ಲಕ್ಷ ರೂ ಲಂಚಕ್ಕೆ ಬಾಯ್ಬಿಟ್ಟ ಇನ್ಸ್‌ಪೆಕ್ಟರ್ ವಾಸುದೇವ ನಾಯಕ್

ತಮಿಳುನಾಡು ಮೂಲದ ಅರ್ಶದ್ ಷರೀಫ್ ಎಂಬುವರ ಎರಡು ಲಾರಿಗಳನ್ನು ಕೆಂಗೇರಿ ಇನ್‌ಸ್ಪೆಕ್ಟರ್ ವಶಪಡಿಸಿಕೊಂಡು, ಠಾಣೆಯ ಆವರಣದಲ್ಲಿರಿಸಿದ್ದರು. ಅವುಗಳನ್ನು ಬಿಡುಗಡೆ ಮಾಡುವಂತೆ ಲಾರಿ ಮಾಲೀಕರು ಕೇಳಿದಾಗ ರೂ 2 ಲಕ್ಷ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಅರ್ಶದ್ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ದೂರು ನೀಡಿದ ಬಳಿಕ ಮತ್ತೆ ವಾಸುದೇವ ನಾಯಕ್ ಅವರನ್ನು ಲಾರಿ ಮಾಲೀಕರು ಸಂಪರ್ಕಿಸಿದ್ದರು. ಆಗ 1.5 ಲಕ್ಷ ರೂಪಾಯಿ ನೀಡಿದರೆ ಲಾರಿಗಳನ್ನು ಬಿಡುಗಡೆ ಮಾಡುವುದಾಗಿ ಹೇಳಿದ್ದರು. ಶನಿವಾರವೇ ಹಣ ತಲುಪಿಸುವಂತೆಯೂ ಸೂಚಿಸಿದ್ದರು. ದೂರು ಮತ್ತು ನಂತರದ ಮಾತುಕತೆ ವಿವರಗಳನ್ನು ಪರಿಶೀಲಿಸಿದ ಬೆಂಗಳೂರು ನಗರ ಲೋಕಾಯುಕ್ತ ಪೊಲೀಸರು, ಆರೋಪಿಯ ಬಂಧನಕ್ಕೆ ಕಾರ್ಯತಂತ್ರ ರೂಪಿಸಿದರು.
ಕಳ್ಳಗಂಟು ಸಮೇತ ಮಧ್ಯವರ್ತಿ ಪರಾರಿ: ಶನಿವಾರ ಸಂಜೆ ರೂ 1.25 ಲಕ್ಷದೊಂದಿಗೆ ಅರ್ಶದ್ ಕೆಂಗೇರಿ ಠಾಣೆಗೆ ಹೋದರು. ಆಗ, ಅಲ್ಲೇ ಇದ್ದ ಗಣೇಶ್ ನಾಯಕ್ ಎಂಬುವರ ಬಳಿ ಅದನ್ನು ನೀಡುವಂತೆ ಇನ್‌ಸ್ಪೆಕ್ಟರ್ ಸೂಚಿಸಿದರು. ಅವರ ಸೂಚನೆಯಂತೆ ಲಾರಿ ಮಾಲೀಕರು ಮಧ್ಯವರ್ತಿಗೆ ಹಣ ನೀಡಿದರು. ತಕ್ಷಣವೇ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು, ವಾಸುದೇವ ನಾಯಕ್ ಅವರನ್ನು ಬಂಧಿಸಿದರು.
ಈ ನಡುವೆಯೇ ಗಣೇಶ್ ನಾಯಕ್ ಹಣದೊಂದಿಗೆ ಪರಾರಿಯಾದರು. ತಕ್ಷಣವೇ ಲೋಕಾಯುಕ್ತ ಪೊಲೀಸರು ಆತನನ್ನು ಬೆನ್ನಟ್ಟಿ ಹೋದರೂ ಕೈಗೆ ಸಿಗಲಿಲ್ಲ. ಬಳಿಕ ಮಧ್ಯವರ್ತಿಯ ಬಗ್ಗೆ ಆರೋಪಿ ಇನ್‌ಸ್ಪೆಕ್ಟರ್ ಬಳಿ ವಿಚಾರಣೆ ನಡೆಸಿದರು. ಗಣೇಶ್ ನಾಯಕ್ ತಮ್ಮ ಊರಿನವನೇ ಆಗಿದ್ದು, ಪ್ರಕರಣವೊಂದರ ತನಿಖೆಗೆ ಸಹಾಯ ಪಡೆಯಲು ಕರೆತಂದಿರುವುದಾಗಿ ವಾಸುದೇವ ನಾಯಕ್ ತಿಳಿಸಿದ್ದಾರೆ.












Click it and Unblock the Notifications