ಬೆಂಗಳೂರು ವಿಶ್ವವಿದ್ಯಾಲಯದ 228 ಎಕರೆ ಗುಳುಂ

ಈ ಹಿಂದೆ ವಿವಿ ಭೂಗಳ್ಳತನವನ್ನು ಮಟ್ಟ ಹಾಕಲು ವಿವಿಯ ಅಂದಿನ ಕುಲಸಚಿವ ಡಾ. ಎನ್ ಆರ್ ಶೆಟ್ಟಿ ಅವರು ಸಾಕಷ್ಟು ಶ್ರಮಿಸಿದರು. ಆಗ ಭೂಗಳ್ಳತನಕ್ಕೆ ಸ್ವಲ್ಪಮಟ್ಟಿಗೆ ಕಡಿವಾಣ ಬಿತ್ತು. ಆದರೆ ಇತ್ತೀಚೆಗೆ ಇದು ಅವ್ಯಾಹತವಾಗಿ ನಡೆಯುತ್ತಿದೆ.
ಬೆಂಗಳೂರು ವಿವಿ ಹಾಲಿ ರಿಜಿಸ್ಟ್ರಾರ್ ಪ್ರೊ. ಮೇಲೂರು ಮೈಲಾರಪ್ಪ ನೇತೃತ್ವದಲ್ಲಿ ಸಿಂಡಿಕೇಟ್ ಸದಸ್ಯರಾದ ಕೃಷ್ಣ, ವೇದಮೂರ್ತಿ, ಪ್ರೊ. ಕೆವಿ ಆಚಾರ್ಯ, ಪುಟ್ಟಸ್ವಾಮಿ ಅವರ ತಂಡ ಸಾದ್ಯಂತವಾಗಿ ಗುರುವಾರ ಪರಿವೀಕ್ಷಣೆ ನಡೆಸಿದಾಗ ಭಾರಿ ಭೂಗಳ್ಳತನ ನಡೆದಿರುವುದು ಕಣ್ಣಿಗೆ ರಾಚಿದೆ.
ಮೊದಲು ಬೆಂಗಳೂರು ವಿವಿಯ ಭೂ ಸಮಿಕ್ಷೆ ಕೈಗೊಂಡು, ನಂತರ ಕಾನೂನುರೀತ್ಯ ಅದನ್ನು ಮರುವಶಪಡಿಸಿಕೊಳ್ಳಲು ಹೋರಾಟ ಮಾಡುವುದಾಗಿ ಪ್ರೊ. ಮೇಲೂರು ಮೈಲಾರಪ್ಪ ತಿಳಿಸಿದರು.
1970ರಲ್ಲಿ ರಾಜ್ಯ ಸರಕಾರ ಬೆಂಗಳೂರು ವಿವಿಗೆ 1,319 ಎಕರೆಯನ್ನು ನೀಡಿತ್ತು. ಆದರೆ ಮಾಲತ್ತಹಳ್ಳಿ, ನಾಯಂಡನಹಳ್ಳಿ, ನಾಗರಭಾವಿ, ನಾಗದೇವನಹಳ್ಳಿ, ಚಂದ್ರಾ ಲೇಔಟ್ ಆಸುಪಾಸಿನಲ್ಲಿ ಹತ್ತಾರು ಎಕರೆ ಗುಳುಂ ಆಗಿದೆ.
ಸಮಿತಿ ಕಲಾಗ್ರಾಮಕ್ಕೆ ಭೇಟಿ ನೀಡಿದಾಗ ಮೂರ್ತಿ ಎಂಬ ದಲಿತ ನಾಯಕ ಬೆಂಗಳೂರು ವಿವಿಗೆ ಸೇರಿದ 5 ಎಕರೆ ಜಮೀನಿನಲ್ಲಿ ತೆಂಗಿನ ತೋಟ ಹಾಕಿಕೊಂಡು ರಾಜಾರೋಷವಾಗಿ ಜೀವನ ನಡೆಸುತ್ತಿದ್ದ ಎಂದು ಪ್ರೊ. ಮೇಲೂರು ಮೈಲಾರಪ್ಪ ತಿಳಿಸಿದರು.
ಇನ್ನು NGEF colonyಯಲ್ಲಿ ಅನಧಿಕೃತ ಕಟ್ಟಡ ತಲೆಯೆತ್ತಿರುವುದೂ ತಂಡದ ಗಮನಕ್ಕೆ ಬಂದಿತು. ಅಲ್ಲಿ ವಿಸ್ಕಿ ಶೀಷೆಗಳು, ಹಾಸಿಗೆ, ಕಾಂಡೋಮ್ ಪ್ಯಾಕೆಟ್ಟುಗಳು ಪತ್ತೆಯಾದವು. ಅಷ್ಟೇ ಅಲ್ಲ. ಕೆಲವೆಡೆ ಅಕ್ರಮವಾಗಿ ನಿರ್ಮಿಸಿಕೊಂಡಿರುವ ಲಾರಿ ತಂಗುದಾಣಗಳು, ಚಿಕ್ಕ ಚಿಕ್ಕ ಗಿಡ ತೋಟಗಳೂ ಕಂಡುಬಂದವು.












Click it and Unblock the Notifications