ಬೆಂಗಳೂರಲ್ಲಿ ಪೊಲೀಸರ ಮೇಲೆ ವಕೀಲರಿಂದ ಮತ್ತೆ ಹಲ್ಲೆ

ಹಲಸೂರು ಗೇಟ್ ಮಹಿಳಾ ಪೊಲೀಸ್ ಠಾಣೆಯ ಬಸವರಾಜು ಮತ್ತು ರೂಪಾ ಎಂಬ ಪೊಲೀಸ್ ಪೇದೆಗಳು ಹಲ್ಲೆಗೊಳಗಾದವರು. ಬಸವರಾಜು ಅವರು ತೀವ್ರವಾಗಿ ಗಾಯಗೊಂಡಿದ್ದು, ಅವರಿಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸವರಾಜು ಅವರ ಮೂಗು ಒಡೆದು ರಕ್ತ ಒಸರುತ್ತಿತ್ತು. ಕೈ ಮತ್ತು ಕಾಲುಗಳ ಮೇಲೆಯೂ ಹಲ್ಲೆಗಳಾಗಿವೆ.
ಆರೋಪಿಯೊಬ್ಬನನ್ನು ವಾಹನದಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಲು ಬರುತ್ತಿದ್ದಾಗ, ಆವರಣದಲ್ಲಿದ್ದ 20ರಿಂದ 25 ವಕೀಲರು ಪೊಲೀಸರ ವಿರುದ್ಧ ಘೋಷಣೆ ಕೂಗುತ್ತ, ಏಕಾಏಕಿ ಹಲ್ಲೆ ಮಾಡಲು ಶುರುಮಾಡಿದರು ಎಂದು ಮಾಧ್ಯಮಕ್ಕೆ ಬಸವರಾಜು ತಿಳಿಸಿದ್ದಾರೆ.
ಮಾರ್ಚ್ 2ರಂದು ಸಿಟಿ ಸಿವಿಲ್ ಕೋರ್ಟ್ ಅವರಣದಲ್ಲಿ ನಡೆದ ಹಲ್ಲೆಗೆ ಪ್ರತಿಕಾರವಾಗಿ ವಕೀಲರು ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಪತ್ರಕರ್ತರ ಮೇಲೆ ಹಲ್ಲೆ ನಡೆದ ಸಂದರ್ಭದಲ್ಲಿ ಇದೇ ಬಸವರಾಜು ವಕೀಲರ ಮೇಲೆ ಹಲ್ಲೆ ಮಾಡಿದ್ದರು ಎಂದು ವಕೀಲರು ಆರೋಪಿಸಿದ್ದಾರೆ.
ಇದ್ದಕ್ಕಿದ್ದಂತೆ ದಾಳಿ ಮಾಡಿ ಬಸವರಾಜು ಮೇಲೆ ಹಲ್ಲೆ ಮಾಡಿದ್ದಾರೆ. ಅವರು ಕೆಳಗೆ ಬಿದ್ದರೂ ಅವರನ್ನು ಬಿಟ್ಟಿಲ್ಲ. ಅವರ ಅಂಗಿಯನ್ನು ಕಿತ್ತುಹಾಕಲಾಗಿದೆ. ಬೂಟುಗಾಲಿನಿಂದ ಬಸವರಾಜು ಅವರನ್ನು ವಕೀಲರು ಒದ್ದಿದ್ದಾರೆ. ಸಹೋದ್ಯೋಗಿಯ ಮೇಲೆ ಹಲ್ಲೆಯಾಗುವುದನ್ನು ತಪ್ಪಿಸಲು ಹೋದ ರೂಪಾ ಮೇಲೆ ಕೂಡ ಕೆಲ ವಕೀಲರು ಕೈ ಮಾಡಿದ್ದಾರೆ.
ಮಾರ್ಚ್ 2ರಂದು ಪತ್ರಕರ್ತರ ಮೇಲೆ ವಕೀಲರಿಂದ ಹಲ್ಲೆ ನಡೆದ ಮೇಲೆ, ಮಾಧ್ಯಮ ಮತ್ತು ವಕೀಲರ ನಡುವೆ ನಡೆಯುತ್ತಿರುವ ಸಂಧಾನ ಪ್ರಕ್ರಿಯೆ ಇನ್ನೂ ಜಾರಿಯಲ್ಲಿದೆ. ಹಾಗೆಯೆ, ವಕೀಲರನ್ನು ಮಾಧ್ಯಮಗಳಲ್ಲಿ ಗೂಂಡಾಗಳು, ತಾಲಿಬಾನಿಗಳು, ರೌಡಿಗಳು ಎಂದು ಸಂಬೋಧಿಸಬಾರದು ಎಂದು ನ್ಯಾಯಾಲಯ ಆಜ್ಞೆ ಜಾರಿ ಮಾಡಿದೆ. ಕೆಲ ದಿನಗಳ ಹಿಂದೆ, ಪೊಲೀಸರ ಕುಟುಂಬದ ಸದಸ್ಯರು ಒಂದು ದಿನದ ಸತ್ಯಾಗ್ರಹ ಮಾಡಿ, ಪೊಲೀಸರನ್ನು ವಕೀಲರಿಂದ ರಕ್ಷಿಸಬೇಕೆಂದು ಆಗ್ರಹಿಸಿದ್ದರು.












Click it and Unblock the Notifications