ಹ್ಯಾಂಗೋವರ್ ಮುಗೀತಾ ಯಡಿಯೂರಪ್ನೋರೆ?

ಅಲ್ಲ ಯಡಿಯೂರಪ್ನೋರೆ ಅದೇನೂಂತ ನಿನ್ನೆ ಬರ್ತ್ ಡೆ ಆಚರಿಸಿಕೊಂಡ್ರಿ. ಮನದಾಳದಿಂದ ಹೇಳಿ, ಪ್ಲೀಸ್. ನಿಜಕ್ಕೂ ನೀವು ಮನಃಪೂರ್ತಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡಿರಾ? ನಿಮ್ಮ ಮೈಮನ ಸಂಭ್ರಮದಿಂದ ಕುಣೀತಿತ್ತಾ? ನೋ ಛಾನ್ಸ್. ನಿಮ್ಮ ಕಟ್ಟರ್ ಅಭಿಮಾನಿಗಳು ಒಂದಷ್ಟು ಸಂಭ್ರಮಪಟ್ಟಿರಬಹುದಾದರೂ ನಿಮ್ಮ ವಿರೋಧಿಗಳು ಖಂಡಿತಾ ನಿಮಗೆ ಆ ಅವಕಾಶ ಸಿಗದಂತೆ ಮಾಡಿಬಿಟ್ಟಿದ್ದರು.
ನೀವೂ ಅಷ್ಟೆ. ಅಷ್ಟೇ ಅನ್ಯಮನಸ್ಕರಾಗಿದ್ದಿರಿ. ಒಂಚೂರು ನಿಮ್ಮಲ್ಲಿ ಲವಲವಿಕೆ ಇರಲಿಲ್ಲ. ಅನುಕ್ಷಣವೂ ರೋಷಾವೇಶ ತುಂಬಿಕೊಂಡಿತ್ತು. ನಿಜಕ್ಕೂ ಹುಟ್ಟುಹಬ್ಬ ಅಂದರೆ ಇಡೀ ದಿನ ಉಲ್ಲಸಿತರಾಗಿ, ಹಗರುವಾಗಬೇಕಾದ ದಿನ. ಆದರೆ ನೀವು ಯಾಕೊ ತುಂಬಾನೇ ಹಗರುವಾಗಿಬಿಟ್ಟಿರಿ. ಇಲ್ಲೊಂದು ಸ್ಯಾಂಪಲ್ ಇದೆ. ಈ ಚಿತ್ರ ನೋಡಿ. ಎಲ್ಲವನ್ನೂ ಅದೇ ಹೇಳುತ್ತದೆ. ಅಲ್ಲ ಯಡಿಯೂರಪ್ನೋರೆ ನಿಮ್ಮ ಹುಟ್ಟುಹಬ್ಬದಂದು ಅಂಧ ಮಕ್ಕಳಿಂದ ಕೇಕ್ ಕತ್ತರಿಸಿ, ಸಂಭ್ರಮಿಸಿದ್ದು ನಿಜಕ್ಕೂ ಔಚಿತ್ಯಪೂರ್ಣವೇ. ಇದನ್ನು ಆಯೋಜಿಸಿದ್ದ ನಿಮ್ಮ ಬೆಂಬಲಿಗರಿಗೆ ಒಂದು ಥ್ಯಾಂಕ್ಸ್ ಹೇಳಲೇಬೇಕು.
ಆದರೆ ನೀವು ಯಾಕೋ ಒಂದು ಯಡವಟ್ಟು ಮಾಡ್ಬಿಟ್ಟಿರಿ. ತೀರಾ ಅನ್ಯಮನಸ್ಕರಾಗಿದ್ದ, ಮ್ಲಾನವದನರಾಗಿದ್ದ ನೀವು ಆ ಮಕ್ಕಳ ಬಗ್ಗೆ ತೀರಾ ತಾತ್ಸಾರದಿಂದ ನಡೆದುಕೊಂಡುಬಿಟ್ಟಿರಿ. ಇಂತಾ ಭಾಗ್ಯಕ್ಕೆ ಆ ಮಕ್ಕಳನ್ನು ಯಾಕೆ ಕರೆಸಿದರೋ ನಿಮ್ಮ ಆ ಬೆಂಬಲಿಗರು. ನಿಜಕ್ಕೂ ಅಷ್ಟೊಂದು ಜಡವಾಗಿಬಿಟ್ಟಿರಾ ನೀವು? ಅಲ್ಲ ಆ ಅಬೋಧ ಮಕ್ಕಳಿಗೆ ನಗುನಗುತಾ ಕೈಯಾರೆ ತುಂಡು ಕೇಕು ತಿನ್ನಿಸಬೇಕು ಅಂತ ನಿಮಗೆ ಅನ್ನಿಸಲೇ ಇಲ್ವಾ? ಹೋಗ್ಲಿ ಯಾವಾನಾದ್ರೂ ಹೀಗೆ ಮಕ್ಕಳ ಬಾಯಿಗೆ ಚಾಕು ಇಡ್ತಾರಾ? ಅದೂ ನಿಮ್ಮಂಥಾ ಮೇರು ವ್ಯಕ್ತಿ.
ಅದ್ಯಾಕೆ ಅಸೃಶ್ಯರಂತೆ ಚಾಕುವನ್ನು ಅವರ ಬಾಯಿಗಿಟ್ಟಿರಿ. ನಿಮಗಿದು ಶೋಭೆ ತರುವಂಥದ್ದಾ? ನನಗೊಂದು ಮಾತು ಹೇಳಿ. ಇದೇ ನೀವು ಶೋಭಾಗೋ, ಲಕ್ಷಣನಂತಹ ಸವದಿಗೋ, ಮತ್ಯಾರಿಗೋ ಬರ್ತ್ ಡೆ ಕೇಕ್ ತಿನ್ನಿಸಬೇಕು ಅಂದ್ರೆ ನೀವು ಹೀಗ್ ಮಾಡ್ತಿದ್ರಾ? ಆಪ್ಯಾಯತೆಯಿಂದ ಅವರನ್ನು ಬರೆಸೆಳೆದು ಮುದ್ದುಗರೆಯುತ್ತಾ ಬಾಯೊಳಗೆ ಇಡ್ತಿರಲಿಲ್ಲವೇ? ಹೇಳಿ ನೀವ್ಯಾಕೆ ಈ ನಿಷ್ಪಾಪಿ ಮಕ್ಕಳ ವಿಷಯದಲ್ಲಿ ಹೀಗೆ ನಡೆದುಕೊಂಡಿರಿ?












Click it and Unblock the Notifications