ಯಡ್ಡಿ ವಾಪಸ್, ಸಿಎಂಗೆ ಎದುರಾಗಿದೆ ಭಾರೀ ಕಂಟಕ

ನಿಕಟಪೂರ್ವ ಮುಖ್ಯಮಂತ್ರಿ ಯಡಿಯೂರಪ್ಪ ಸಿಎಂ ಸೀಟಿಗೆ ತನ್ನ ಹಿಡಿತ ದಿನೇದಿನೇ ಗಟ್ಟಿ ಗೊಳಿಸುತ್ತಿದ್ದು ಈ ತಿಂಗಳ ಕೊನೆಯಲ್ಲಿ ಆರು ಕೋಟಿ ಕನ್ನಡಿಗರು ಇನ್ನೊಂದು ರಾಜಕೀಯ ಪ್ರಹಸನ ದೊಡ್ಡ ಮಟ್ಟದಲ್ಲಿ ನೋಡುವ ಅವಕಾಶ ದಟ್ಟವಾಗಿದೆ. ರಾಜ್ಯ ಬಜೆಟ್ ತಯಾರಾಗುತ್ತಿರುವ ಈ ಸನ್ನಿವೇಶದಲ್ಲಿ, ಉಡುಪಿ ಮತ್ತು ಚಿಕ್ಕಮಗಳೂರು ಉಪಚುನಾವಣೆ ಬೇರೆ ಎದುರಾಗುತ್ತಿದ್ದು ಯಡಿಯೂರಪ್ಪ ಬಣದ ಸದಸ್ಯರು ಸದಾನಂದ ಗೌಡ ಅವರನ್ನು ಥಕಧಿಮಿ ಕುಣಿಸುತ್ತಿದ್ದಾರೆ.
ದುರದೃಷ್ಟ ಎಂದರೆ ಸಿಎಂ ಅವರಿಗೆ ತನ್ನ ತೊಂದರೆ, ನೋವುಗಳನ್ನು ಹಂಚಿಕೊಳ್ಳಲು ಆಪ್ತ ಸಂಗಾತಿಗಳೇ ಇಲ್ಲದಿರುವುದು. ಉಪಚುನಾವಣೆಯ ಹೊಣೆಯನ್ನು ಯಡಿಯೂರಪ್ಪ ಸಿಎಂ ಮತ್ತು ಈಶ್ವರಪ್ಪ ಅವರ ಮೇಲೆ ಹೊರಿಸಿದ್ದು, ಗೆದ್ದು ನಿಮ್ಮ ತಾಕತ್ತು ತೋರಿಸಿ ಎಂದು ಸವಾಲು ಹಾಕಿದ್ದಾರೆಂದು ಕೆಲಪತ್ರಿಕೆಗಳು ವರದಿಮಾಡಿವೆ. ಈ ಕ್ಷೇತ್ರವನ್ನು ಉಳಿಸಿಕೊಂಡು ಸಿಎಂ ಗೌಡ ತನ್ನ ಸಾಮರ್ಥ್ಯವನ್ನು ತೋರಿಸುವ ಜರೂರತ್ ಈಗ ಎದುರಾಗಿದೆ.
ಈ ತಿಂಗಳ ಕೊನೆಯ ದಿನಗಳು ಸಿಎಂ ಡಿವಿಎಸ್ ಪಾಲಿಗೆ ಸತ್ವ ಪರೀಕ್ಷೆಯ ದಿನಗಳು. ಈ ಎಲ್ಲಾ ಅಗ್ನಿಪರೀಕ್ಷೆಗಳನ್ನು ಸಿಎಂ ಗೆದ್ದು ಬಂದು ತಮ್ಮ ಶಕ್ತಿ ಸಾಬೀತು ಪಡಿಸಿದರೆ ಯಡಿಯೂರಪ್ಪ ನಡೆಸುತ್ತಿರುವ ಎಲ್ಲಾ ರಾಜಕೀಯ ಆಟಗಳಿಗೆ ಮೊಳೆ ಹೊಡೆದಂತೆಯೇ ಸರಿ.
ಕಾಶಿಯಿಂದ ಬಂದು ಸಿಹಿಸುದ್ದಿ ನೀಡುತ್ತೇನೆ ಎಂದಿರುವ ಯಡಿಯೂರಪ್ಪ ಅವರ ಮುಂದಿನ ನಡೆ ಯಾವ ರೀತಿ ಇರುತ್ತದೆ ಎನ್ನುವುದು ಕುತೂಹಲ ಮೂಡಿಸಿದೆ. ಹೈಕಮಾಂಡ್ ಮತ್ತು ಆರ್ ಎಸ್ ಎಸ್ ಮುಖಂಡರ ಆಜ್ಞೆಗೆ ತಲೆ ಕೆಡಿಸಿಕೊಳ್ಳದ ಯಡ್ಡಿ ನಿಷ್ಟಾವಂತರು ದಿನಕ್ಕೊಂದು ಹೇಳಿಕೆ ನೀಡಿ ಸಿಎಂ ಜೊತೆ ರಾಜ್ಯದ ಜನತೆಗೂ ಗೊಂದಲ ಮೂಡಿಸುತ್ತಿದ್ದಾರೆ.
ಇದೇ ತಿಂಗಳ 24ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ನಗರಕ್ಕೆ ಬರಲಿದ್ದಾರೆ. ಗಡ್ಕರಿ ಮುಂದೆ ಯಡಿಯೂರಪ್ಪ ತನ್ನ ಶಕ್ತಿ ಪ್ರದರ್ಶಿಸುವ ಸಾಧ್ಯತೆಗಳಿವೆ.












Click it and Unblock the Notifications