ಮಾ.11 ರಂದು ಬಿಎಸ್ ವೈ ಬೆಂಬಲಿಗರ ಶಕ್ತಿ ಪ್ರದರ್ಶನ

ಉಡುಪಿ- ಚಿಕ್ಕಮಗಳೂರು ಲೋಕಸಭಾ ಉಪ ಚುನಾವಣೆಯ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ ಕೊಟ್ಟರೂ ಬೇಡ ಎಂದು ಮುಖ ಆ ಕಡೆ ತಿರುಗಿಸುವ ಯಡಿಯೂರಪ್ಪ ಅವರು ತಮ್ಮ ಮುಂದಿನ ನಡೆ ಬಗ್ಗೆ ಸುಳಿವು ಬಿಟ್ಟು ಕೊಟ್ಟಿದ್ದಾರೆ.
ಮಾ.3 ರಂದು ನಡೆಯಲಿರುವ ಕೋರ್ ಕಮಿಟಿಗೆ ಸಭೆಯಲ್ಲಿ ಯಡಿಯೂರಪ್ಪ ಪಾಲ್ಗೊಳ್ಳಲಿದ್ದಾರೆ ನಂತರ ನಮ್ಮ ಮುಂದಿನ ನಡೆ ಬಗ್ಗೆ ಹೇಳುತ್ತೇವೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದ್ದರು.
ಆದರೆ, ಈಗ ಕೋರ್ ಕಮಿಟಿ ಸಭೆಗೂ ಯಡಿಯೂರಪ್ಪ ಚಕ್ಕರ್ ಹಾಕುತ್ತಿದ್ದಾರೆ. ಅನಂತ್ ಕುಮಾರ್, ಈಶ್ವರಪ್ಪ ಸೇರಿರುವ ಕಡೆ ತಲೆಹಾಕಿ ಮಲಗದಿರಲು ನಿರ್ಧರಿಸಿದ್ದಾರೆ. ಈ ನಿರ್ಧಾರದ ಫಲವಾಗಿ ಮಾ.11ರಂದು ಹುಬ್ಬಳ್ಳಿಯಲ್ಲಿ ಬೃಹತ್ ಸಾರ್ವಜನಿಕ ಸಭೆ ನಡೆಸಲು ಯಡ್ಡಿ ಬೆಂಬಲಿಗರು ತೀರ್ಮಾನಿಸಿದ್ದಾರೆ.
ಲಭ್ಯ ಮಾಹಿತಿಯಂತೆ ಸುಮಾರು 1 ಲಕ್ಷಕ್ಕೂ ಅಧಿಕ ಜನರನ್ನು ಒಟ್ಟುಗೂಡಿಸಿ ಯಡಿಯೂರಪ್ಪ ಅವರ ಬೆಂಬಲಿಗರು ತಮ್ಮ ಶಕ್ತಿ ಪ್ರದರ್ಶನ ಮಾಡಲು ಸಜ್ಜಾಗಿದ್ದಾರೆ. ಹೈಕಮಾಂಡ್ ಕೊಡುವ ಬಿಕ್ಷೆ ನಿಮಗೆ ಬೇಡ, ನಿಮ್ಮ ಬೆಂಬಲಕ್ಕೆ ನಾವಿದ್ದೇವೆ ಎಂದು ಸುಮಾರು 50 ಶಾಸಕರು ಹೇಳಿದ್ದಾರೆ. ಇವರ ಜೊತೆಗೆ 70 ಕ್ಕೂ ಅಧಿಕ ಮಠಗಳು ಕೈ ಜೋಡಿಸಿದೆ.
ಈ ಎಲ್ಲಾ ಹುಮ್ಮಸ್ಸಿನಲ್ಲಿ ಯಡಿಯೂರಪ್ಪ ಅವರು ಮಾ.11 ರಂದು ಯಾವ ನಿರ್ಧಾರ ಕೈಗೊಳ್ಳುತ್ತಾರೆ. ಹೊಸ ಪಕ್ಷ ಕಟ್ಟುತ್ತಾರಾ? ಖೇಣಿ ಪಕ್ಷಕ್ಕೆ ಸೇರುತ್ತಾರಾ? ಎಂಬ ಪ್ರಶ್ನೆಗೆ ಉತ್ತರ ಸಿಗಲಿದೆ.











Click it and Unblock the Notifications