ಸ್ವಾಮೀಜಿ ಆರೋಪವನ್ನೇ ಪ್ರತಿಧ್ವನಿಸಿದ ಯಡಿಯೂರಪ್ಪ

ಗದಗದ ಶಿರಹಟ್ಟಿಯಲ್ಲಿ ಮುಕ್ತಿ ಮಂದಿರವನ್ನು ಉದ್ಘಾಟಿಸುವ ಮುನ್ನ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಇಳಿದ ನಂತರ ಮಾಧ್ಯಮದೊಡನೆ ಮಾತನಾಡುತ್ತಿದ್ದ ಯಡಿಯೂರಪ್ಪನವರು, ಒಗ್ಗಟ್ಟಾಗಿರುವ ವೀರಶೈವ ಸಮಾಜವನ್ನು ಬಿಜೆಪಿಯಲ್ಲಿನ ಕೆಲ ಮುಖಂಡರೇ ಯತ್ನಿಸುತ್ತಿದ್ದಾರೆ ಎಂದು, ಯಾರ ಹೆಸರನ್ನೂ ಪ್ರಸ್ತಾಪಿಸದೆ ಆಕ್ರೋಶ ವ್ಯಕ್ತಪಡಿಸಿದರು.
ಇಂಥ ಹೀನ ಪ್ರಯತ್ನದಿಂದ ಯಾರೂ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಆದರೆ, ವೀರಶೈವ ಸಮುದಾಯ ಒಡೆಯಲು ಎಂದೂ ಬಿಡುವುದಿಲ್ಲ. ಲಿಂಗಾಯತರನ್ನು ಒಂದುಗೂಡಿಸಿ ಮುನ್ನಡೆಸಿಕೊಂಡು ಹೋಗುತ್ತೇನೆ ಎಂದು ಯಡಿಯೂರಪ್ಪ ಸಂಕಲ್ಪ ಮಾಡಿದರು.
ಫೆ.24ರಂದು ಬಿಜೆಪಿ ರಾಷ್ಟ್ರಾಧ್ಯಕ್ಷ ನಿತೀನ್ ಗಡ್ಕರಿಯವರು ಬರುತ್ತಿದ್ದಾರೆ. ಅವರು ಬಂದಾಗ ಬಿಜೆಪಿಯ ಎಲ್ಲ ಶಾಸಕರನ್ನು ಒಂದುಗೂಡಿಸಿ ಮುಂದಿನ ನಡೆಗಳ ಬಗ್ಗೆ ಚರ್ಚಿಸಲಾಗುವುದು ಎಂದು ಅವರು ನುಡಿದರು. ತಮಗೇ ಬೆಂಬಲ ನೀಡಬೇಕೆಂದು 40 ಶಾಸಕರು ಸಹಿ ಹಾಕಿರುವ ಪತ್ರವನ್ನು ಯಡಿಯೂರಪ್ಪನವರು ಈಗಾಗಲೆ ಗಡ್ಕರಿಯವರಿಗೆ ರವಾನಿಸಿದ್ದಾರೆ ಎಂದು ಕೇಳಿಬಂದಿದೆ.
ಶಿರಹಟ್ಟಿಯಲ್ಲಿ ಮಂಗಳವಾರ ಬೆಳಿಗ್ಗೆ ನಡೆದ ಸಮಾರಂಭದಲ್ಲಿ ಉಜ್ಜೈನಿಯ ರಂಭಾಪುರ ಸ್ವಾಮೀಜಿ ಸೇರಿದಂತೆ ಅನೇಕ ವೀರಶೈವ ಮಠಾಧಿಪತಿಗಳು ಭಾಗವಹಿಸಿದ್ದರು. ರಾಜಕಾರಣಿಗಳ ಪಟ್ಟಿಯಲ್ಲಿ ವಸತಿ ಸಚಿವ ವಿ ಸೋಮಣ್ಣ, ಅಬಕಾರಿ ಸಚಿವ ರೇಣುಕಾಚಾರ್ಯ, ಅಶ್ಲೀಲ ಸಿಡಿ ಪ್ರಕರಣದಲ್ಲಿ ಆರೋಪ ಸ್ಥಾನದಲ್ಲಿರುವ ಸಿಸಿ ಪಾಟೀಲ, ಸಿಎಂ ಉದಾಸಿ, ರಾಮಣ್ಣ ಲಮಾಣಿ, ಅಶೋಕ್ ಕಾಟ್ವೆ ಮುಂತಾದವರು ಭಾಗವಹಿಸಿದ್ದರು.
ಈಶ್ವರಪ್ಪ ಪ್ರತಿಕ್ರಿಯೆ : ವೀರಶೈವ ಸಮಾಜವನ್ನು ಒಡೆಯಲು ಯಾವ ಬಿಜೆಪಿ ಮುಖಂಡನೂ ಯತ್ನಿಸುತ್ತಿಲ್ಲ. ಡಾ. ಸಿದ್ದಲಿಂಗ ಸ್ವಾಮೀಜಿ ಮತ್ತು ಯಡಿಯೂರಪ್ಪ ಯಾಕೆ ಹೀಗೆ ಹೇಳುತ್ತಿದ್ದಾರೋ ತಿಳಿಯುತ್ತಿಲ್ಲ. ಅವರು ಬೆಂಗಳೂರಿಗೆ ಬಂದ ನಂತರ ಅವರೊಂದಿಗೆ ಮಾತನಾಡಿ ಎಲ್ಲ ಗೊಂದಲಗಳನ್ನು ಪರಿಹರಿಸುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ ಶಿವಮೊಗ್ಗದಲ್ಲಿ ಮಂಗಳವಾರ ಹೇಳಿದರು.












Click it and Unblock the Notifications