ಮೇಲ್ಮನೆಯಲ್ಲಿ ಸೋಮಣ್ಣನಿಗೆ ವಿಪಕ್ಷಗಳ ಬಹಿಷ್ಕಾರ

ಸಚಿವ ವಿಎಸ್ ಆಚಾರ್ಯ ಅವರ ಅನುಪಸ್ಥಿತಿಯಲ್ಲಿ ವಸತಿ ಸಚಿವ ಸೋಮಣ್ಣ ಅವರು ಚುನಾವಣಾ ಪ್ರಸ್ತಾವನೆಗಳನ್ನು ಸದನದಲ್ಲಿ ಮಂಡಿಸಲು ಮುಂದಾದಾಗ, ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು
ಕಳಂಕ ಹೊತ್ತವರನ್ನು ನಾವು ಸಚಿವರು ಎಂದು ಪರಿಗಣಿಸಿಲ್ಲ. ಹಾಗಿರುವಾಗ ಸೋಮಣ್ಣರಿಗೆ ಪ್ರಸ್ತಾವನೆ ಮಂಡಿಸಲು ನಾವು ಅವಕಾಶ ನೀಡುವುದಿಲ್ಲ. ಅಲ್ಲದೆ ಸಭಾನಾಯಕರ ಜವಾಬ್ದಾರಿಯನ್ನು ಒಬ್ಬ ಕಳಂಕಿತ ಸಚಿವರು ನಿರ್ವಹಿಸುವುದು ಸೂಕ್ತವಲ್ಲ ಎಂದು ಜೆಡಿಎಸ್‌ನ ಇ.ಕೃಷ್ಣಪ್ಪ ಹೇಳಿದರು. ಇದಕ್ಕೆ ಸಾಥ್ ನೀಡಿದ ನಾಣಯ್ಯ ವೈಯಕ್ತಿಕವಾಗಿ ಸೋಮಣ್ಣರ ಬಗ್ಗೆ ನನಗೇನು ದ್ವೇಷ ಇಲ್ಲ. ಅವರು ನನ್ನ ಒಳ್ಳೆಯ ಸ್ನೇಹಿತ.
ಆದರೆ, ಸಚಿವರು ಎಂಬ ಹಿನ್ನೆಲೆಯಲ್ಲಿ ಅವರ ಬಗ್ಗೆ ನಾವು ಮಾತನಾಡುತ್ತಿದ್ದೇವೆ ಎಂದರು. ಈ ಹಂತದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ವಾಗ್ವಾದ ಶುರುವಾಯಿತು.
ಈ ಸಂದರ್ಭದಲ್ಲಿ ಮಧ್ಯ ಪ್ರವೇಶ ಮಾಡಿದ ಸಭಾಪತಿ ಡಿ.ಎಚ್. ಶಂಕರಮೂರ್ತಿ, ಸಭಾನಾಯಕರ ಅನುಪಸ್ಥಿತಿಯಲ್ಲಿ ಈ ಜವಾಬ್ದಾರಿ ನಿರ್ವಹಿಸಲು ಸಚಿವ ಸೋಮಣ್ಣ ಅವರಿಗೆ ಅವಕಾಶ ನೀಡುವಂತೆ ಆಡಳಿತ ಪಕ್ಷದ ಮುಖ್ಯಸಚೇತಕರು ಕೇಳಿಕೊಂಡಾಗ ಅನುಮತಿ ನೀಡಿದೆ.
ಅದು ನನ್ನ ವೈಯಕ್ತಿಕ ತೀರ್ಮಾನ. ಈಗ ಈ ಕೆಲಸ ನಿರ್ವಹಿಸಲು ಬಿಡಿ. ಆ ಮೇಲೆ ನಿಮ್ಮ ನಿಲುವಿನ ಬಗ್ಗೆ ಮುಂದೆ ನೋಡೋಣ ಎಂದು ಹೇಳಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಇದೇ ರೀತಿ ಕೈಗಾರಿಕಾ ಸಚಿವ ಮುರಗೇಶ ನಿರಾಣಿ ಅವರಿಗೆ ಕೇಳಬೇಕಾದ ಪ್ರಶ್ನೆಯನ್ನು ಕಾಂಗ್ರೆಸ್ ಸದಸ್ಯ ಖಾಜಿ ಅರ್ಶದ್ ಅಲಿ ಬಹಿಷ್ಕರಿಸಿದರು.












Click it and Unblock the Notifications