ದಕ್ಷಿಣದ ಕಾಗೆಯೊಂದು ಉತ್ತರದ ಕಾಶಿಗೆ ಹಾರಿ

'ಮಾಡಬಾರದ್ದನ್ನು ಮಾಡಿ ಕಾಶಿ ವಿಶ್ವನಾಥನ ದರ್ಶನಕ್ಕೆ ತೆರಳಿದರೆ ಪಾಪ ಪರಿಹಾರವಾಗುವುದಿಲ್ಲ. ಯಡಿಯೂರಪ್ಪನವರ ರೀತಿಯ ರಾಜಕಾರಣಿಗಳ ಬಗ್ಗೆ ಕುವೆಂಪು ಆಗಲೇ ಯೋಚನೆ ಮಾಡಿದ್ದರು' ಎಂದು ಕುಮಾರಸ್ವಾಮಿ ಕಾಗೆ ಹಾರಿಸಿದ್ದಾರೆ.
ಇದೇ ವೇಳೆ 'ನನ್ನ ಅಧಿಕಾರದ ಅವಧಿಯಲ್ಲಿ ರಾಜ್ಯದಲ್ಲಿ ರೈತರು ಅತ್ಯಂತ ಸಂತೋಷವಾಗಿದ್ದರು. ಅಪ್ಪ-ಮಕ್ಕಳು ನನ್ನ ಜೊತೆ ಬಂದರೆ ಈಗಲೂ ತೋರಿಸುವೆ' ಎಂದು ಯಡಿಯೂರಪ್ಪ ಹಾಕಿರುವ ಸವಾಲನ್ನು ಸ್ವೀಕರಿಸಿದ ಕುಮಾರಸ್ವಾಮಿ ಅವರು 'ನಿಗದಿತ ದಿನ ಹಾಗೂ ಸ್ಥಳ ತಿಳಿಸಿದರೆ ಚರ್ಚೆಗೆ ಸಿದ್ಧ' ಎಂದಿದ್ದಾರೆ.
ಈ ಹಿಂದೆ ಹಲವು ಬಾರಿ ಸಾರ್ವಜನಿಕ ಚರ್ಚೆಗೆ ಕರೆದು ಯಡಿಯೂರಪ್ಪ ತಪ್ಪಿಸಿಕೊಂಡಿದ್ದಾರೆ. ಈ ಬಾರಿ ಅವರ ಆಹ್ವಾನ ಸ್ವೀಕರಿಸಿದರೆ ಶಿವಮೊಗ್ಗ ಜಿಲ್ಲೆಯಲ್ಲಿ ಅವರು ಅಕ್ರಮವಾಗಿ ಖರೀದಿಸಿರುವ 500 ಎಕರೆಗೂ ಹೆಚ್ಚು ಕೃಷಿ ಭೂಮಿಯನ್ನು ಅಥವಾ ಬೀಳಗಿ ಕ್ಷೇತ್ರದಲ್ಲಿ ಸಚಿವ ಮುರುಗೇಶ ನಿರಾಣಿ ಭೂ ಸ್ವಾಧೀನದ ಹೆಸರಲ್ಲಿ ರೈತರಿಗೆ ಮಾಡಿರುವ ಅನ್ಯಾಯವನ್ನು ತೋರಿಸಬಹುದು ಎಂದು ಕುಮಾರಸ್ವಾಮಿ ಹೇಳಿದರು.
ಯಡಿಯೂರಪ್ಪ ಪ್ರತಿಕ್ರಿಯೆ: ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ತಮ್ಮ ಕಾಶಿಯಾತ್ರೆಯನ್ನು ಕಾಗೆಗೆ ಹೋಲಿಸಿದ್ದರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಇನ್ನೊಬ್ಬರ ಬಗ್ಗೆ ಹಗುರವಾಗಿ ಮಾತನಾಡುವುದು ಅಪ್ಪ-ಮಕ್ಕಳ ಹುಟ್ಟುಗುಣ. ಕಾಗೆ ಯಾರು, ಕೋಗಿಲೆ ಯಾರು ಎಂಬುದನ್ನು ರಾಜ್ಯದ ಜನ ಚುನಾವಣೆ ಸಂದರ್ಭದಲ್ಲಿ ನಿರ್ಧರಿಸುತ್ತಾರೆ.ಅಪ್ಪ-ಮಕ್ಕಳು ಯಾವಾಗಲೂ ಬೇರೆಯವರ ಕಾಲೆಳೆಯುವುದರಲ್ಲಿ ನಿರತರಾಗಿರುತ್ತಾರೆ. ಅಭಿವೃದ್ಧಿ ವಿಷಯ ಮಾತನಾಡದೇ ಕೇವಲ ಹೀಯಾಳಿಸುವುದೇ ಅವರ ಕೆಲಸ ಎಂದು ಬಿ.ಎಸ್. ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ.












Click it and Unblock the Notifications