ಕಿಂಗ್‌ಫಿಷರನ್ನು ಮಲ್ಯ ಅವರೇ ಕಾಪಾಡಬೇಕು : ಮೊಯ್ಲಿ

ಬೆಂಗಳೂರಿನಲ್ಲಿ ಶನಿವಾರ, ಮಾ.3ರಂದು ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಅವರು, ತೀವ್ರ ಸಂಕಷ್ಟದಲ್ಲಿರುವ ಕಿಂಗ್‌ಫಿಷರ್ ಅಸ್ತಂಗತವಾಗುವುದನ್ನು ಕೇಂದ್ರ ಸರಕಾರ ಬಯಸುವುದಿಲ್ಲ. ಅದು ಬದುಕುಳಿಯಬೇಕು. ಕ್ರಿಯಾತ್ಮಕ ಕ್ರಮಗಳನ್ನು ತೆಗೆದುಕೊಂಡು, ಸೂಕ್ತವಾದ ಪರಿಹಾರ ಕಂಡುಕೊಳ್ಳಬೇಕಾದ ಜವಾಬ್ದಾರಿ ಮಲ್ಯ ಅವರ ಮೇಲೆಯೇ ಇದೆ ಎಂದು ನುಡಿದರು.
ಕಿಂಗ್‌ಫಿಷರ್ ಮಾತ್ರವಲ್ಲ ಭಾರತದ ಇಂಡಿಯನ್ ಏರ್‌ಲೈನ್ಸ್ ಅಥವಾ ಏರ್ ಇಂಡಿಯಾ ಸೇರಿದಂತೆ ಅನೇಕ ಏರ್‌ಲೈನ್ಸ್ ಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಲಾಗುತ್ತಿಲ್ಲ. ಈ ನಿಟ್ಟಿನಲ್ಲಿ ಹೆಚ್ಚಿನ ಚಿಂತನೆಯ ಅಗತ್ಯವಿದೆ ಎಂದು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಮೊಯ್ಲಿ ಅಭಿಪ್ರಾಯಪಟ್ಟರು.
ವಿಜಯ್ ಮಲ್ಯ ಮಾಲಿಕತ್ವದ ಕಿಂಗ್‌ಫಿಷರ್ ಏರ್‌ಲೈನ್ಸ್ ತಲೆಯ ಮೇಲೆ 7,057 ಕೋಟಿ ರು. ಸಾಲ ಇದ್ದು, 6,000 ಕೋಟಿ ರು. ನಷ್ಟವನ್ನು ಈಗಾಗಲೆ ಅನುಭವಿಸಿದೆ. ಈ ಸಂಸ್ಥೆಗೆ ಅತಿಹೆಚ್ಚು ಸಾಲ ನೀಡಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಸಾಲದಿಂದ ಹೊರತರಲು ಮತ್ತಷ್ಟು ಸಾಲ ನೀಡುವ ಆಲೋಚನೆ ಇಲ್ಲವೇ ಇಲ್ಲ ಎಂದು ಹೇಳಿ ಕೈತೊಳೆದುಕೊಂಡಿದೆ.












Click it and Unblock the Notifications