ಭೂಕಂಪ ಭೀತಿ ನಡುವೆಯೇ ಒಂಟಿ ವಿದ್ಯಾರ್ಥಿನಿ ಹತ್ಯೆ

ಉತ್ತರಪ್ರದೇಶದ ವಾರಣಾಸಿಯ ಮೋನಿಕಾ ಶ್ರೀವಾತ್ಸವ್ (19) ಕೊಲೆಯಾದ ವಿದ್ಯಾರ್ಥಿನಿ. ಬಾಣಸವಾಡಿಯ ಕಲ್ಯಾಣನಗರದಲ್ಲಿರುವ ಬೆಂಗಳೂರು ಸಿಟಿ ಕಾಲೇಜಿನಲ್ಲಿ ಬಿ.ಕಾಂ ಓದುತ್ತಿದ್ದ ಅವರು, ಸಹೋದರಿ ಅಂಜಲಿ ಶ್ರೀವಾತ್ಸವ್ ಅವರ ಜತೆ ಪೈ ಲೇಔಟ್‌ನ 16ನೇ ಇ ಅಡ್ಡರಸ್ತೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ಮೋನಿಕಾ ಸೋದರ ಸಹ ಬೆಂಗಲೂರಿನಲ್ಲೇ ವಾಸವಾಗಿದ್ದಾರೆ. ಮೋನಿಕಾ ತಂದೆ ಒಂದು ವರ್ಷದ ಹಿಂದೆ ಮೃತಪಟ್ಟಿದ್ದು, ತಾಯಿ ವಾರಣಾಸಿಯಲ್ಲೇ ಇದ್ದಾರೆ. 2 ತಿಂಗಳ ಹಿಂದೆ ಅಂಜಲಿ ಈ ಮನೆಗೆ ಬಾಡಿಗೆಗೆ ಬಂದಿದ್ದರು ಎಂದು ಮನೆಯ ಮಾಲೀಕ ತಿಳಿಸಿದ್ದಾರೆ.
ಮೋನಿಕಾ ಅವರು ಪರೀಕ್ಷೆ ಬರೆಯಲು ಬೆಳಗ್ಗೆ ಕಾಲೇಜಿಗೆ ಹೋಗಿದ್ದರು. ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಅಂಜಲಿ, ವೈಟ್‌ಫೀಲ್ಡ್‌ನಲ್ಲಿರುವ ಕಚೇರಿಗೆ ಹೋಗಿದ್ದರು. ಪರೀಕ್ಷೆ ಮುಗಿದ ನಂತರ ಮಧ್ಯಾಹ್ನ 1.30ರ ಸುಮಾರಿಗೆ ಮನೆಗೆ ಬಂದ ಮೋನಿಕಾ, ಸಹೋದರಿಯ ಮೊಬೈಲ್‌ಗೆ ಕರೆ ಮಾಡಿ ಪರೀಕ್ಷೆಯನ್ನು ಚೆನ್ನಾಗಿ ಬರೆದಿದ್ದೇನೆ ಎಂದು ಹೇಳಿದ್ದರು.
ಆ ನಂತರ ದುಷ್ಕರ್ಮಿಗಳು ಮನೆಗೆ ನುಗ್ಗಿ ಅವರನ್ನು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಅಂಜಲಿ ಅವರು ಸಂಜೆ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆರೋಪಿಗಳು ಮನೆಯಲ್ಲಿದ್ದ ಚಿನ್ನಾಭರಣ ಮತ್ತಿತರ ಬೆಲೆ ಬಾಳುವ ವಸ್ತುಗಳನ್ನು ತೆಗೆದುಕೊಂಡು ಹೋಗಿಲ್ಲ.
ಕೊಲೆಯ ಕಾರಣ ಹಾಗೂ ಆರೋಪಿಗಳ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ ಪೊಲೀಸರು ಹೇಳಿದ್ದಾರೆ. ಹಳೆಯ ದ್ವೇಷ ಅಥವಾ ಪ್ರೇಮ ಪ್ರಸಂಗ ಹತ್ಯೆಗೆ ಕಾರಣವಿರಬಹುದು ಎನ್ನಲಾಗಿದೆ. ಪೂರ್ವ ವಿಭಾಗದ ಡಿಸಿಪಿ ಟಿ.ಜಿ.ಕೃಷ್ಣಭಟ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮಹದೇವಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications