ಕೇರಳದಲ್ಲಿ ಥೇಟ್ ರಾವಣನಾದ ಶ್ರೀಲಂಕಾ ಸಚಿವ

ಲಂಕಾದ ಆರ್ಮುಗಂ ಥೊಂಡಮನ್ ಎಂಬ ಸಚಿವ, ಖಾಸಗಿ ಪ್ರವಾಸದ ನಿಮಿತ್ತ ಕಳೆದ ವಾರ ಕೇರಳಕ್ಕೆ ಭೇಟಿ ನೀಡಿದ್ದ. ಇಲ್ಲಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ಪಂಚತಾರಾ ಹೋಟೆಲಿನಲ್ಲಿ ತಂಗಿದ್ದ ಮಹಾಶಯ ಶುಕ್ರವಾರ ರಾತ್ರಿ ಏನು ಮಾಡಿದನೆಂದರೆ ನಶೆಯೇರಿಸಿಕೊಂಡು, ಹೋಟೆಲಿನ ಮಹಿಳಾ ಉದ್ಯೋಗಿಯ ಜತೆ ಅಸಭ್ಯವಾಗಿ ವರ್ತಿಸಿದ್ದಾನೆ. ನನಗಾಗಿ ಹೋಟೆಲಿನ ಬಾರ್ ಅನ್ನು ಮಧ್ಯರಾತ್ರಿ ನಂತರವೂ ತೆರೆದಿರಬೇಕು ಎಂದು ರಂಪಾಟ ಮಾಡಿದ್ದಾನೆ.
'ಗುಂಡುಪಾರ್ಟಿ'ಯನ್ನು 'ನಿಯಂತ್ರಿಸಲು' ಹೋಟೆಲಿನ ಸಿಬ್ಬಂದಿ ಹೈರಾಣಗೊಂಡಿದ್ದಾರೆ. ಇನ್ನು ಇವನನ್ನು 'ನಿಯಂತ್ರಿಸಲು' ತಮ್ಮಿಂದಾಗದು ಎಂದು ಕೈಚೆಲ್ಲಿ, ಸಮೀಪದ ಪೊಲೀಸ್ ಠಾಣೆಗೆ SOS ಕರೆ ನೀಡಿದ್ದಾರೆ. ಪೊಲೀಸರು 'ಲಘು ಬಲಪ್ರಯೋಗ' ಮಾಡುತ್ತಿದ್ದಂತೆ ರಾವಣರೂಪಿ ಸಚಿವ ಮಹಾಶಯ ತಣ್ಣಗಾಗಿದ್ದಾನೆ. ರಾತ್ರಿ ಎಲ್ಲ ರಾಮಾಯಣ ಮಾಡಿದ್ದ 'ರಾವಣ'ನನ್ನು ಲಂಕಾ ಸರಕಾರ ಶನಿವಾರ ಬೆಳಗ್ಗೆಯೇ ವಾಪಸ್ ಕರೆಸಿಕೊಂಡು, ಪ್ರಕರಣಕ್ಕೆ ಇತಿಶ್ರೀ ಹಾಡಿದೆ.
ಆರ್ಮುಗಂ 'ರಂ'ಪಾಟ ಇದೇ ಮೊದಲಲ್ಲ: ಲಂಕಾ ಸಚಿವ ಆರ್ಮುಗಂ ಥೊಂಡಮನ್ ಕರಾಳ ರಾತ್ರಿ ಕಥೆ ಇದೇ ಮೊದಲಲ್ಲ. ಮೊನ್ನೆ ಹೊಸ ವರ್ಷಾಚರಣೆಗೆಂದು ಯುರೋಪಿಗೆ ತೆರಳಿದ್ದ. ಅಲ್ಲಿ ಕ್ಲಬ್ ಒಂದರಲ್ಲಿ ಹೀಗೇ ಸಿಕ್ಕಾಪಟ್ಟೆ 'ರಂ'ಪಾಟ ಮಾಡಿದ್ದ. ಆಗ ಆತ ಎಷ್ಟು ಚಿತ್ ಆಗಿದ್ದನೆಂದರೆ ತೂರಾಡುತ್ತಾ ಅಂಗಾತ ಬಿದ್ದ ಆರ್ಮುಗಂ, ಕೈಕಾಳು ಮುರಿದುಕೊಂಡು ಆಸ್ಪತ್ರೆ ಪಾಲಾಗಿದ್ದ.












Click it and Unblock the Notifications