ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡಿಯೂರಪ್ಪ ಮನೆಗೆ 30 ಮಠಾಧಿಪತಿಗಳು ಬಂದಿದ್ದೇಕೆ?

By Prasad
|
Google Oneindia Kannada News

30 swamijis rush to Yeddyurappa residence
ಬೆಂಗಳೂರು, ಜ. 19 : ಬಿಜೆಪಿ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ಪ್ರಕಾರ ಅನಧಿಕೃತವಾಗಿ ರಾಜ್ಯ ಪ್ರವಾಸ ಕೈಗೊಂಡಿರುವ ಯಡಿಯೂರಪ್ಪ ಅವರ ಬೆಂಗಳೂರಿನ ನಿವಾಸಕ್ಕೆ ಗುರುವಾರ ಸಂಜೆ ಸುಮಾರು 30 ಕಾವಿಧಾರಿ ಸ್ವಾಮೀಜಿಗಳು ಬರುತ್ತಿರುವುದು ಭಾರೀ ಕುತೂಹಲ ಕೆರಳಿಸಿದೆ.

ಇಷ್ಟೊಂದು ಸಂಖ್ಯೆಯಲ್ಲಿ ಮಠಾಧಿಪತಿಗಳು ಯಾಕೆ ಬರುತ್ತಿದ್ದಾರೆ ಎಂಬುದು ಈ ಕುತೂಹಲಕ್ಕೆ ಕಾರಣವಾಗಿತ್ತು. ಅವರಾಗೇ ಇಲ್ಲಿ ಬಂದಿದ್ದಾರೋ, ಮಠಾಧಿಪತಿಗಳ ಮೇಲೆ ಅಪಾರ ಒಲವಿರುವ ಯಡಿಯೂರಪ್ಪನವರೇ ಅವರನ್ನು ಕರೆಸಿಕೊಂಡಿದ್ದಾರೋ ಎಂಬುದು ಇನ್ನೂ ನಿಗೂಢತೆ ಮೂಡಿಸಿತ್ತು.

ಗದಗದ ಲಕ್ಷ್ಮೇಶ್ವರದ ಮಠದಿಂದ ಬಂದಿದ್ದ ಸ್ವಾಮೀಜಿಗಳು ಮಠದಲ್ಲಿ ನಡೆಸಲಾಗುವ ಕಾರ್ಯಕ್ರಮಕ್ಕೆ ಯಡಿಯೂರಪ್ಪನವರನ್ನು ಆಹ್ವಾನಿಸಲು ಬಂದಿರುವುದಾಗಿ ತಿಳಿಸಿದರು. ಒಬ್ಬರು ಬಂದಿದ್ದರೆ ಸಾಕಾಗುತ್ತಿರಲಿಲ್ಲವೆ? ಹಿಂಡುಗಟ್ಟಲೆ ಸ್ವಾಮೀಜಿಗಳು ಸಾಲುಸಾಲು ಕಾರಿನಲ್ಲಿ ಏಕೆ ಬರಬೇಕಿತ್ತು ಎಂಬುದು ಕಾಡುತ್ತಿರುವ ಪ್ರಶ್ನೆ.

ಬಲ್ಲ ಮೂಲಗಳ ಪ್ರಕಾರ, ಹಗಲು ರಾತ್ರಿ ಮತ್ತೆ ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿರುವ ಯಡಿಯೂರಪ್ಪ ಮಠದ ಸ್ವಾಮೀಜಿಗಳ ಮುಖಾಂತರ ರಾಜ್ಯದ ನಾಯಕರು ಮತ್ತು ಬಿಜೆಪಿ ಹೈಕಮಾಂಡ್ ಮೇಲೆ, ತಮ್ಮನ್ನು ಮತ್ತೆ ಮುಖ್ಯಮಂತ್ರಿ ಪದವಿಗೇರಿಸಲು ಯತ್ನಿಸುತ್ತಿದ್ದಾರೆ. ಯಡಿಯೂರಪ್ಪನವರು ತಮ್ಮ ಅಧಿಕಾರಾವಧಿಯಲ್ಲಿ ಯಾವ ಮುಖ್ಯಮಂತ್ರಿಯೂ ಮಾಡದಷ್ಟು ಹಣದ ಸಹಾಯವನ್ನು ಕರ್ನಾಟಕದ ಮಠಗಳಿಗೆ ಮಾಡಿರುವುದು ಎಲ್ಲರಿಗೂ ತಿಳಿದ ಸಂಗತಿ.

ಅಲ್ಲದೆ, ಅವರು ರಾಜೀನಾಮೆ ನೀಡಿದ ಸಂದರ್ಭದಲ್ಲಿ ಇನ್ನು ಸಿಕ್ಸ್ ಮಂತ್ಸಲ್ಲಿ ಮತ್ತೆ ಬರ್ತೀನ್ರಿ ಎಂದು ಯಡಿಯೂರಪ್ಪ ತೊಡೆತಟ್ಟಿ ಹೇಳಿದ್ದರು. ಸದಾನಂದ ಗೌಡ ಅಧಿಕಾರ ಸ್ವೀಕರಿಸಿ ಫೆಬ್ರವರಿ 3ಕ್ಕೆ ಆರು ತಿಂಗಳು ಕಳೆಯಲಿವೆ. ಸದ್ಯಕ್ಕೆ ರಾಜ್ಯ ಪ್ರವಾಸ ಕೈಗೊಂಡಿರುವ ಯಡಿಯೂರಪ್ಪ ಹೋದಲ್ಲೆಲ್ಲ ಯಾಕ್ರೀ ಮತ್ತೆ ಮುಖ್ಯಮಂತ್ರಿಯಾಗಬಾರದು ಎಂದು ಘಂಟಾಘೋಷಿಸುತ್ತಿದ್ದಾರೆ.

ನಾನೇನು ಸನ್ಯಾಸಿಯಲ್ಲ : ಮುಖ್ಯಮಂತ್ರಿ ಪಟ್ಟ ಕೊಟ್ಟರೆ ಬೇಡ ಅನ್ನುವುದಕ್ಕೆ ನಾನೇನು ಸನ್ಯಾಸಿಯಲ್ಲ. ಹೈಕಮಾಂಡ್ ಇಷ್ಟಪಟ್ಟರೆ ಈ ಕ್ಷಣದಲ್ಲೇ ಮುಖ್ಯಮಂತ್ರಿ ಪದವಿಗೇರಲು ಸಿದ್ಧ ಎಂದು, ಮುಖ್ಯಮಂತ್ರಿಯ ಪದವಿಯ ಮೇಲೆ ಸದಾ ಕಣ್ಣಿಟ್ಟಿರುವ ಯಡಿಯೂರಪ್ಪ ತುಮಕೂರಿನಲ್ಲಿ ಹೇಳಿದ್ದಾರೆ.

ಮೂರು ವರ್ಷಗಳ ಕಾಲ ಸರ್ಕಸ್ ಕಂಪನಿಯಂತೆ ಬಿಜೆಪಿ ಸರಕಾರ ನಡೆದುಕೊಂಡು ಬಂದಿದೆ. ಇತ್ತ ಬಂದರೆ ಕಾಂಗ್ರೆಸ್, ಅತ್ತ ಹೋದರೆ ಜೆಡಿಎಸ್, ನಡುವಿನಲ್ಲಿ ನಮ್ಮವರೇ ಕಾಲು ಎಳೆಯಲು ಸಿದ್ಧರಿರುತ್ತಾರೆ ಎಂದು ಯಡಿಯೂರಪ್ಪ ವ್ಯಂಗ್ಯವಾಡಿ ತಮ್ಮ ಹಾಸ್ಯ ಪ್ರವೃತ್ತಿಯನ್ನು ಮೆರೆದರು. ಇದೇ ಸಂದರ್ಭದಲ್ಲಿ ಕೊಟ್ಟ ಕುದುರೆಯನ್ನು ಏರಲಾಗದವನು ಶೂರನೂ ಅಲ್ಲ, ಧೀರನೂ ಅಲ್ಲ ಎಂದು ಹೇಳಿರುವುದು ಯಾರ ಬಗ್ಗೆ?

English summary
Around 25-30 seers of various mutts are visiting former chief minister of Karnataka BS Yeddyurappa residence at race course road in Bangalore on Jan 19 evening. The reason is not yet known.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X