ಲೋಕಾಯುಕ್ತ : ವಿಳಂಬಕ್ಕೆ ರಾಜ್ಯಪಾಲರೇ ಹೊಣೆ, ಡಿವಿಎಸ್

ಲೋಕಾಯುಕ್ತರನ್ನು ನೇಮಕ ಮಾಡುವಲ್ಲಿ ಸರಕಾರ ಬೇಕಂತಲೇ ವಿಳಂಬ ನೀತಿಯನ್ನು ಅನುಸರಿಸುತ್ತಿದೆ ಎಂದು ಜಾತ್ಯತೀತ ಜನತಾದಳದ ನಾಯಕ ಎಚ್ ಡಿ ರೇವಣ್ಣ ಅವರು ಆರೋಪಿಸಿದ್ದಕ್ಕೆ ಉತ್ತರಿಸುತ್ತಿದ್ದ ಮುಖ್ಯಮಂತ್ರಿ, ಸದ್ಯಕ್ಕೆ ಚೆಂಡು ರಾಜ್ಯಪಾಲರ ಅಂಗಳದಲ್ಲಿದೆ ಎಂದು ಸದನಕ್ಕೆ ತಿಳಿಸಿದರು.
ನ್ಯಾ.ಸಂತೋಷ್ ಹೆಗ್ಡೆ ನಿವೃತ್ತರಾದ ನಂತರ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ. ಶಿವರಾಜ ಪಾಟೀಲ ಅವರನ್ನು ಲೋಕಾಯುಕ್ತರನ್ನಾಗಿ ನೇಮಿಸಲಾಗಿತ್ತು. ಆದರೆ, ಅವರ ಮೇಲೆಯೂ ಅಕ್ರಮ ನಿವೇಶನ ಕಬಳಿಕೆಯ ಆರೋಪ ಬಂದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 19ರಂದು ಅವರೂ ರಾಜೀನಾಮೆ ನೀಡಿದ್ದರು. ತದನಂತರ ಸ್ಥಾನ ತೆರವಾಗಿಯೇ ಇದೆ.
ಸದಾನಂದ ಗೌಡರ ಹೇಳಿಕೆ ಪ್ರತಿಕ್ರಿಯಿಸಿರುವ ರಾಜ್ಯಪಾಲರು, ಸರಕಾರಕ್ಕೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದೇನೆ. ಸರಕಾರ ಮತ್ತು ಮಾಧ್ಯಮಗಳು ನಂಬಿಕೆಯಿರುವ ನಿಷ್ಕಳಂಕ ವ್ಯಕ್ತಿತ್ವದ ವ್ಯಕ್ತಿಯನ್ನು ಶಿಫಾರಸು ಮಾಡಿದರು ಕ್ಷಣಾರ್ಧದಲ್ಲಿ ಅಂಕಿತ ಹಾಕುತ್ತೇನೆ. ಆದರೆ, ಅಧಿವೇಶನ ನಡೆಯುತ್ತಿರುವುದರಿಂದ ಇದಕ್ಕೆ ಹೆಚ್ಚು ಒತ್ತು ನೀಡುತ್ತಿಲ್ಲ ಎಂದಿದ್ದಾರೆ.
ನ್ಯಾ. ಶಿವರಾಜ ಪಾಟೀಲರ ರಾಜೀನಾಮೆಯ ನಂತರ ಕೇರಳ ಹೈಕೋರ್ಟಿನ ಮಾಜಿ ಮುಖ್ಯ ನ್ಯಾಯಮೂರ್ತಿ ಎಸ್ ಆರ್ ಬನ್ನೂರಮಠ ಅವರ ಹೆಸರನ್ನು ಸರಕಾರ ಲೋಕಾಯುಕ್ತ ಹುದ್ದೆಗೆ ಶಿಫಾರಸು ಮಾಡಿದೆ. ಆದರೆ, ಅವರ ಮೇಲೆ ಕೂಡ ಜ್ಯುಡಿಷಿಯಲ್ ಲೇಔಟಲ್ಲಿ ಸಾರ್ವಜನಿಕ ಸ್ವತ್ತನ್ನು ತಮ್ಮದಾಗಿಸಿಕೊಂಡಿರುವ ಆರೋಪ ಬಂದ ಹಿನ್ನೆಲೆ ಅವರ ನೇಮಕಾತಿಯನ್ನು ರಾಜ್ಯಪಾಲರು ತಿರಸ್ಕರಿಸಿದ್ದರು. ಈ ವಿಷಯ ಸದನದಲ್ಲಿ ಇಂದು ಭಾರೀ ಜಟಾಪಟಿಗೆ ಕಾರಣವಾಯಿತು.












Click it and Unblock the Notifications