ಕೊಡಗಿಗೆ ಸಚಿವ ಸ್ಥಾನ, ಸದಾನಂದಗೌಡ ಘೋಷಣೆ

ರಾಜ್ಯ ರಾಜಕಾರಣದಲ್ಲಿ ಈಗ ಇರುವ ಗೊಂದಲಗಳು ತಾತ್ಕಾಲಿಕ. ಸಮುದ್ರದಲ್ಲಿ ಉಬ್ಬರಗಳಿದ್ದಂತೆ ಏರಿಳಿತ ಇರುತ್ತದೆ. ಆದರೆ, ನಮ್ಮ ಹಡಗು ಸರಾಗವಾಗಿ ದಡ ಸೇರುತ್ತದೆ. ಸದ್ಯದಲ್ಲೇ ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು. ಸಂವಿಧಾನಬದ್ಧವಾಗಿ ಮಿತಿಯೊಳಗೆಯೇ ಸಂಪುಟ ವಿಸ್ತರಣೆ ಮಾಡುತ್ತೇವೆ. ಎಲ್ಲ ಶಾಸಕರೂ ಸಚಿವ ಸ್ಥಾನಕ್ಕೆ ಅರ್ಹರಿದ್ದಾರೆ ಎಂಬುದು ನಿಜ ಎಂದು ಸದಾನಂದಗೌಡರು ಹೇಳಿದರು.
ಕೊಡಗಿಗೆ ಸಚಿವ ಸ್ಥಾನ: ಕೊಡಗಿಗೆ ಸಚಿವ ಸ್ಥಾನ ಬೇಕು ಅಂತ ಹಿಂದಿನಿಂದಲೂ ಬೇಡಿಕೆ ಇದೆ. ನಾನೇ ಮುಖ್ಯಮಂತ್ರಿಯಾಗಿ ಕೊಡಗಿನ ಅಳಿಯನಾಗಿ ಹೇಳುತ್ತೇನೆ, ಅಪ್ಪಚ್ಚು ರಂಜನ್‌ಗೆ ಸಚಿವ ಸ್ಥಾನ ಖಚಿತ ಎಂದರು.
ಕೊಡಗಿನ ಪ್ರಕೃತಿ ಸೌಂದರ್ಯವನ್ನು ಉಳಿಸಿಕೊಳ್ಳಲು ರೆಸಾರ್ಟ್ ಸಂಸ್ಕೃತಿಗೆ ಕಡಿವಾಣ ಹಾಕಲು ಆದೇಶ ನೀಡುತ್ತೇನೆ. ಕೊಡಗಿಗೆ ಮೆಡಿಕಲ್ ಕಾಲೇಜು ಮಂಜೂರು ಮಾಡಲು ಮುಂದಿನ ಬಜೆಟ್‌ನಲ್ಲಿ ಅನುದಾನ ಮೀಸಲಾಡಲಾಗುವುದು ಎಂದರು.
ಸದಾನಂದ ಗೌಡರು ಸ್ವಾತಂತ್ರ ಸೇನಾನಿ ಗುಡ್ಡೆಮನೆ ಅಪ್ಪಯ್ಯ ಗೌಡರ ಕಂಚಿನ ಪ್ರತಿಮೆಯನ್ನು ಅನಾವರಣ ಮಾಡಿದರು. ನಂತರ ಸದಾನಂದ ಗೌಡರ ಪತ್ನಿ ಡಾಟಿಯವರ ತವರೂರಾದ ಕುಶಾಲನಗರ ಸಮೀಪದ ಗುಡ್ಡೆ ಹೊಸೂರಿನಲ್ಲಿ ಗೌಡ ಬಾಂಧವರು ಮತ್ತು ಕುಟುಂಬಸ್ಥರು ನೀಡಿದ ಆತ್ಮೀಯ ಸನ್ಮಾನ ಪಡೆದರು.












Click it and Unblock the Notifications