ಪೊಲೀಸ್ ದೌರ್ಜನ್ಯ ಖಂಡಿಸಿ ಬೀದಿಗಿಳಿದ ವಕೀಲರು

ಸತತ 5 ಗಂಟೆ ಟ್ರಾಫಿಕ್ ಜಾಮ್ ನಿಂದ ಬೇಸತ್ತ ಜನರು ವಕೀಲರ ವಿರುದ್ಧ ವಾಗ್ದಾಳಿಗೆ ಇಳಿದಿದ್ದಾರೆ. ತ್ಯಾಗರಾಜನಗರ, ಕಬ್ಬನ್ ಪಾರ್ಕ್ ಹಾಗೂ ಅನೇಕ ಕಡೆ ವಿಚಾರಣೆ ನೆಪದಲ್ಲಿ ಪೊಲೀಸ್ ಪೇದೆಗಳು ವಕೀಲರಿಗೆ ಕಿರುಕುಳ ನೀಡಿದ್ದಾರೆ.
ಹಲ್ಲೆಗೊಳಗಾದ ವಕೀಲ ಬಾಲಕೃಷ್ಣ ಎಂಬುವರ ಭಾವಚಿತ್ರ ಪ್ರದರ್ಶಿಸಿ ಧರಣಿ ಕೂತ ವಕೀಲರ ಬೆಂಬಲಕ್ಕೆ ವಕೀಲರ ಸಂಘದ ಅಧ್ಯಕ್ಷ ಕೆಎನ್ ಸುಬ್ಬಾರೆಡ್ಡಿ ಕೂಡಾ ಬೆಂಬಲ ವ್ಯಕ್ತಪಡಿಸಿದರು.
ಘಟನಾ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಆಯುಕ್ತ ಸುನೀಲ್ ಕುಮಾರ್, ಬೆಂಗಳೂರು ದಕ್ಷಿಣ ಡಿಸಿಪಿ ಸೋನಿಯಾ ನಾರಂಗ್ , ನಗರ ಪೊಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ ಆಗಮಿಸಿ ವಕೀಲರೊಂದಿಗೆ ಮಾತುಕತೆ ನಡೆಸಿ ಮನವೊಲಿಕೆಗೆ ಯತ್ನಿಸಿದ್ದಾರೆ. ಹೈದರಾಬಾದಿನಲ್ಲಿದ್ದ ಶಂಕರ್ ಬಿದರಿ ಅವರು ಬೆಂಗಳೂರಿಗೆ ಧಾವಿಸಿ ಬರುತ್ತಿದ್ದಾರೆ.
144 ಸೆಕ್ಷನ್ ಜಾರಿ: ಸಂಧಾನ ಮಾತುಕತೆ ವಿಫಲವಾಗಿ ಪರಿಸ್ಥಿತಿ ಹತೋಟಿಗೆ ತರಲು ಪೊಲೀಸರು ಯತ್ನಿಸುವ ಸಂದರ್ಭದಲ್ಲಿ ಸಾರ್ವಜನಿಕರ ಆಕ್ರೋಶ ಹೆಚ್ಚಾಗಿದೆ. ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ನಲ್ಲಿ ನಿಂತು ಬೇಸತ್ತ ಜನರು, ವಕೀಲರತ್ತ ಧಾವಿಸಿ ವಾಗ್ದಾಳಿ ನಡೆಸಿದರು.
ಪ್ರತಿಭಟನೆ ನಡೆಸಲು ಫ್ರೀಡಂ ಪಾರ್ಕ್ ಇದೆ. ಅಥವಾ ಪೊಲೀಸ್ ಮಹಾ ಕಚೇರಿ ಮುಂದೆ ಮಾಡಬಹುದು ಅದು ಬಿಟ್ಟು ಕಾನೂನು ಪಾಠ ಹೇಳುವ ನೀವುಗಳು ಟ್ರಾಫಿಕ್ ಜಾಮ್ ಮಾಡಿ ಎಲ್ಲರಿಗೂ ತೊಂದರೆ ಕೊಡುವುದು ಎಷ್ಟು ಸರಿ ಎಂದು ಸಾರ್ವಜನಿಕರು ಪ್ರಶ್ನಿಸಿದರು.
ಇದರಿಂದ ಕೋಪಗೊಂಡ ಕೆಲ ವಕೀಲರು ಸಾರ್ವಜನಿಕರ ಮೇಲೆ ಮುಗಿಬಿದ್ದರು. ಪರಿಸ್ಥಿತಿ ಕೈ ಮೀರಿದಾಗ ವಿಧಿ ಇಲ್ಲದೆ ಪೊಲೀಸರು ಲಾಠಿ ಚಾರ್ಜ್ ಮಾಡಿ ಗುಂಪನ್ನು ಚೆದುರಿಸಿದ್ದಾರೆ. ಈಗ ಈ ಪ್ರದೇಶದಲ್ಲಿ ಐಪಿಸಿ ಸೆಕ್ಷನ್ 144 ಜಾರಿ ಮಾಡಲಾಗಿದೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.












Click it and Unblock the Notifications