ಯಡಿಯೂರಪ್ಪ ಮುಖ್ಯಮಂತ್ರಿ : ಹೈಕಮಾಂಡ್ ಗ್ರೀನ್ ಸಿಗ್ನಲ್?

ಯಡಿಯೂರಪ್ಪನವರೇ ಬಜೆಟ್ ಮಂಡಸಬೇಕಾದರೆ ಅದಕ್ಕೆ ಅವರು ಮತ್ತೆ ಮುಖ್ಯಮಂತ್ರಿ ಗದ್ದುಗೆಯೇರಬೇಕು. ಯಡಿಯೂರಪ್ಪನವರ ಒತ್ತಡ ತಂತ್ರ ಮತ್ತು ಮಂತ್ರಕ್ಕೆ ಮಣಿದಿರುವ ದೆಹಲಿಯ ಬಿಜೆಪಿ ಹೈಕಮಾಂಡ್, ಯಡಿಯೂರಪ್ಪನವರನ್ನೇ ಮತ್ತೆ ಮುಖ್ಯಮಂತ್ರಿ ಮಾಡಲು ಹಸಿರು ನಿಶಾನೆ ನೀಡಿದೆ ಎಂಬ ಸುದ್ದಿ ರಾಜಕೀಯ ಅಂಗಳದಲ್ಲಿ ಬಿರುಗಾಳಿಯಂತೆ ಸುತ್ತುತ್ತಿದೆ.
ಅಕ್ರಮ ಗಣಿಗಾರಿಕೆಯ ಕಳಂಕದಿಂದ ಹೊರಬಂದಿರುವ ಯಡಿಯೂರಪ್ಪ ಡಿನೋಟಿಫಿಕೇಶನ್‌ಗೆ ಸಂಬಂಧಿಸಿದಂತೆ ಇನ್ನೂ ಹಲವಾರು ಪ್ರಕರಣಗಳನ್ನು ಎದುರಿಸುತ್ತಿದ್ದಾರಾದರೂ, ಪಕ್ಷದ ಸದ್ಯದ ಸ್ಥಿತಿ ಮತ್ತು ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಯಡಿಯೂರಪ್ಪ ಅವರಿಗೇ ಕರ್ನಾಟಕದ ಕಿರೀಟವನ್ನು ತೊಡಿಸುವುದು ಲೇಸೆಂದು ಬಿಜೆಪಿ ಹೈಕಮಾಂಡ್ ತೀರ್ಮಾನಕ್ಕೆ ಬಂದಂತಿದೆ.
ಉಡುಪಿ-ಚಿಕ್ಕಮಗಳೂರಲ್ಲಿ ಭರದ ಪ್ರಚಾರ ನಡೆಸಿರುವ ಸದಾನಂದ ಗೌಡರು, ಇನ್ನೂ ಐದು ದಿನ ಕಾದು ನೋಡಿ ಎಂದು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡುತ್ತಿದ್ದಾರೆ. ಆದರೆ, ಯಡಿಯೂರಪ್ಪನವರ ಪಟಾಲಂ ಮಾತ್ರ ಸಂತಸದಿಂದ ಬೀಗುತ್ತಿದೆ. ಯಾರು ಬಜೆಟ್ ಮಂಡಿಸಲಿದ್ದಾರೆ ಎಂಬ ಪ್ರಶ್ನೆಗೆ, ಬಿಜೆಪಿ ಮುಖ್ಯಮಂತ್ರಿ ಬಜೆಟ್ ಮಂಡಿಸಲಿದ್ದಾರೆ ಎಂದು ಎಲ್ಲರ ಬಾಯಿಯಿಂದ ಮಾತು ಬರುತ್ತಿದೆಯೇ ಹೊರತು, ಸದಾನಂದ ಗೌಡರೇ ಬಜೆಟ್ ಮಂಡಿಸಲಿದ್ದಾರೆ ಎಂದು ಯಾರಿಂದಲೂ ಹೊರಡುತ್ತಿಲ್ಲ.
ಮಾರ್ಚ್ 21ರ ಬಜೆಟ್ ಮಂಡನೆಗೆ ಸಂಪುಟದಿಂದ ಅನುಮೋದನೆ ದೊರೆಯಬೇಕಾಗುತ್ತದೆ. ಯಾರು ಮುಖ್ಯಮಂತ್ರಿಯಾಗಬೇಕು, ಯಾರು ಬಜೆಟ್ ಮಂಡನೆಯಾಗಬೇಕು ಎಂಬ ಪ್ರಶ್ನೆ ಹಠಾತ್ತನೆ ಉದ್ಭವಿಸಿದ್ದರಿಂದ ಉಡುಪಿ-ಚಿಕ್ಕಮಗಳೂರು ಲೋಕಸಭಾ ಚುನಾವಣೆ ನಡೆಯುವುದಕ್ಕೂ ಮೊದಲೇ ಸಂಪುಟ ಸಭೆ ನಡೆಯುವ ಸಾಧ್ಯತೆಯಿದೆ. ಸಹಜವಾಗಿ ಸದಾನಂದ ಗೌಡರ ಪಾಳಯ ಅಲ್ಪಸಂಖ್ಯಾತವಾಗಿದ್ದರೆ, ಯಡಿಯೂರಪ್ಪ ಪಾಳಯದ ಬಲವೇ ಮುಂದಿನ ಮಾತುಕತೆ ನಡೆಸಲಿದೆ ಎನ್ನಲಾಗಿದೆ.
ಈ ನಡುವೆ, ಸದಾನಂದ ಗೌಡರನ್ನು ಶತಾಯಗತಾಯ ಬೆಂಬಲಿಸುತ್ತಿರುವ ಬಾಲಚಂದ್ರ ಜಾರಕಿಹೊಳಿ ಮತ್ತು ಅಸ್ನೋಟಿಕರ್, ಸರಕಾರ ಬಿದ್ದುಹೋದರೂ ಪರವಾಗಿಲ್ಲ, ಯಡಿಯೂರಪ್ಪನವರಿಗೆ ಮುಖ್ಯಮಂತ್ರಿಯಾಗಲು ಮತ್ತು ಬಜೆಟ್ ಮಂಡಿಸಲು ಅವಕಾಶ ನೀಡುವುದಿಲ್ಲ ಎಂದು ಸೆಡ್ಡುಹೊಡೆದಿದ್ದಾರೆ. ಬಿಜೆಪಿಯಲ್ಲಿ ಆಗುತ್ತಿರುವ ಆಂತರಿಕ ಕದನ, ಲೋಕಸಭೆ ಉಪಚುನಾವಣೆಯ ಮೇಲೆ ಆದರೂ ಆಶ್ಚರ್ಯವಿಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ತೆರೆಯ ಮರೆಯಿಂದಲೇ ಈ ಎಲ್ಲ ನಾಟಕಗಳನ್ನು ನೋಡುತ್ತ ನಗುತ್ತಿವೆ.












Click it and Unblock the Notifications