ಅಪ್ಸರಕೊಂಡದಲ್ಲಿ ದುರಂತ, 2 ವಿದ್ಯಾರ್ಥಿಗಳ ಸಾವು

ಸಮುದ್ರಪಾಲಾದವರನ್ನು ಹೊನ್ನಾವರದ ಶ್ರೀಧರ್ಮಸ್ಥಳ ಮಂಜುನಾಥ ಕಾಲೇಜಿನ ವಿದ್ಯಾರ್ಥಿಗಳಾದ ರಘುವೀರ್ ನಾಯ್ಕ(17) ಹಾಗೂ ಸಂದೀಪ್ ಆಚಾರಿ(17) ಎಂದು ಗುರುತಿಸಲಾಗಿದೆ. ಈ ಪೈಕಿ ರಘುವೀರ್ ನಾಯ್ಕರ ಮೃತದೇಹ ಪತ್ತೆಯಾಗಿದೆ. ಸಂದೀಪ್ ಅವರ ಶವಕ್ಕಾಗಿ ಹುಡುಕಾಟ ನಡೆದಿದೆ.
ಇನ್ನೊಬ್ಬ ಸ್ನೇಹಿತ ಸುಬ್ರಹ್ಮಣ್ಯ ಶಂಕರ್ ನಾಯ್ಕ ಎಂಬಾತ ಕೂಡಾ ಸಮುದ್ರದ ಅಲೆಗಳಿಗೆ ಸಿಲುಕಿದ್ದು, ಆತನನ್ನು ಸ್ಥಳೀಯರು ರಕ್ಷಿಸಿದ್ದಾರೆ.
ಈ ಮೂವರು ವಿದ್ಯಾರ್ಥಿಗಳು ಸೋಮವಾರ ಸಂಜೆ ಹೊನ್ನಾವರ ತಾಲೂಕಿನ ಮಂಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಪ್ರವಾಸಿ ತಾಣ ಅಪ್ಸರಕೊಂಡದ ಸಮುದ್ರದಲ್ಲಿ ಸಂಜೆ 4 ಗಂಟೆ ಸುಮಾರಿಗೆ ಈಜಲು ತೆರಳಿದ್ದರು.
ಈಜುತ್ತಿದ್ದ ಮೂವರು ಕೂಡಾ ಸಮುದ್ರದ ಅಲೆಗಳ ಸೆಳೆತಕ್ಕೆ ಸಿಲುಕಿದ್ದು, ಈ ಪೈಕಿ ಓರ್ವನನ್ನು ಮಾತ್ರ ಸ್ಥಳೀಯರು ಪಾರು ಮಾಡಿದ್ದಾರೆ. ಈ ಬಗ್ಗೆ ಮಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications