ಸವದಿ ಪಾಟೀಲರನ್ನು ಟ್ವಿಟ್ಟರಲ್ಲಿ ಕೆಣಕಿದ ಪೂನಂ ಪಾಂಡೆ
ಮುಂಬೈ, ಫೆ. 8 : ಅಂದುಕೊಂಡಾಗಲೆಲ್ಲ ಮೈಮೇಲಿನ ಬಟ್ಟೆ ಕಳಚಿ ಟ್ವಿಟ್ಟರಲ್ಲಿ ಫೋಟೋ ಹಾಕಿಕೊಳ್ಳುವ ಮತ್ತು ಸಾಮಾಜಿಕ ತಾಣಗಳಲ್ಲಿ ಸೆಲೆಬ್ರಿಟಿಗಳನ್ನು ಕೆಣಕಿ ಕಾಲೆಳೆಯುವ ಅವಕಾಶವನ್ನು ಹಾಲಿ ಮಾಡೆಲ್ ಕಂ ಭಾವಿ ನಟಿ ಪೂನಂ ಪಾಂಡೆ ಯಾವತ್ತೂ ಕಳೆದುಕೊಳ್ಳುವುದಿಲ್ಲ. ರಾಜಕಾರಣಿಗಳನ್ನು, ನಟರನ್ನು ಕೆಣಕುವ ಪೂನಂಳ ಟ್ವೀಟ್‌ಗಳಲ್ಲಿ ಕೀಟಲೆ ಮತ್ತು ತಮಾಷೆ ತುಂಬಿ ತುಳುಕುತ್ತಿರುತ್ತದೆ.
ಭಾರತದ ಕ್ರಿಕೆಟ್ ತಂಡ ವಿಶ್ವಕಪ್ ಗೆದ್ದರೆ ಪೂರ್ತಿ ಬೆತ್ತಲಾಗುವುದಾಗಿ ಡಂಗುರ ಸಾರಿದ್ದ ಪೂನಂಳ ಟ್ವೀಟಿಗೆ ಈ ಬಾರಿ ಗುರಿಯಾದವರು ಮತ್ತಾರೂ ಅಲ್ಲ, ವಿಧಾನಸಭೆ ಕಲಾಪ ನಡೆಯುತ್ತಿರುವಾಗಲೇ ಅಶ್ಲೀಲ ಎಂಎಂಎಸ್ ನೋಡಿ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿರುವ ಕರ್ನಾಟಕದ ಮಿನಿಸ್ಟರುಗಳಾದ ಲಕ್ಷ್ಮಣ ಸವದಿ, ಸಿಸಿ ಪಾಟೀಲ್ ಮತ್ತು ಎಂಎಂಎಸ್ಸನ್ನು ಹಂಚಿದ ಕೃಷ್ಣ ಪಾಲೇಮಾರ್.
"ಕರ್ನಾಟಕ ವಿಧಾನಸಭೆಯಲ್ಲಿ ಅಶ್ಲೀಲ ದೃಶ್ಯ ವೀಕ್ಷಿಸಿದ ಮಂತ್ರಿಗಳಿಬ್ಬರು ಗಲಿಬಿಲಿಗೊಳಗಾಗಿದ್ದಾರೆ. ಎಲೆಕ್ಷನ್ನಿಗೆ ರೆಡಿಯಾಗಿ ಎಂದು ಹೇಳಿದ್ದನ್ನು ಅಪಾರ್ಥ ಮಾಡಿಕೊಂಡು ಮತ್ತೇನೋ ಕಲ್ಪಿಸಿಕೊಂಡಿದ್ದಾರೆ. ಅಸಲಿಗೆ ಅವರಿಬ್ಬರೂ ವ್ಯಾಲಂಟೈನ್ಸ್ ವೀಕ್‌ನ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಹೆಹೆಹೆ..." ಎಂದು ಹಿಂದೊಮ್ಮೆ ಬಿಕಿನಿಯಲ್ಲೇ ಶಾಪಿಂಗ್ ಮಾಡುವೆ ಎಂದಿದ್ದ ಪೂನಂ ಪಾಂಡೆ ಅಪಹಾಸ್ಯ ಮಾಡಿದ್ದಾರೆ.
ಪೂನಂ ಪಾಂಡೆ ಮಾತ್ರವಲ್ಲ, 3 ಈಡಿಯಟ್ಸ್ ಖ್ಯಾತಿಯ ಲೇಖಕ, ಅಂಕಣಕಾರ ಚೇತನ್ ಭಗತ್ ಮತ್ತು ಹಿಂದಿ ಚಿತ್ರ ನಿರ್ದೇಶಕ, ನಿರ್ಮಾಪಕ ರಾಮ್ ಗೋಪಾಲ್ ವರ್ಮಾ ಕೂಡ, ಕರ್ನಾಟಕದ ಮಾನವನ್ನು ಹರಾಜಿಗೆ ಹಾಕಿರುವ ಮಂತ್ರಿಗಳ ವಿರುದ್ಧ ಮಾತಿನ ಚಾಟಿ ಬೀಸಿದ್ದಾರೆ. ಸಚಿವರು ಅಶ್ಲೀಲ ಚಿತ್ರ ಅಸೆಂಬ್ಲಿಯಲ್ಲೇ ನೋಡುತ್ತಿರುವುದು ಭಾರತ ಪ್ರಕಾಶಿಸುತ್ತಿರುವುದರ ಸಂಕೇತ ಎಂದು ವರ್ಮಾ ವ್ಯಂಗ್ಯವಾಡಿದ್ದಾರೆ.












Click it and Unblock the Notifications