲೀಸರ ಕೈಗಿತ್ತಿದ್ದಾಳೆ. ಅಷ್ಟು ಸಾಕಿತ್ತು ಪೊಲೀಸರಿಗೆ.
ಮೊಬೈಲ್ ಜಾಡನ್ನು ಹಿಡಿದು ಸೀದಾ ಅವನ ಕೈಗೆ ಕೋಳ ತೊಡಿಸಿದ್ದಾರೆ. ಹೀಗೇ ಇನ್ನೂ ಅನೇಕ ಮಹಿಳೆಯರನ್ನು ಈ ಭೂಪತಿಗಂಡು ವಂಚಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications