ಬಿಇಎಂಎಲ್ ಮುಖ್ಯಸ್ಥ ನಟರಾಜನ್ ಮೇಲೆ FIR

ನಟರಾಜನ್ ಅವರ ಮನೆ ಹಾಗೂ ಕಚೇರಿ ಮೇಲೆ ಸಿಬಿಐ ದಾಳಿ ನಡೆಸಿದೆ. ಬೆಂಗಳೂರು ಹಾಗೂ ಕೊಯಮತ್ತೂರು ನಿವಾಸ ಹಾಗೂ ಕಚೇರಿ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ, ಅನೇಕ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸೇನಾ ಟ್ರಕ್ ಖರೀದಿ ವೇಳೆ ತಮಗೆ ಲಂಚ ಒಡ್ಡಲಾಗಿತ್ತು ಎಂದು ಭೂ ಸೇನಾ ಮುಖ್ಯಸ್ಥ ಜನರಲ್ ವಿಕೆ ಸಿಂಗ್ ಅವರು ಆರೋಪ ಮಾಡಿದ್ದರು. ನಂತರ ಕೇಂದ್ರ ಸರ್ಕಾರ ಈ ಕುರಿತು ತನಿಖೆ ನಡೆಸುವಂತೆ ಕೇಂದ್ರ ತನಿಖಾ ಏಜೆನ್ಸಿ(CBI)ಗೆ ಆದೇಶಿಸಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ವೆಕ್ಟ್ರಾ ಅಧ್ಯಕ್ಷ ರವೀಂದರ್ ರಿಷಿ ಹಾಗೂ ಬಿಇಎಂಎಲ್ ಮಾಜಿ ನಿರ್ದೇಶಕ(ರಕ್ಷಣಾ ಸರಬರಾಜು) ವಿ ಮೋಹನ್ ಅವರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿಕೊಂಡು ವಿಚಾರಣೆಗೆ ಒಳಪಡಿಸಿತ್ತು.
ಆರೋಪವೇನು?: ಭಾರತೀಯ ಮೂಲದ ಕಂಪನಿ ಕನ್ಸಲ್ಟೆನ್ಸಿ ಕಂಪನಿ Astral ಮೂಲಕ ಟಟ್ರಾ ಕಂಪನಿ ಟ್ರಕ್ ಗಳನ್ನು ಖರೀದಿಸಲು ಬಿಇಎಂಎಲ್ ಕರೆದಿದ್ದ ಟೆಂಡರ್ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆದಿದೆ. ತಾಂತ್ರಿಕ ಸಲಹೆ, ಸೂಚನೆ ನೀಡುವ ಬದಲು ಹೆಚ್ಚಿನ ಬೆಲೆ ನಿಗದಿಪಡಿಸಿ, ಕಡಿಮೆ ಬೆಲೆಗೆ ಕಳಪೆ ಟ್ರಕ್ ಗಳನ್ನು ಬೇನಾಮಿ ಕಂಪನಿಗಳಿಂದ ತರೆಸಿಕೊಳ್ಳುವ ಹುನ್ನಾರ ನಡೆದಿತ್ತು ಎಂಬ ಆರೋಪಗಳಿದೆ.
ಈ ಹಿನ್ನೆಲೆಯಲ್ಲಿ ಸೇನಾ ಮುಖ್ಯಸ್ಥ ಸಿಂಗ್ ಅವರು ಖರೀದಿಗೆ ಅನುಮತಿ ನೀಡಿರಲಿಲ್ಲ. ಸೇನಾ ಮುಖ್ಯಸ್ಥರ ಮನವೊಲಿಸಲು ಲಂಚದ ಆಮಿಷ ಒಡ್ಡಲಾಗಿತ್ತು. ಈ ಬಗ್ಗೆ ವಿಕೆ ಸಿಂಗ್ ಲಿಖಿತ ದೂರು ನೀಡಿದ ಮೇಲೆ ಸಿಬಿಐ ತನ್ನ ತನಿಖೆ ತೀವ್ರಗೊಳಿಸಿದೆ.
ಸಿಬಿಐನ ನಾಲ್ಕು ಅಧಿಕಾರಿಗಳು ಇಂದಿರಾನಗರದ ನಟರಾಜನ್ ಅವರ ಮನೆಯ ಮೇಲೆ ದಾಳಿ ನಡೆಸಿ ಮಹತ್ವದ ದಾಖಲೆ ಸಂಗ್ರಹಿಸಿದೆ. ನಟರಾಜನ್ ಅವರನ್ನು ಒಂದು ಸುತ್ತಿನ ವಿಚಾರಣೆಗೆ ಒಳಪಡಿಸಲಾಗಿತ್ತು. ಅಗತ್ಯ ಬಿದ್ದರೆ ಬಂಧಿಸಿ ವಿಚಾರಣೆಗೆ ಒಳಪಡಿಸಬಹುದಾಗಿದೆ ಎಂದು ಸಿಬಿಐ ಮೂಲಗಳು ಹೇಳಿದೆ.












Click it and Unblock the Notifications