ಬೆಳ್ತಂಗಡಿ ಲಂಚ ಮುಕ್ತ ಮೊದಲ ತಾಲೂಕು ಕಚೇರಿ

ಇಲ್ಲಿನ ತಾಲೂಕು ಕಚೇರಿಯ ಕಂದಾಯ ವಿಭಾಗದಲ್ಲಿ ರಾಜ್ಯದ ಬೇರೆ ತಾಲೂಕು ಕಚೇರಿಗಳಲ್ಲಿ ಇರುವಂತೆ ವಿಪರೀತ ಲಂಚಾವಾತಾರವಿತ್ತು. ಆದರೆ 2 ತಿಂಗಳ ಹಿಂದೆ ತಹೀಲ್ದಾರ್ ಆಗಿ ಅಧಿಕಾರ ವಹಿಸಿಕೊಂಡ ಕೆಎಎಸ್ ಅಧಿಕಾರಿಣಿ ಕುಸುಮಾ ಕುಮಾರಿ ನೇತೃತ್ವದಲ್ಲಿ ಈ ತಾಲೂಕು ಕಚೇರಿ ಲಂಚಮುಕ್ತ ಕಚೇರಿಯಾಗಿ ಅರಳಿದೆ.
ಕಚೇರಿಯಲ್ಲಿನ ಭ್ರಷ್ಟಾಚಾರದಿಂದ ಜನ ರೋಸಿಹೋಗಿದ್ದರು. ಹಾಗಾಗಿ, ತಾಲೂಕಿನ ವಕೀಲರ ಸಂಘದ ಸದಸ್ಯರು ಹೊಸ ತಹಸೀಲ್ದಾರ್ ಕುಸುಮಾ ಅವರೊಂದಿಗೆ ಮೊನ್ನೆ ಚರ್ಚೆಗೆ ಕುಳಿತರು. ಸುಧೀರ್ಘ ಸಮಾಲೋಚನೆಯ ಬಳಿಕ ಕಚೇರಿ ಕೆಲಸ ಕಾರ್ಯದಲ್ಲಿ ಪಾರದರ್ಶಕತೆ ಕಾಣಿಸಿಕೊಳ್ಳಬೇಕು ಎಂಬ ಸರ್ವಾನುಮತನದ ನಿರ್ಧಾರಕ್ಕೆ ಬರಲಾಯಿತು. ಅದರಂತೆ ತಹಸೀಲ್ದಾರ್ ಕುಸುಮಾ ಅವರು ತಮ್ಮ ಕಚೇರಿಯನ್ನು No-Bribe Zone ಎಂದು ಶುಕ್ರವಾರ ಘೋಷಿಸಿದರು.
ಸಾರ್ವಜನಿಕರು ನಿರ್ದಿಷ್ಟ ಶುಲ್ಕವನ್ನಷ್ಟೇ ಪಾವತಿ ಮಾಡಿ, ತಮ್ಮ ಕೆಲಸ ಮಾಡಿಸಿಕೊಳ್ಳಬೇಕು. ಲಂಚ ರುಶುವತ್ತು ನೀಡಬಾರದು. ಒಂದು ವೇಳೆ ಯಾವುದೇ ಅಧಿಕಾರಿ ಲಂಚಕ್ಕೆ ಕೈಯೊಡ್ಡಿದರೆ ಅಥವಾ ಕೆಲಸ ವಿಳಂಬ ಮಾಡಿದರೆ ನೇರವಾಗಿ ತಮ್ಮನ್ನು ಭೇಟಿ ಮಾಡಬೇಕು ಎಂದು ತಹಸೀಲ್ದಾರ್ ಕುಸುಮಾ ಸಾರ್ವಜನಿಕ ಪ್ರಕಟಣೆ ನೀಡಿದ್ದಾರೆ.
ತಹಸೀಲ್ದಾರ್ ಕುಸುಮಾ ಅವರ ಪ್ರಾಮಾಣಿಕ ಪ್ರಯತ್ನಕ್ಕೆ ಎಲ್ಲ ದಿಕ್ಕಿನಿಂದಲೂ ಜಯ ಲಭಿಸಲಿ ಎಂಬುದು 'ಒನ್ ಇಂಡಿಯಾ ಕನ್ನಡ' ಶುಭ ಹಾರೈಕೆ. ಹಾಗೆಯೇ, ಲಂಚಾವತಾರದ ಮೂಲ ಆಗರಗಳಾದ ನಾಡಿನ ಇತರೆ ನಾಡ ಕಚೇರಿಗಳೂ ಇದೇ ಹಾದಿಯಲ್ಲಿ ಸಾಗಲಿ ಎಂದು ಆಶಿಸೋಣ.












Click it and Unblock the Notifications