ಶ್ರೀರಾಮುಲು ಈಸ್ ಕಿಂಗ್, ಎಚ್ಡಿಕೆ ಎ ಕಿಂಗ್ ಮೇಕರ್

ಅಪರೇಷನ್ ಕಮಲದ ಭೀತಿಯಿಂದ ಹೊರಬಂದಿರುವ ಜೆಡಿಎಸ್ ಪಕ್ಷ ಈಗ ಮುಂದಿನ ವಿಧಾನಸಭೆ ಚುನಾವಣೆಗೆ ಈಗಿಂದಲೇ ಸಿದ್ಧತೆ ನಡೆಸುತ್ತಿದೆ.
ಶ್ರೀರಾಮುಲು ಸ್ಥಾಪಿಸಲಿರುವ ಪಕ್ಷದ ಜತೆ ಹೊಂದಾಣಿಕೆಯೊಂದಿಗೆ ಜೆಡಿಎಸ್ ನಾಯಕರು ಒಪ್ಪಿಗೆ ನೀಡಿದ್ದು, ಪಕ್ಷದ ರಾಷ್ಟ್ರಾಧ್ಯಕ್ಷ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಸಮ್ಮತಿ ಮಾತ್ರ ಬಾಕಿ ಉಳಿದಿದೆ.
ಕುಮಾರ್ ಸ್ಪರ್ಧೆ ಖಚಿತ: ರಾಜ್ಯದ 224 ಕ್ಷೇತ್ರಗಳಲ್ಲೂ ಜೆಡಿಎಸ್ ಸ್ಪರ್ಧಿಸಲಿದೆ. ನಾನು ರಾಮನಗರ ಕ್ಷೇತ್ರದಲ್ಲಿ ಗೆದ್ದು ಮತ್ತೆ ಮುಖ್ಯಮಂತ್ರಿ ಆಗುತ್ತೇನೆ ಎಂಬ ಆಶಯವನ್ನು ಎಚ್ ಡಿ ಕುಮಾರಸ್ವಾಮಿ ವ್ಯಕ್ತಪಡಿಸಿದ್ದಾರೆ.
75 ವಿಧಾನಸಭೆ ಕ್ಷೇತ್ರಗಳಲ್ಲಿ ಹಿಂದುಳಿದ ಜನಾಂಗದವರ ಮತಗಳು ಗಣನೀಯ ಪ್ರಮಾಣದಲ್ಲಿರುವುದರಿಂದ ಶ್ರೀರಾಮುಲು ಜೊತೆ ಮೈತ್ರಿ ಮಾಡಿಕೊಂಡು ಜಾತಿ ಲಾಭ ಪಡೆಯಲು ಜೆಡಿಎಸ್ ಯೋಜಿಸಿದೆ.
ಜಾತಿ ಲೆಕ್ಕಾಚಾರ: ಒಕ್ಕಲಿಗ ಸಮುದಾಯ ಪಕ್ಷದ ಜೊತೆಗಿದೆ. ಕುರುಬ,ಲಿಂಗಾಯಿತ, ಮುಸ್ಲಿಂ ಸಮುದಾಯದ ಅಭ್ಯರ್ಥಿಗಳಿಗೂ ಟಿಕೆಟ್ ನೀಡುವುದರ ಮೂಲಕ ಕನಿಷ್ಠ 75 ಸ್ಥಾನ ಗೆಲ್ಲುವುದು ಜೆಡಿಎಸ್ ಮುಂದಿರುವ ಗುರಿ.
ಬೆಂಗಳೂರು ಗ್ರಾಮಾಂತರ, ಮಂಡ್ಯ,ಮೈಸೂರು, ಚಾಮರಾಜನಗರ, ಹಾಸನ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ ಜಿಲ್ಲೆಗಳಲ್ಲಿ ಜೆಡಿಎಸ್ ಪ್ರಭಾವ ನಿಚ್ಚಳವಾಗಿದೆ.
ಆದರೆ, ಉತ್ತರ ಕರ್ನಾಟಕ, ಮುಂಬೈ ಕರ್ನಾಟಕ, ಕರಾವಳಿ ಭಾಗದ ಬಗ್ಗೆ ಹೆಚ್ಚು ಗಮನ ನೀಡಬೇಕಿದೆ. ಕಾಂಗ್ರೆಸ್ ಕಡೆ ವಾಲಿದ್ದ ಮುಸ್ಲಿಂ ಸಮುದಾಯದ ಮತಗಳನ್ನು ಸೆಳೆದುಕೊಳ್ಳುವುದು ಜೆಡಿಎಸ್ ನ ಮೊದಲ ಆದ್ಯತೆ. 2012ರಲ್ಲಿ ಸರ್ಕಾರ ರಚನೆಯಲ್ಲಿ ಜೆಡಿಎಸ್ ನಿರ್ಣಾಯಕ ಪಾತ್ರವಹಿಸಲಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications