ವರ್ಗಾವರ್ಗಿ: ಯಡ್ಡಿಯನ್ನು ಮೀರಿಸಿದ ಸದಾನಂದ ಗೌಡ

ಯಡಿಯೂರಪ್ಪ ಅವರ ಕಾಲದಲ್ಲಿ 20-30ಕ್ಕೆ ನಿಂತಿದ್ದ ವರ್ಗಾವಣೆ ಸಂಖ್ಯೆ ಈಗ 50ರ ಸಂಖ್ಯೆ ಮೀರಿದೆ. ಅದರಲ್ಲೂ ಶಿವಮೊಗ್ಗದಲ್ಲಿ ಜನಪ್ರಿಯತೆ ಗಳಿಸಿರುವ ಜಿಲ್ಲಾಧಿಕಾರಿ ವಿ ಪೊನ್ನುರಾಜ್ ಅವರನ್ನು ವರ್ಗಾವಣೆ ಮಾಡುವ ಮೂಲಕ ಯಡಿಯೂರಪ್ಪ ಅವರಿಗೆ ನೇರ ಹೊಡೆತ ನೀಡಿದ್ದಾರೆ.
ರೇಣುಕಾಚಾರ್ಯ ಸೇರಿದಂತೆ ಯಡಿಯೂರಪ್ಪ ಬೆಂಬಲಿಗರ ಕುಕೃತ್ಯಗಳಿಗೆ ಆಧಾರವಾಗಿದ್ದ ಕೆಲ ಅಧಿಕಾರಿಗಳನ್ನು ಎಲ್ಲಂದರಲ್ಲಿ ವರ್ಗ ಮಾಡಲಾಗಿದೆ. ಸದಾನಂದರ ವರ್ಗಾವಣೆ ಪರ್ವದಿಂದ ಅನೇಕ ಸಮರ್ಥ ಅಧಿಕಾರಿಗಳನ್ನು ಜನರು ಕಳೆದುಕೊಳ್ಳುತ್ತಿದ್ದಾರೆ ಎಂಬ ಕೂಗು ಎದ್ದಿದೆ.
ಆದರೆ, ದಿಢೀರ್ ವರ್ಗಾವಣೆಯನ್ನು ಸಮರ್ಥಿಸಿಕೊಂಡಿರುವ ಸದಾನಂದ ಗೌಡರು, ಆಡಳಿತ ಯಂತ್ರ ಚುರುಕುಗೊಳಿಸುವುದು, ಅಧಿಕಾರಿಗಳಿಗೆ ಬಡ್ತಿ ನೀಡುವುದು ಸಾಮಾನ್ಯ ವಿಷಯವಾಗಿದೆ. ಅಧಿಕಾರಿಗಳ ಸೇವೆ ರಾಜ್ಯದ ಎಲ್ಲಾ ಭಾಗದ ಜನಕ್ಕೂ ಸಿಗುವಂತಾಗಲಿ ಎಂಬುದು ನಮ್ಮ ಆಶಯ ಎಂದು ಸದಾನಂದ ಗೌಡರು ಹೇಳಿದ್ದಾರೆ.
ಒಟ್ಟಾರೆ 26 ಐಎಎಸ್ ಅಧಿಕಾರಿಗಳು, 24 ಐಪಿಎಸ್, 3 ಕೆಎಎಸ್ ಹಾಗೂ 2 ಐಎಫ್ಎಸ್ ಅಧಿಕಾರಿಗಳು ವರ್ಗಾವಣೆ ದಾಳಿಗೆ ತುತ್ತಾಗಿದ್ದಾರೆ. ಬೆಳಗಾವಿ ಎಸ್ಪಿ ಸಂದೀಪ್ ಪಾಟೀಲ್ ಹಾಗೂ ಶಿವಮೊಗ್ಗ ಡಿಸಿ ಪೊನ್ನುರಾಜ್ ವರ್ಗಾವಣೆಯಲ್ಲಿ ಯಾವುದೇ ರಾಜಕೀಯವಾಗಲಿ, ಒತ್ತಡವಾಗಲಿ ಇಲ್ಲ ಎಂದು ಸದಾನಂದ ಗೌಡರು ತಿಳಿಸಿದ್ದಾರೆ.












Click it and Unblock the Notifications