ಟೆಕ್ಕಿ ಸತೀಶ್ ಹತ್ಯೆ:ಲಾವಣ್ಯ ಇನ್ನೂ absconding!

ಹೈದರಾಬಾದಿನ ಅಮೀರಪೇಟೆ ಬಳಿಯಿರುವ ಬಿಗ್ ಬಜಾರ್ ಬಳಿಗೆ ಬರುವಂತೆ ಬಾಚು ಸತೀಶನಿಗೆ ಆತನ ಪ್ರಿಯತಮೆ ಲಾವಣ್ಯ ಕರೆ ನೀಡುತ್ತಾಳೆ. ಅಮಾಯಕವಾಗಿ ಅಲ್ಲಿಗೆ ತೆರಳಿದ ಸತೀಶನನ್ನು ಲಾವಣ್ಯ ಅಪ್ಪ ಯಾದಯ್ಯ ಮತ್ತು ಆತನ ಗೆಳೆಯ ರಾಜೇಶ್ವರ ಗೌಡ್ ಬಲವಂತವಾಗಿ ತಮ್ಮ ಕಾರಿನೊಳಕ್ಕೆ ಎಳೆದುಕೊಳ್ಳುತ್ತಾರೆ. ಅಲ್ಲಿಂದ ಮುಂದೆ ಮುಲುಗ್ ಪ್ರದೇಶದತ್ತ ವೇಗವಾಗಿ ಕಾರು ಸಾಗುತ್ತದೆ.
ಇಬ್ಬರೂ ಸತೀಶನನ್ನು ಕಾರಿನಲ್ಲೇ ಉಸಿರುಗಟ್ಟಿಸಿ ಸಾಯಿಸುತ್ತಾರೆ. ಬಳಿಕ ಕೊಕ್ಕೊಂಡ ಗ್ರಾಮದ ಸಮೀಪ ಬೆಟ್ಟ ಪ್ರದೇಶದಲ್ಲಿ ದೇಹದ ಮೇಲೆ ಪೆಟ್ರೋಲ್ ಮತ್ತು ಡೀಸೆಲ್ ಸುರಿದು, ಬೆಂಕಿ ಹಚ್ಚುತ್ತಾರೆ. ಎರಡು ದಿನಗಳ ನಂತರ ಮತ್ತೆ ಅದೇ ಸ್ಥಳಕ್ಕೆ ತೆರಳಿ, ಮತ್ತೆ ದೇಹದ ಅಳಿದುಳಿದ ಭಾಗಗಳಿಗೆ ಬೆಂಕಿ ಹಚ್ಚುತ್ತಾರೆ. ಸ್ವಲ್ಪ ಸಮಯದ ಬಳಿಕ ಮೂಳೆಗಳನ್ನು ಪ್ಲಾಸ್ಟಿಕ್ ಕವರಿನಲ್ಲಿ ತುರುಕಿಕೊಂಡು ಖುತುಬುಲ್ಲಾಪುರ ಸಮೀಪ ಕಾಲುವೆಯಲ್ಲಿ ಬಿಸಾಡುತ್ತಾರೆ.
ಈ ಮಧ್ಯೆ, ಸತೀಶನ ತಂದೆ ಶಂಕರಯ್ಯ ಸರೂರುನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಪೂರ್ಣಚಂದ್ರ ರಾವ್ ಮತ್ತು ಸಬ್‌ಇನ್ಸ್‌ಪೆಕ್ಟರ್ ವೆಂಕಟೇಶ್ವರುಲು ಅವರಿಗೆ ಮೊರೆ ಹೋದಾಗ ಇಬ್ಬರೂ ಚುನಾವಣೆ ನಿಮಿತ್ತ ಬ್ಯುಸಿಯಾಗಿದ್ದೇವೆ ಎಂದು ಶಂಕರಯ್ಯನನ್ನು ಗದರಿ ಕಳಿಸುತ್ತಾರೆ.
ನಿರಾಶರಾದ ಶಂಕರಯ್ಯ ಬೆಂಗಳೂರಿಗೆ ಬಂದು ಮಗನ ಲ್ಯಾಪ್ ಟಾಪ್, ಡೈರಿ ಮತ್ತು ಕಾಲ್ ಡೀಟೈಲ್ಸ್ ತೆಗೆದು ನೋಡಿದಾಗ ಲಾವಣ್ಯ ಬೆಳಕಿಗೆ ಬರುತ್ತಾಳೆ. ಅದಾದ ನಂತರವೂ ಪ್ರಕರಣದ ದಿಕ್ಕು ತಪ್ಪಿಸಲು, ತಾನು ಅಮಾಯಕಳು ಎಂದು ಬಿಂಬಿಸಲು ಲಾವಣ್ಯ ಎರಡು ಬಾರಿ ಸತೀಶನ (ಸತ್ತ ನಂತರ) ಮೊಬೈಲಿಗೆ ಕಾಲ್ ಮಾಡುತ್ತಾಳೆ. ಜತೆಗೆ ಎಸ್ಎಂಎಸ್ ಸಹ ಕಳಿಸುತ್ತಾಳೆ. ಆದರೆ ಕೊನೆಗೂ ಪೊಲೀಸರು ಪ್ರಕರಣವನ್ನು ಬೇಧಿಸುತ್ತಾರೆ. ಗಮನಾರ್ಹವೆಂದರೆ ಪೊಲೀಸರ ದೃಷ್ಟಿಯಲ್ಲಿ ಲಾವಣ್ಯ ಇನ್ನೂ absconding!











Click it and Unblock the Notifications